ಕರಾವಳಿ; ಚಂಡಮಾರುತದ ಎಚ್ಚರಿಕೆ, ಸಮುದ್ರಕ್ಕಿಳಿಯದಂತೆ ಸೂಚನೆ

0
192

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಮಂಗಳೂರು, ಜೂನ್ 10: ಮುಂಗಾರು ಮಳೆಯ ನಿರೀಕ್ಷೆಯಲ್ಲಿದ್ದ ಕರಾವಳಿಯ ಜನರಲ್ಲಿ ಭೀತಿ ಮನೆ ಮಾಡಿದೆ. ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಇನ್ನಷ್ಟು ತೀವ್ರಗೊಂಡು ಚಂಡಮಾರುತವಾಗಿ ಪರಿವರ್ತನೆಗೊಂಡಿದೆ. ಇದರ ಪರಿಣಾಮ ಲಕ್ಷದ್ವೀಪ, ಕೇರಳ, ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಭಾರೀ ಗಾಳಿ-ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಪ್ರಸ್ತುತ ನಿರ್ಮಾಣವಾಗಿರುವ ವಾಯುಭಾರ ಕುಸಿತ 36 ಗಂಟೆಗಳಲ್ಲಿ ಚಂಡಮಾರುತದ ಸ್ವರೂಪ ಪಡೆಯಲಿದ್ದು, ವಾಯವ್ಯ ದಿಕ್ಕಿನತ್ತ ಚಲಿಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಅರಬ್ಬೀ ಸಮುದ್ರದ ಮಧ್ಯಭಾಗದಿಂದ ನೈಋತ್ಯ ಲಕ್ಷದ್ವೀಪ ಭಾಗದಲ್ಲಿ ಕಡಿಮೆ ಒತ್ತಡ ಪ್ರದೇಶ ನಿರ್ಮಾಣವಾಗಿ ಚಂಡಮಾರುತವಾಗಿ ಪರಿವರ್ತನೆಯಾಗಿದೆ. ಮುಂದಿನ 24 ಗಂಟೆಗಳಲ್ಲಿ ಕೇರಳ ಹಾಗೂ ಕರ್ನಾಟಕ ಕರಾವಳಿ ಪ್ರದೇಶಗಳಲ್ಲಿ ಭಾರಿ ಗಾಳಿ ಸಹಿತ ಮಳೆ ಬೀಳುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಸಮುದ್ರ ತೀರದಲ್ಲಿ ಗಾಳಿಯ ರಭಸ ಹೆಚ್ಚಿದ್ದು, ಈ ಹಿನ್ನೆಲೆಯಲ್ಲಿ ಸಮುದ್ರ ತೀರದಲ್ಲಿ ಭಾರಿ ಗಾತ್ರದ ಅಲೆಗಳು ಏಳಲಿವೆ. ಆದ್ದರಿಂದ ಮೀನುಗಾರರಿಗೆ ಸಮುದ್ರಕ್ಕೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ.

ಈಗಾಗಲೇ ಕರಾವಳಿಯಲ್ಲಿ ನಿನ್ನೆ ಮಧ್ಯಾಹ್ನದಿಂದ ಭಾರಿ ಗಾಳಿ ಬೀಸುತ್ತಿದೆ. ಕೇರಳಕ್ಕೆ ಜೂನ್ 8 ರಂದು ಮುಂಗಾರು ಮಳೆ ಪ್ರವೇಶವಾಗಿದ್ದು, ಭಾರಿ ಮಳೆ ಸುರಿಯುತ್ತಿದೆ. ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಸೃಷ್ಟಿಯಾಗಿರುವುದರಿಂದ ಕರಾವಳಿಯಲ್ಲಿ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಸಮುದ್ರ ಪ್ರಕ್ಷುಬ್ಧವಾಗಿದ್ದು, ಅಲೆಗಳ ಅಬ್ಬರ ತೀವ್ರವಾಗಿರುವ ಹಿನ್ನೆಲೆಯಲ್ಲಿ ಸಮುದ್ರ ತೀರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮಂಗಳೂರಿನಲ್ಲಿ ಉಳ್ಳಾಲ, ಸೋಮೇಶ್ವರ, ಪಣಂಬೂರು ಸೇರಿದಂತೆ ಬೀಚ್‌ಗಳಲ್ಲಿ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದ್ದು, ಮೀನುಗಾರರು ಕಡಲಿಗೆ ಇಳಿಯದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಸೂಚನೆ ರವಾನಿಸಲಾಗಿದೆ

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)