ಸಿಯಾಚಿನ್ ಯುದ್ಧಭೂಮಿಗೆ ನಾಗರಿಕರ ಚಾರಣ ಅವಕಾಶ ಮೊದಲ ಸಾಹಸಿ ತಂಡದದಲ್ಲಿ ಇಬ್ಬರು ಕನ್ನಡಿಗರು

0
120

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಉಪ್ಪುಂದ : ಕೇಂದ್ರ ಸರ್ಕಾರ ಲಡಾಖನ್ನು ಕೇಂದ್ರಾಡಳೀತ ಪ್ರದೇಶ ಎಂದು ಘೋಷಿಸಿದ ಬಳಿಕ ಭಾರತೀಯ ಸೇನೆ ಸಿಯಾಚಿನ್ ಪ್ರದೇಶವನ್ನು ನಾಗರಿಕರ ಚಾರಣ ಯಾತ್ರೆಗೆ ಮುಕ್ತಗೊಳಿಸಿದೆ. ಸಮುದ್ರ ಮಟ್ಟದಿಂದ 16,300 ಅಡಿ ಎತ್ತರದಲ್ಲಿರುವ ಪ್ರಪಂಚದ ಅತ್ಯುನ್ನತ ಯುದ್ಧಭೂಮಿ ಎನಿಸಿದ ಸಿಯಾಚಿನ್ ನೀರ್ಗಲ್ಲು ಮೆಟ್ಟಿಬಂದ ಮೊತ್ತಮೊದಲ ನಾಗರಿಕ ಚಾರಣ ಸಾಹಸ ತಂಡದ ಏಳು ಸದಸ್ಯರಲ್ಲಿ ಬೆಂಗಳೂರಿನ ಜಯಕುಮಾರ್ ಭಕ್ತವಚಲಮ್ ಒಬ್ಬರು.ಅವರು ಮರವಂತೆ ಚಂದ್ರಶೇಖರ-ಸಿಂಗಾರಿ ಟೀಚರ್ ದಂಪತಿಯ ಪುತ್ರಿ ಯೋಗಿತಾ ಬಾಲಿಯ ಪತಿ. ನಿವೃತ್ತ ಕರ್ನಲ್ ಸುನಿಲ್ ಪೋಖ್ರಿಯಾಲ್ ಮತ್ತು ನಿವೃತ್ತ ಮೇಜರ್ ಕುಲವಂತ ಸಿಂಗ್ ಧಾಮಿ ನೇತೃತ್ವದ ತಂಡದಲ್ಲಿದ್ದ ಇನ್ನೋರ್ವ ಕನ್ನಡತಿ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರ ವ್ಯವಸ್ಥಾಪಕಿ ಮೇಘನಾ ಮೋಹನ್. ಗೋವಾದ ತುಷಾರ್ ಜೋಗಳೇಕರ್, ಪುಣೆಯ ಹರ್ಷ ಮುತಾ ಮತ್ತು ನವದೆಹಲಿಯ ಅಮೃತ್‍ಕೌರ್ ಗ್ರೋವರ್ ಉಳಿದ ಮೂವರು.

ಸಾಹಸ ಪ್ರವಾಸೋದ್ಯಮ ಸಂಘಟಿಸುವ ನವದೆಹಲಿಯ ರಾಷ್ಟ್ರೀಯ ಸಾಹಸಕಾರ್ಯ ಪ್ರತಿಷ್ಠಾನದ ಮೂಲಕ ಸಿಕ್ಕ ಮೊದಲ ಅವಕಾಶವನ್ನು ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸುವ ಭಾರತೀಯ ಯೋಧರ ಬದುಕಿನ ಪ್ರತ್ಯಕ್ಷ ಅರಿವು, ಅನುಭವ ಪಡೆಯಲು ಇವರು ಬಳಸಿಕೊಂಡರು. ಸರ್ಕಾರೇತರ ನಾಗರಿಕ ಸಂಸ್ಥೆ ಸಂಘಟಿಸಿದ ಮೊದಲ ಈ ಯಾತ್ರೆಯನ್ನು ಸಿಯಾಚಿನ್-ಯೋಧರ ಮಾರ್ಗ ಎಂದು ಕರೆಯಲಾಗಿತ್ತು.

ತಿಂಗಳ ಕಾಲ ಕಠಿಣ ದೈಹಿಕ ಮತ್ತು ಮಾನಸಿಕ ಪರೀಕ್ಷೆ ಹಾಗೂ ತರಬೇತಿ ಪಡೆದ ಈ ತಂಡ ಮಾರ್ಗದರ್ಶಿಯ ಜತೆಗೆ ಸಪ್ಟಂಬರ್ 16ರಂದು ಆರಂಭಿಕ ನೆಲೆ ತಲಪಿ ಅಲ್ಲಿನ ಶಾಲೆಯಲ್ಲಿ ಸೈನಿಕರಿಂದ ಮಾರ್ಗದರ್ಶನ ಪಡೆದು 25ರಂದು ಆರೋಹಣ ಆರಂಭಿಸಿತು.
ಅಲ್ಲಿಂದ ಸಿಯಾಚಿನ್ ನೀರ್ಗಲ್ಲಿಗೆ 60 ಕಿಲೋಮೀಟರು ದೂರ; ನೀರ್ಗಲ್ಲಿನ ಏರು ದಾರಿಯಲ್ಲಿ ಹವಾಮಾನ ವೈಪರೀತ್ಯದ ನಡುವೆ ಅತ್ಯಂತ ಕಠಿಣ ಪಯಣ; ದಿನಕ್ಕೆ ಸರಾಸರಿ 12 ಕಿಲೋಮೀಟರು ಕ್ರಮಿಸುತ್ತ ನಾಲ್ಕು ದಿನಗಳ ಬಳಿಕ ತಂಡ ಅಂತಿಮ ಗುರಿಯಾದ ಕುಮಾರ ನೆಲೆ ಎಂಬ ಬ್ರಿಗೇಡ್ ಹೆಡ್‍ಕ್ವಾರ್ಟರ್ ತಲಪಿ ಸಂಭ್ರಮ ಆಚರಿಸಿತು. ಅಲ್ಲಿ ಭಾರತೀಯ ಸೈನಿಕರ ಜತೆ ಒಂದು ದಿನ ಮತ್ತು ಒಂದು ರಾತ್ರಿ ಕಳೆದು ನಮ್ಮ ವೀರ ಜವಾನರು ಚಳಿಗಾಲದಲ್ಲಿ -40 ರಿಂದ -70 ಸಿ ಡಿಗ್ರಿಗೆ ಕುಸಿಯುವ, ಆಹಾರ, ವಸತಿ, ಸಂಚಾರ ಎಲ್ಲವೂ ಸವಾಲಾಗಿರುವ ಭೂಪ್ರದೇಶದÀಲ್ಲಿ ಹವಾಗುಣವನ್ನೂ, ಶತ್ರು ದಾಳಿಯ ಸಂಭಾವ್ಯತೆಯನ್ನೂ ಎದುರಿಸುತ್ತ ನಿರಂತರ ಕಟ್ಟೆಚ್ಚರದಲ್ಲಿ ನಡೆಸುವ ದೇಶರಕ್ಷಣೆಯ ಕಾಯಕವನ್ನು ಹತ್ತಿರದಿಂದ ಕಂಡಿತು. ಮರುದಿನ ಮರುಪಯಣ ಆರಂಭಿಸಿ, ಅಕ್ಟೋಬರ್ 4ರಂದು ಮೂಲ ನೆಲೆ ಸೇರಿತು.

ಎಲ್ಲ ಸದಸ್ಯರೂ ಸದೃಢರೂ, ಉತ್ಸಾಹಿಗಳೂ ಆಗಿದ್ದರಿಂದ ಪಯಣದಲ್ಲಿ ತೊಂದರೆ ಎದುರಾಗಲಿಲ್ಲ. ಇಡೀ ಪಯಣ ಅತ್ಯಂತ ರೋಚಕ ಅನುಭವ ನೀಡಿತು. ಎಲ್ಲಕ್ಕಿಂತ ಮಿಗಿಲಾಗಿ ಭಾರತೀಯ ಸೈನಿಕರ ಬಗೆಗಿನ ಗೌರವ ನೂರ್ಮಡಿಯಾಯಿತು. – ಜಯಕುಮಾರ್.

ಜಯಕುಮಾರ್ ಮೆಕ್ಯಾನಿಕಲ್ ಎಂಜಿನಿಯರ್. ಬ್ಯಾಂಕ್‍ನಲ್ಲಿ ಉನ್ನತ ಹುದ್ದೆ ನಿರ್ವಹಿಸಿದ್ದ ಅವರು ಈಗ ತನ್ನದೇ ಫಿನ್Àಟೆಕ್ ಕಂಪನಿಯ ಸ್ಥಾಪಕ. 2018ರ ಜೂನ್‍ನಲ್ಲಿ ಎವರೆಸ್ಟ್ ಬೇಸ್ ಕ್ಯಾಂಪ್‍ಗೆ ಚಾರಣ ನಡೆಸಿದ್ದರು. 2019ರ ಜೂನ್‍ನಲ್ಲಿ ರಷ್ಯಾದಲ್ಲಿ ಎಕ್ಸಿಲರೇಟೆಡ್ ಫ್ರೀ ಫಾಲ್ ಸ್ಕೈಡೈವಿಂಗ್ ತರಬೇತಿ ಪಡೆದು ಸ್ಕೈಡೈವ್ ಮಾಡುವ ಮೂಲಕ ಎ ಅರ್ಹತಾ ಪತ್ರ ಸಂಪಾದಿಸಿಕೊಂಡಿದ್ದಾರೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)