ಅವಧಿಗೂ ಮೊದಲೇ ಮೊಟ್ಟೆ ಒಡೆದು ಬಂದ ಕಡಲಾಮೆ ಮರಿಗಳು

0
241

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಉಪ್ಪುಂದ  : ಕಂಚುಗೋಡು ಗ್ರಾಮದ ಸನ್ಯಾಸಿಬಲೆ ಕಡಲ ತೀರದಲ್ಲಿ ಕಳೆದ ಒಂದುವರೆ ತಿಂಗಳ ಹಿಂದೆ ಪತ್ತೆಯಾಗಿದ್ದ ಅಳಿವಿನಂಚಿನಲ್ಲಿರುವ ಕಡಲಾಮೆ ಮೊಟ್ಟೆಗಳಿಂದ ಅವಧಿಗೂ ಮುನ್ನ ಮೊಟ್ಟೆ ಒಡೆದು ಮರಿಗಳು ಹೊರಬಂದಿರುವುದು ಅಚ್ಚರಿ ಮೂಡಿಸಿದೆ.
ಸಮುದ್ರದಲ್ಲಿರುವ ಆಲಿವ್ ರಿಡ್ಲೇ, ಗ್ರೀನ್ ಟರ್ಟಲ್ ಕಡಲಾಮೆಗಳು ಹೆಚ್ಚಾಗಿ ಮಾರ್ಚ್ ತಿಂಗಳಿನಲ್ಲಿ ಮೊಟ್ಟೆ ಇಡುತ್ತದೆ. 2019ರ ಮಾರ್ಚ್ 20ರಂದು 100ಕ್ಕೂ ಮಿಕ್ಕಿ ಅಳಿವಿನಂಚಿನಲ್ಲಿರುವ ಕಡಲಾಮೆ ಮೊಟ್ಟೆಗಳು ಕಂಚುಗೋಡು ಗ್ರಾಮದ ಸನ್ಯಾಸಿಬಲೆ ಕಡಲ ತೀರದಲ್ಲಿ ದೊರಕಿತ್ತು. ಕಡಲಾಮೆ ಮೊಟ್ಟೆಗಳು ಪತ್ತೆಯಾದ ತಕ್ಷಣ ಸ್ಥಳೀಯರು ಕಡಲಾಮೆ ಸಂರಕ್ಷಣೆ ಕಾರ್ಯನಿರತ ಎಫ್‍ಎಸ್‍ಎಲ್ ಇಂಡಿಯಾ ಸಂಸ್ಥೆಯ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದಾರೆ. ಎಫ್‍ಎಸ್‍ಎಲ್ ಇಂಡಿಯಾ ಸಂಸ್ಥೆಯ ಕಾರ್ಯಕರ್ತರು ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಇಲಾಖೆಯ ಅಧಿಕಾರಿಗಳ ಸಹಾಯದಿಂದ ದೊರಕಿದ ಅಪರೂಪದ ಕಡಲಾಮೆ ಮೊಟ್ಟೆಗಳ ಬೆಳವಣಿಗೆಗೆ ಹ್ಯಾಚರಿ ನಿರ್ಮಿಸಿ ಮೊಟ್ಟೆಗಳನ್ನು ಸಂರಕ್ಷಿಸಿದ್ದರು.

ಕಡಲಾಮೆ ಮೊಟ್ಟೆಯಲ್ಲಿ ಮರಿಗಳ ಪೂರ್ಣ ಬೆಳವಣಿಗೆಗೆ 52 ದಿನ ತೆಗೆದುಕೊಳ್ಳುತ್ತದೆ. ಆದರೆ ಹ್ಯಾಚರಿಯಲ್ಲಿ 46 ದಿನಕ್ಕೆ ಮೊಟ್ಟೆ ಒಡೆದು ಮರಿಗಳು ಹೊರಬಂದಿರುವ ಕಡಲಾಮೆ ಮರಿಗಳು ಸ್ಥಳೀಯರಲ್ಲಿ ಆಶ್ಚರ್ಯ ಮೂಡಿಸಿದೆ. ಬಹುತೇಕ ಮೊಟ್ಟೆಗಳಿಂದ ಮರಿಗಳು ಹೊರ ಬಂದಿದ್ದು ಕಡಲು ಶಾಂತವಾಗಿರುವ ಹೊತ್ತು ಚಂದ್ರನ ಬೆಳಕಿನಲ್ಲಿ ಮರಳಿ ಕಡಲಿಗೆ ಬಿಡಲಾಗುತ್ತದೆ.

ಸ್ಥಳೀಯರಾದ ದಾಮು ಗಣಪತಿ ಖಾರ್ವಿ, ರಾಘವೇಂದ್ರ ಖಾರ್ವಿ, ನಮೋ ಸದಾಶಿವ, ಸತೀಶ ಖಾರ್ವಿ, ಶೇಖರ ಖಾರ್ವಿ, ಶರತ್, ವಿನೋದ, ಅನಿಷ್ ಖಾರ್ವಿ, ವಿನೋದ ಖಾರ್ವಿ ಮತ್ತಿತರರು ಕಡಲಾಮೆ ಮೊಟ್ಟೆ ಸಂರಕ್ಷಣೆಯಲ್ಲಿ ಎಫ್‍ಎಸ್‍ಎಲ್ ಇಂಡಿಯಾ ಸಂಸ್ಥೆಯ ಕಾರ್ಯಕರ್ತರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಹಕರಿಸಿದ್ದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)