ಹಿಂದುತ್ವ ಜಾಗೃತವಾಗಿದ್ದೇ ಬಿಜೆಪಿ ಗೆಲುವಿಗೆ ಕಾರಣ – ಪೇಜಾವರ ಶ್ರೀ

0
685

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಉಡುಪಿ : ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಕೋಮುವಾದಿ ಎಂದು ಹೇಳಿಕೊಂಡು ಬಿಜೆಪಿಯನ್ನು ಸೋಲಿಸಲು ಎಲ್ಲಾ ಪಕ್ಷಗಳು ಪಣತೊಟ್ಟವು. ಈ ಬೆಳವಣಿಗೆಯಿಂದ ಹಿಂದೂಗಳಲ್ಲಿ ಹಿಂದುತ್ವ ಜಾಗೃತವಾಯ್ತು. ಇದೇ ಚುನಾವಣೆಯಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು ತಂದುಕೊಟ್ಟಿತು ಎಂದು ಪೇಜಾವರ ಶ್ರೀ ತಿಳಿಸಿದ್ದಾರೆ.

ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಹಿಂದೂ ವಿರೋಧ ದೃಷ್ಟಿಕೋನ ಹೆಚ್ಚಾಯಿತು. ಪ್ರಚಾರ ಸಂದರ್ಭ ಅಭಿವೃದ್ಧಿ ವಿಚಾರ ಚರ್ಚೆಯಾಗಿಲ್ಲ. ಇನ್ನು ಮುಂದಾದರೂ ಅಭಿವೃದ್ಧಿ ವಿಚಾರ ಮಾತನಾಡಿ. ಹಿಂದೂ ವಿಚಾರ ತೆಗೆದರೆ ಬಹುಸಂಖ್ಯಾತರು ಜಾಗೃತರಾಗುತ್ತಾರೆ ಎಂದರು. ಜೊತೆಗೆ ಪ್ರತ್ಯೇಕ ಹೋರಾಟ ಮಾಡಿದ್ದಿದ್ದರೆ ವಿಪಕ್ಷಗಳು ಹೆಚ್ಚಿನ ಸೀಟು ಗೆಲ್ಲುತ್ತಿದ್ದವು. ನನಗೆ ದೇಶದ ಎಲ್ಲಾ ಪಕ್ಷಗಳು ಒಂದೇ. ಚುನಾವಣೆಯಲ್ಲಿ ಎಲ್ಲಾ ಪಕ್ಷಗಳು ಸ್ವತಂತ್ರವಾಗಿ ಹೋರಾಟ ಮಾಡಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟರು.

ದೆಹಲಿಯಲ್ಲಿ ಮೋದಿ ಪ್ರಮಾಣ ವಚನ ಕಾರ್ಯಕ್ರಮ ಬಹಳ ಚೆನ್ನಾಗಿ ನಡೆದಿದೆ. ಜನರಲ್ಲಿ ಮೋದಿಯ ಬಗ್ಗೆ ಅಭಿಮಾನ ತುಂಬಿ ತುಳುಕುತ್ತಿತ್ತು. ಎರಡು ಬಾರಿಯೂ ಮೋದಿ ಅವರ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಮೋದಿ ಸರಕಾರದಿಂದ ಅಭಿವೃದ್ಧಿ ಕಾರ್ಯಗಳ ನಿರೀಕ್ಷೆಯಿದೆ. ದೇಶದ ರಕ್ಷಣೆ, ಕಾಶ್ಮೀರದ ವಿಚಾರ ಬಗೆಹರಿಯಬೇಕು. ಯುವಕರಿಗೆ ಉದ್ಯೋಗ ಸೃಷ್ಟಿಯಾಗಬೇಕು. ಕೃಷಿಗೆ ಅಡ್ಡಿಯಾಗದಂತೆ ಉದ್ಯಮ ಸ್ಥಾಪನೆಯಾಗಲಿ ಎಂದು ಅವರು ಅಭಿನಂದಿಸಿದರು.

ಅಯೋಧ್ಯೆಯಲ್ಲಿ ರಾಮ ಮಂದಿರ ಸ್ಥಾಪನೆ ವಿಚಾರವಾಗಿ ಮಾತನಾಡಿದ ಅವರು, ರಾಮಮಂದಿರ ನಿರ್ಮಾಣ ಆಗಲೇಬೇಕು. ಬಿಜೆಪಿಗೆ ಈ ಬಾರಿ ದೊಡ್ಡ ಸಂಖ್ಯೆ ಬಂದಿದೆ. ಸಂಸತ್ ನಲ್ಲಿ ಏನು ಬೇಕಾದರೂ ನಿರ್ಣಯ ಮಾಡಬಹುದು. ಸುಪ್ರೀಂ ಕೋರ್ಟಿಗಿಂತ ಪಾರ್ಲಿಮೆಂಟ್ ದೊಡ್ಡದು. ರಾಹುಲ್ ಗಾಂಧಿ ರಾಮ ಮಂದಿರ ನಿರ್ಮಾಣಕ್ಕೆ ಸಹಕಾರ ಕೊಡಬೇಕು. ಬೇಗ ರಾಮಮಂದಿರ ಆಗುವಂತೆ ತೀರ್ಮಾನ ಆಗಬೇಕು ಎಂದರು.
ಮಹಾತ್ಮಾಗಾಂಧಿ ರಾಷ್ಟ್ರಭಕ್ತರು ಮತ್ತು ರಾಷ್ಟ್ರಪುತ್ರ. ನಾಥುರಾಮ್ ಗೋಡ್ಸೆಯನ್ನು ರಾಷ್ಟ್ರಭಕ್ತ ಎಂದಿರುವುದು ರಾಷ್ಟ್ರಕ್ಕೆ ಮಾಡಿದ ದೊಡ್ಡ ಅವಮಾನ. ಈ ಹೇಳಿಕೆ ಕೊಟ್ಟವರ ಬಗ್ಗೆ ನನಗೆ ಅಸಮಾಧಾನ ಇದೆ ಎಂದು ಪೇಜಾವರ ಶ್ರೀ ಅಭಿಪ್ರಾಯಪಟ್ಟಿದ್ದಾರೆ.

ಜೊತೆಗೆ, ಭಾರತ ಗಾಂಧೀಜಿಯವರಿಂದ ಪ್ರಾರಂಭ ಆದದ್ದಲ್ಲ. ವೇದವ್ಯಾಸರು ಎಲ್ಲಾ ವಾಙ್ಮಯವನ್ನು ಆವಿರ್ಭಾವ ಮಾಡಿದವರು. ವ್ಯಾಸರಿಂದ ನಮ್ಮ ಸಂಸ್ಕೃತಿ, ಪರಂಪರೆ ರಾಷ್ಟ್ರೀಯತ್ವ ಎಲ್ಲವೂ ಜಾಗೃತವಾಗಿದೆ. ವೇದವ್ಯಾಸರೇ ರಾಷ್ಟ್ರಪಿತರು ಎಂಬುದು ನನ್ನ ಅಭಿಪ್ರಾಯ. ಮಹಾತ್ಮಾಗಾಂಧಿ ಬಗ್ಗೆ ನನಗೆ ಬಹಳ ಗೌರವ ಇದೆ ಎಂದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)