ರಾಜ್ಯದ 28 ಕ್ಷೇತ್ರಗಳಲ್ಲಿ ಮಹಾ ಸಮರದ ಮತ ಎಣಿಕೆಗೆ ಸಕಲ ಸಿದ್ಧತೆ

0
99

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೆಂಗಳೂರು, ಮೇ 21- ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಭಾರೀ ಬಿಗಿ ಭದ್ರತೆಯೊಂದಿಗೆ ಮತ ಎಣಿಕೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೇ 23ರಂದು ಎರಡು ಹಂತಗಳಲ್ಲಿ ನಡೆದಿರುವ ಮತದಾನದ ಮತ ಎಣಿಕೆ ಬೆಳಗ್ಗೆ 8 ಗಂಟೆಯಿಂದಲೇ ಆಯಾ ಮತ ಎಣಿಕೆ ಕೇಂದ್ರಗಳಲ್ಲಿ ಪ್ರಾರಂಭವಾಗಲಿದೆ.

ರಾಜ್ಯದಲ್ಲಿ ಏಪ್ರಿಲ್ 18 ಹಾಗೂ 23ರಂದು ಎರಡು ಹಂತಗಳಲ್ಲಿ ಮತದಾನ ನಡೆದಿತ್ತು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಅನಂತಕುಮಾರ್ ಹೆಗಡೆ, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪಮೊಯ್ಲಿ, ಲೋಕಸಭೆಯ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದರಾದ ಕೆ.ಎಚ್.ಮುನಿಯಪ್ಪ, ಶೋಭಾ ಕರಂದ್ಲಾಜೆ ಸೇರಿದಂತೆ 28 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 478 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಮಂಡ್ಯ ಹೊರತುಪಡಿಸಿ ಬಿಜೆಪಿ 27 ಕ್ಷೇತ್ರಗಳಲ್ಲಿ, ಕಾಂಗ್ರೆಸ್ 21 ಕ್ಷೇತ್ರಗಳಲ್ಲಿ ಹಾಗೂ ಜೆಡಿಎಸ್ 7 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದವು.ರಾಜ್ಯದಲ್ಲಿ ಶೇ.68.62ರಷ್ಟು ಮತದಾನವಾಗಿದೆ. ಕಳೆದ ಬಾರಿ ಶೇ.67.20ಯಷ್ಟು ಮತದಾನವಾಗಿತ್ತು.

ಮೊದಲಿಗೆ ಅಂಚೆ ಮತಪತ್ರಗಳನ್ನು ಎಣಿಕೆ ಮಾಡಲಾಗುತ್ತದೆ. ನಂತರ ವಿದ್ಯುನ್ಮಾನ ಮತಯಂತ್ರಗಳ ಎಣಿಕೆಯನ್ನು ಆರಂಭಿಸಲಾಗುತ್ತದೆ. ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿದ್ದು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ 14 ಟೇಬಲ್‍ಗಳಲ್ಲಿ ಮತ ಎಣಿಕೆ ನಡೆಸಲಾಗುತ್ತದೆ.

300ಕ್ಕೂ ಹೆಚ್ಚು ಮತಗಟ್ಟೆಗಳಿರುವ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚುವರಿ ಎಣಿಕೆ ಟೇಬಲ್‍ಗಳನ್ನು ವ್ಯವಸ್ಥೆ ಮಾಡಲಾಗುತ್ತದೆ. ಮತ ಎಣಿಕೆ ಕೇಂದ್ರಗಳಲ್ಲಿ ಚುನಾವಣಾ ಕಣದಲ್ಲಿರುವ ಅಭ್ಯರ್ಥಿ ಹಾಗೂ ಅವರ ಏಜೆಂಟ್‍ಗಳಿಗೂ ಮೊಬೈಲ್ ಬಳಕೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ಅಂಚೆ ಮತಪತ್ರಗಳ ಎಣಿಕೆ ಕಾರ್ಯ ನಡೆಸಲಾಗುತ್ತದೆ. ಇವಿಎಂ ಮತ ಎಣಿಕೆ ಕಾರ್ಯ ಬೆಳಗ್ಗೆ 8.30ರ ನಂತರ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ನಿಗದಿಪಡಿಸಿರುವ ಮತ ಎಣಿಕೆ ಕೊಠಡಿಗಳಲ್ಲಿ ಸಹಾಯಕ ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ನಡೆಯಲಿದೆ.

ಮತ ಎಣಿಕೆ ಮೇಲ್ವಿಚಾರಕರು, ಸಹಾಯಕರು ಹಾಗೂ ಮೈಕ್ರೋ ಅಬ್ಸರ್ವರ್ಸ್‍ಗಳನ್ನು ನೇಮಿಸಲಾಗಿದ್ದು, ಶೇ.20ರಷ್ಟು ಹೆಚ್ಚುವರಿ ಸಿಬ್ಬಂದಿಗಳನ್ನು ಕಾಯ್ದಿರಿಸಲಾಗುತ್ತಿದೆ. ಮತ ಎಣಿಕೆ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗಿದೆ.

ಭಾರತದ ಚುನಾವಣಾ ಆಯೋಗದ ನಿರ್ದೇಶನದಂತೆ ಇವಿಎಂ ಮತ ಎಣಿಕೆ ಮುಕ್ತಾಯವಾದ ನಂತರ ಪ್ರತಿ ವಿಧಾನಸಭಾ ಕ್ಷೇತ್ರವಾರು ಲಾಟರಿ ಮೂಲಕ ಐದು ಮತಗಟ್ಟೆಗಳ ವಿವಿ ಪ್ಯಾಟ್‍ಗಳನ್ನು ಆರಿಸಿ ವಿವಿ ಪ್ಯಾಟ್ ಸ್ಲಿಪ್‍ಗಳ ಎಣಿಕೆ ಕಾರ್ಯವನ್ನು ಕೈಗೊಳ್ಳಲಾಗುತ್ತದೆ. ಇದಕ್ಕೆ ಅಗತ್ಯವಿರುವ ಪಾರದರ್ಶಕ ವಿವಿ ಪ್ಯಾಟ್ ಕೌಂಟಿಂಗ್ ಬೂತ್ ಮತ್ತು ಪಿಜನ್ ಹೋಲ್ ಮೆಷ್ ವ್ಯವಸ್ಥೆ ಮಾಡಲಾಗುಗುತ್ತದೆ.

ವಿವಿ ಪ್ಯಾಟ್ ಸ್ಲಿಪ್‍ಗಳಲ್ಲಿನ ಮತ ಹಾಗೂ ಆ ಮತಗಟ್ಟೆಯ ವಿದ್ಯುನ್ಮಾನ ಮತಯಂತ್ರದಲ್ಲಿರುವ ಮತಗಳನ್ನು ತಾಳೆ ಹಾಕಲಾಗುತ್ತದೆ. ಹೀಗಾಗಿ ಫಲಿತಾಂಶ ಅಂದು ಸಂಜೆ ವೇಳೆಗೆ ಪ್ರಕಟವಾಗುವ ಸಾಧ್ಯತೆ ಇದೆ.

ಚುನಾವಣಾ ಏಜೆಂಟರು ಮತ ಎಣಿಕೆ ಕೇಂದ್ರದಲ್ಲಿ ತಮ್ಮ ಟೇಬಲ್ ಬಿಟ್ಟು ಓಡಾಡಲು ಹಾಗೂ ಗಲಾಟೆ ಮಾಡಲು ಅವಕಾಶವಿರುವುದಿಲ್ಲ. ಅಭ್ಯರ್ಥಿಗಳು, ಅಭ್ಯರ್ಥಿಗಳ ಏಜೆಂಟರು, ಮತ ಎಣಿಕೆ ಏಜೆಂಟರು ನಿಶ್ಯಬ್ಧ ಕಾಪಾಡಿಕೊಳ್ಳಬೇಕು, ಶಿಸ್ತುಬದ್ಧವಾಗಿ ವರ್ತಿಸಬೇಕು ಎಂದು ಸೂಚಿಸಲಾಗಿದೆ.

ಮತ ಎಣಿಕೆ ನಂತರವೇ ಏಜೆಂಟರನ್ನು ಹೊರ ಕಳುಹಿಸಲಾಗುವುದು. ಮತ ಎಣಿಕೆಯ ಎಲ್ಲ ಸಿಬ್ಬಂದಿಗೆ ಗುರುತಿನ ಚೀಟಿ ನೀಡಲಾಗಿದೆ. ಎಣಿಕೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ವಿಡಿಯೋ ಚಿತ್ರೀಕರಣ ಮಾಡಲಾಗುತ್ತದೆ.

ಮತ ಎಣಿಕೆ ಕೇಂದ್ರಗಳು: ಬೆಂಗಳೂರು ಉತ್ತರ- ಸೆಂಟ್‍ಜೋಸೆಫ್ ಇಂಡಿಯನ್ ಹೈಸ್ಕೂಲ್, ಬೆಂಗಳೂರು ಕೇಂದ್ರ- ಮೌಂಟ್ ಕಾರ್ಮೆಲ್ ಮಹಿಳಾ ಪಿಯು ಕಾಲೇಜು, ಬೆಂಗಳೂರು ದಕ್ಷಿಣ- ಜಯನಗರದ ಎಸ್‍ಎಸ್‍ಎಂಆರ್‍ವಿ ಪಿಯು ಕಾಲೇಜು, ಬೆಂಗಳೂರು ಗ್ರಾಮಾಂತರ- ರಾಮನಗರದ ಗೌರ್ಮೆಂಟ್ ಎಂಜಿನಿಯರಿಂಗ್ ಕಾಲೇಜು, ಚಿಕ್ಕಬಳ್ಳಾಪುರ- ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜು, ಕೋಲಾರ- ಸರ್ಕಾರಿ ಬಾಲಕರ ಪದವಿ ಕಾಲೇಜು, ಚಾಮರಾಜನಗರ- ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ಮೈಸೂರು- ಸರ್ಕಾರಿ ಮಹಾರಾಣಿ ಮಹಿಳಾ ವಾಣಿಜ್ಯ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ.

ಚಿಕ್ಕೋಡಿ-ಸಿಟಿಇ ಸೊಸೈಟಿಯ ಆರ್‍ಡಿ ಪಿಯು ಕಾಲೇಜು, ಬೆಳಗಾವಿ- ರಾಣಿ ಪಾರ್ವತಿದೇವಿ ಕಾಲೇಜು, ಬಾಗಲಕೋಟೆ- ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಿಜಾಪುರ- ಸೈನಿಕ ಶಾಲೆ, ಗುಲ್ಬರ್ಗ- ಗುಲ್ಬರ್ಗ ವಿಶ್ವವಿದ್ಯಾಲಯ, ರಾಯಚೂರು- ಎಲ್‍ವಿಡಿ ಕಾಲೇಜು ಮತ್ತು ಎಸ್‍ಆರ್‍ಪಿಎಸ್ ಪಿಯು ಕಾಲೇಜು, ಬೀದರ್- ಬಿವಿಬಿ ಕಾಲೇಜು, ಕೊಪ್ಪಳ- ಗವಿ ಸಿದ್ದೇಶ್ವರ ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು, ಬಳ್ಳಾರಿ ರಾವ್ ಬಹದ್ದೂರ್, ವೈ.ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಮತ ಎಣಿಕೆ ನಡೆಯಲಿದೆ.

ಹಾವೇರಿ- ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ಧಾರವಾಡ- ಕೃಷಿ ವಿಶ್ವವಿದ್ಯಾಲಯ, ಉತ್ತರ ಕನ್ನಡ- ಡಾ.ಎ.ವಿ.ಬಾಳಿಗ ಕಾಲೇಜು, ದಾವಣಗೆರೆ- ದಾವಣಗೆರೆ ವಿಶ್ವವಿದ್ಯಾಲಯ, ಶಿವಮೊಗ್ಗ- ಸಹ್ಯಾದ್ರಿ ಕಲಾ ಕಾಲೇಜು, ಉಡುಪಿ- ಸೆಂಟ್ ಸಿಸಿಲೀಸ್ ಹೈಸ್ಕೂಲ್, ಹಾಸನ- ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ದಕ್ಷಿಣ ಕನ್ನಡ- ಎನ್‍ಟಿಕೆ ಸೂರತ್ಕಲ್, ಚಿತ್ರದುರ್ಗ- ಗೌರ್ಮೆಂಟ್ ವಿಜ್ಞಾನ ಕಾಲೇಜು, ತುಮಕೂರು- ಸರ್ಕಾರಿ ಪಾಲಿಟೆಕ್ ಮತ್ತು ತುಮಕೂರು ವಿಶ್ವವಿದ್ಯಾಲಯ, ಮಂಡ್ಯ- ಗೌರ್ಮೆಂಟ್ ಅಟಾನಮಸ್ ಕಾಲೇಜುಗಳಲ್ಲಿ ಮತ ಎಣಿಕೆ ನಡೆಯಲಿದೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)