ವಂಡ್ಸೆ : ಎನ್.ಆರ್.ಎಲ್.ಎಂ ರಾಜ್ಯ ತಂಡ ವಂಡ್ಸೆಗೆ ಭೇಟಿ – ಉಡುಪು ತಯಾರಿಕಾ ಘಟಕ ಸ್ಥಾಪನೆ ಬಗ್ಗೆ ಚರ್ಚೆ

0
148

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (9) ಸಮ್ಮತ (1) ಅಸಮ್ಮತ (1) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಮಂತ್ರಾಲಯವು ಎಸ್.ಜಿ.ಎಸ್ ವೈ ಯೋಜನೆಯನ್ನು ಪುನರ್ ರಚಿಸಿ ಆಜೀವಿಕ ಎನ್.ಆರ್.ಎಲ್.ಎಂ (ನ್ಯಾಷನಲ್ ರೂರಲ್ ಲೈವ್ಲಿ ಹುಡ್ ಮಿಷನ್) ಅನ್ವಯ ರಾಜ್ಯ ಸರ್ಕಾರವು ರಾಜ್ಯದಲ್ಲಿ ಆಜೀವಿಕ ಯೋಜನೆಯನ್ನು “ಸಂಜೀವಿನಿ” ಹೆಸರಿನಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ (ಕೆ.ಎಸ್.ಆರ್.ಎಲ್.ಪಿ.ಎಸ್) ಮೂಲಕ ಹಂತ ಹಂತವಾಗಿ ರಾಜ್ಯದಲ್ಲಿ ಜಾರಿಗೊಳಿಸಲಾಗುತ್ತಿದೆ. ಈ ಯೋಜನೆಯಡಿ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿ ಮಹಿಳಾ ಸಂಘಗಳ ರಚಿಸಿ, ನಂತರ ಒಕ್ಕೂಟಗಳನ್ನಾಗಿ ರೂಪಿಸಿ, ಸಾಲ ಸೌಲಭ್ಯ ನೀಡಿ ಸ್ವ ಉದ್ಯೋಗಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಕುಂದಾಪುರ ತಾಲೂಕಿನ 10 ಗ್ರಾಮ ಪಂಚಾಯತ್‍ಗಳಲ್ಲಿ ಈ ಒಕ್ಕೂಟ ರಚನೆ ಮಾಡಲಾಗುತ್ತಿದ್ದು, ವಂಡ್ಸೆ ಗ್ರಾಮ ಪಂಚಾಯತ್ ಕೂಡ ಒಂದಾಗಿದೆ.
ವಂಡ್ಸೆ ಗ್ರಾಮ ಪಂಚಾಯತ್ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಸ್ವತಂತ್ರ್ಯವಾಗಿ ಸ್ವಾವಲಂಬನಾ ಎನ್ನುವ ಹೊಲಿಗೆ ತರಬೇತಿ ಕೇಂದ್ರವನ್ನು ಸ್ಥಾಪಿಸಿ, ಆಸಕ್ತ ಮಹಿಳೆಯರಿಗೆ ಉಚಿತ ತರಬೇತಿ ನೀಡುತ್ತಿರುವುದನ್ನು ಮನಗಂಡ ಎನ್.ಆರ್.ಎಲ್.ಎಂನ ರಾಜ್ಯದ ಮುಖ್ಯಸ್ಥರು ಜು.10ರಂದು ವಂಡ್ಸೆ ಗ್ರಾಮ ಪಂಚಾಯತ್‍ಗೆ ಭೇಟಿ ನೀಡಿದರು.

ಸ್ವಾವಲಂಬನಾ ಕೇಂದ್ರದ ಕಾರ್ಯ ವೈಖರಿ ಗಮನಿಸಿದ ಎನ್.ಆರ್.ಎಲ್.ಎಂ ರಾಜ್ಯ ತಂಡ ಒಕ್ಕೂಟಗಳ ರಚಿಸಿ ಆ ಮೂಲಕ ಉಡುಪು ತಯಾರಿಕಾ ಘಟಕ ಸ್ಥಾಪಿಸಲು ಅವಕಾಶಗಳಿವೆ. ಘಟಕದಲ್ಲಿ ಜಿ.ಪಂ.ಬೇಡಿಕೆ, ಆರೋಗ್ಯ ಇಲಾಖೆಯ ಯೂನಿಫಾರಂ, ಸರ್ಜರಿ ಮಾಸ್ಕ್, ಸ್ಕೂಲ್ ಯೂನಿಫಾರಂ ಇತ್ಯಾದಿಗಳ ಬೇಡಿಕೆ ಪಡೆಯಲು ಸಾಧ್ಯತೆಗಳಿವೆ. ಈ ಯೋಜನೆಯಲ್ಲಿ ವೈಯಕ್ತಿಕ ಸಾಲ, ಗುಂಪು ಸಾಲ, ಸುತ್ತು ನಿಧಿ ರೂಪದಲ್ಲಿ ಸಾಲ ಸೌಲಭ್ಯ ಕಡಿಮೆ ಬಡ್ಡಿಯಲ್ಲಿ ಸಿಗುತ್ತಿದ್ದು, ಗರಿಷ್ಠ 30 ಲಕ್ಷದ ತನಕ ಸಾಲಸೌಲಭ್ಯ ಸಿಗುತ್ತಿದೆ. ಇದೇ ಯೋಜನೆಯಲ್ಲಿ ಜಂಟಿ ಬಾಧ್ಯತಾ ಗುಂಪು (ಜೆಎಲ್‍ಜಿ) ರಚನೆಗೂ ಅವಕಾಶಗಳಿವೆ. ಇದರಲ್ಲಿ ಬೇರೆ ಗ್ರಾಮದವರು ಕೂಡಾ ಸೇರಬಹುದು ಎಂದು ಅಧಿಕಾರಿಗಳು ವಿವರಿಸಿದರು.

ಎನ್.ಆರ್.ಎಲ್.ಎಂ ರಾಜ್ಯ ಕಾರ್ಯಕ್ರಮ ವ್ಯವಸ್ಥಾಪಕ ಎಂ.ಕೆ.ಆಲಿ ನೇತೃತ್ವದ ತಂಡದಲ್ಲಿ ಎನ್.ಆರ್.ಎಲ್.ಎಂ ಉಡುಪಿ ಜಿಲ್ಲೆ ಯೋಜನಾ ನಿರ್ದೇಶಕಿ ಎನ್.ಭಾರತಿ, ಸಹಾಯಕ ಯೋಜನಾಧಿಕಾರಿ ಜೆಮ್ಸ್ ಡಿಸಿಲ್ವಾ, ಜಿಲ್ಲಾ ಸಮಾಲೋಚಕ ಪಾಂಡುರಂಗ ಕೆ ಇದ್ದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಸ್ವಾವಲಂಬನಾ ಕೇಂದ್ರದ ಬಗ್ಗೆ ವಿವರಿಸಿ, ಸ್ವಾವಲಂಬನಾ ಕೇಂದ್ರದಲ್ಲಿ ಈಗಾಗಲೇ 46 ಮಂದಿ ಮಹಿಳೆಯರು ಹೊಲಿಗೆ ತರಬೇತಿ ಪಡೆದಿದ್ದು ಉದ್ಯೋಗ ಆರಂಭಿಸಲು ಚಿಂತನೆ ನಡೆಸಿದ್ದಾರೆ. ಅದರಲ್ಲಿ 20 ಜನ ಸ್ವ ಉದ್ಯಮ ಘಟಕ ನಿರ್ಮಾಣವಾದರೆ ಅದರಲ್ಲಿ ಕೆಲಸ ಮಾಡಲು ಸಿದ್ಧರಿದ್ದಾರೆ. ತಾಲೂಕಿನ ವಿವಿಧೆಡೆಗಳಿಂದ ಹೊಲಿಗೆ ತರಬೇತಿಗೆ ಬೇಡಿಕೆ ಬರುತ್ತಿದೆ. ಯಾವುದೇ ಕೈಗಾರಿಕೆಗಳು ಇಲ್ಲದ ಇಲ್ಲಿ ಉದ್ಯೋಗ ಘಟಕ ಸ್ಥಾಪನೆಯಾದರೆ ಮಹಿಳಾ ಸಬಲೀಕರಣಕ್ಕೆ ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ರೂಪಾ ಗೋಪಿ, ಎಸ್.ಎಲ್.ಆರ್.ಎಂ.ಮೇಲ್ವಿಚಾರಕಿ ವಿಜಯಲಕ್ಷ್ಮೀ ಉಪಸ್ಥಿತರಿದ್ದರು.

ವರದಿ : ನಾಗರಾಜ ವಂಡ್ಸೆ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (9) ಸಮ್ಮತ (1) ಅಸಮ್ಮತ (1) ಖಂಡಿಸುವೆ (0) ಅಭಿಪ್ರಾಯವಿಲ್ಲ (0)