ಮಹಿಳೆ ಬುದ್ಧಿವಂತಳೂ, ದೂರದರ್ಶಿಯಾದಾಗ ಮನೆ ಉದ್ಧಾರವಾಗುತ್ತದೆ : ವೀರೇಂದ್ರ ಹೆಗ್ಗಡೆ

0
31

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಉಪ್ಪುಂದ : ಮಹಿಳೆಯರು ಮನೆ ಮತ್ತು ಕುಟುಂಬದ ಪ್ರಧಾನ ಭಾಗ. ಮಹಿಳೆ ಬುದ್ಧಿವಂತಳೂ, ದೂರದರ್ಶಿಯೂ, ಹೊಣೆಗಾರಳೂ ಆದರೆ ಮನೆ ಉದ್ಧಾರವಾಗುತ್ತದೆ. ಅವರಿಗೆ ಅವುಗಳ ಜತೆಗೆ ಸಮಾಜದಲ್ಲಿ ಗೌರವ, ಸ್ಥಾನಮಾನ ಮತ್ತು ಹೊಣೆಗಾರಿಕೆ ದೊರಕಿಸಿಕೊಡುವುದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಮುಖ ಗುರಿಗಳಲ್ಲಿ ಒಂದು ಎಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಅವರು ತ್ರಾಸಿಯ ಕೊಂಕಣಿ ಖಾರ್ವಿ ಸಮುದಾಯ ಭವನದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೈಂದೂರು ತಾಲ್ಲೂಕು ಕೇಂದ್ರ ಒಕ್ಕೂಟದ ಪದಗ್ರಹಣ ಹಾಗೂ ವಿಶೇಷ ಚೇತನರಿಗೆ ಸಲಕರಣೆಗಳ ವಿತರಣೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಒಂದು ಕಾಲದಲ್ಲಿ ಕಿತ್ತುತಿನ್ನುವ ಬಡತನ ಅನುಭವಿಸುತ್ತಿದ್ದ ಬೈಂದೂರು ಪರಿಸರದ ಜನರು ಈಗ ಶಿಕ್ಷಣ ಪಡೆದು ಉದ್ಯೋಗ, ಸ್ವೋದ್ಯೋಗ ನಡೆಸುತ್ತ ಉತ್ತಮ ಬದುಕು ರೂಪಿಸಿಕೊಂಡಿದ್ದಾರೆ. ಇದಕ್ಕೆ ಸರಕಾರದ ವಿವಿಧ ಯೋಜನೆಗಳನ್ನು ಬಳಸಿಕೊಂಡಿರುವುದು ಎಷ್ಟು ಕಾರಣವೋ, ಶ್ರಿ ಕ್ಷೇತ್ರದ ಗ್ರಾಮೀಣಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳೂ ಅಷ್ಟೇ ಕಾರಣ. ಯೋಜನೆಯ ಸ್ವಸಹಾಯ ಸಂಘಗಳು ಸುಖ, ಸಂಪತ್ತು ನೀಡಲಾರರು. ಅವು ಮಾಯ, ಮಂತ್ರ, ಪವಾಡಗಳಿಂದ ಬಾರವು. ತಾನು ಕೆಲಸ ಮಾಡಿದರೆ ಮಾತ್ರ ಯಶಸ್ಸು ಸಾಧ್ಯ ಎನ್ನುವುದನ್ನು ಕಲಿಸುತ್ತವೆ. ಪಡೆದಿರುವುದನ್ನು ಬಳಸಲು ತಿಳಿಯದಿದ್ದರೆ ಪಡೆದದ್ದೆಲ್ಲ ವ್ಯರ್ಥವಾಗುತ್ತವೆ. ಸಂಘಗಳು ಶಿಸ್ತು, ನಿಯತ್ತು, ವ್ಯವಹಾರ, ಉಳಿತಾಯ ಮತ್ತು ಹಣ ನಿರ್ವಹಣೆಯ ಕೌಶಲವನ್ನು ರೂಢಿಸುತ್ತವೆ. ಸಂಘಗಳಲ್ಲಿ ತೊಡಗಿಕೊಂಡಿರುವ ಮಹಿಳೆಯರಿಗೆ ಅಕ್ಷರ ಜ್ಞಾನ, ಸಂಖ್ಯಾ ಜ್ಞಾನ ಬಂದಿದೆ. ಇಲ್ಲಿನ ಜನರಲ್ಲಿ ಆಗಿರುವ ಪರಿವರ್ತನೆಗೆ ಇವೆಲ್ಲ ಕಾರಣ. ಯೋಜನೆಯನ್ನು ಇನ್ನಷ್ಟು ಬಳಸಿಕೊಳ್ಳಿ ಎಂದು ಅವರು ಹೇಳಿದರು.

ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ತಾಲ್ಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ, ಕೊಂಕಣಿ ಖಾರ್ವಿ ಸಮುದಾಯ ಭವನದ ಅಧ್ಯಕ್ಷ ಕೆ. ಬಿ. ಖಾರ್ವಿ, ಕುಂದಾಪುರ ಐಡಿಬಿಐ ಬ್ಯಾಂಕ್ನ ಸಹಾಯಕ ಮಹಾ ಪ್ರಬಂಧಕಿ ಶ್ರೀಜಾ ಎಸ್. ಉಪಸ್ಥಿತರಿದ್ದರು.

ಕೇಂದ್ರ ಒಕ್ಕೂಟದ ನಿರ್ಗಮನ ಅಧ್ಯಕ್ಷ ಎಚ್.ಎಂ.ಕೃಷ್ಣ ಪೂಜಾರಿ ನೂತನ ಅಧ್ಯಕ್ಷ ರಘುರಾಮ ಕೆ. ಪೂಜಾರಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಯೋಜನೆಯ ಜನಮಂಗಲ ಕಾರ್ಯಕ್ರಮದಿಂದ 22 ಜನ ವಿಶೇಷ ಚೇತನರಿಗೆ ಅಗತ್ಯ ಸಲಕರಣೆಗಳನ್ನು ವಿತರಿಸಲಾಯಿತು.

ಅಕ್ಷತಾ ಪ್ರಾರ್ಥನೆ ಹಾಡಿದರು. ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಎಲ್ಎಚ್. ಮಂಜುನಾಥ ಸ್ವಾಗತಿಸಿದರು. ತಾಲ್ಲೂಕು ಯೋಜನಾಧಿಕಾರಿ ಪಿ. ಶಶಿರೇಖಾ ವಂದಿಸಿದರು. ಬಿ. ಸುಂದರ ನಿರೂಪಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)