ವಿದ್ಯಾರ್ಥಿನಿ ಸಾವು: ಪ್ರಕರಣ ದಾಖಲಿಸಲು ಪೊಲೀಸರ ವಿಳಂಬ

0
118

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ರಾಯಚೂರು: ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ, ಅದೊಂದು ಕೊಲೆ. ಘಟನೆಗೆ ಸಂಬಂಧಿಸಿ ಈಗಾಗಲೇ ದೂರು ದಾಖಲಾಗಿದೆ. ಆದರೆ ಆರೋಪಿ ಸಂಬಂಧಿ ಪೊಲೀಸ್ ಸಿಬ್ಬಂದಿ ದೂರು ದಾಖಲಿಸಿಕೊಳ್ಳಲು ವಿಳಂಬ ಮಾಡಿದ್ದರು, ಅದರಿಂದ ತನಿಖೆ ತಡವಾಗಿದೆ ಎಂದು ಮೃತ ವಿದ್ಯಾರ್ಥಿನಿಯ ತಂದೆ ನಾಗರಾಜ್ ಮತ್ತು ತಾಯಿ ರೇಣುಕಾದೇವಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪೊಲೀಸರು ಬಂಧಿಸಿರುವ ಆರೋಪಿ ಸುದರ್ಶನ್ ಯಾದವ್ ತಮ್ಮ ಮಗಳಿಗೆ ನಿರಂತರ ಕಿರುಕುಳ ನೀಡುತ್ತಿದ್ದ. ಕಳೆದ ಆರು ತಿಂಗಳಿಂದ ಆಕೆಗೆ ತೊಂದರೆಯಾಗುತ್ತಿತ್ತು. ಮಗಳು ಕಾಲೇಜಿಗೆ ತೆರಳುವ ವೇಳೆ ಹಾಗೂ ಮನೆಯ ಬಳಿ ಸುಳಿದಾಡಿ ಆತ ಕಿರುಕುಳ ನೀಡುತ್ತಿದ್ದ ಎಂದು ಪಾಲಕರು ತಿಳಿಸಿದ್ದಾರೆ.

ಮಗಳು ಕಾಣೆಯಾದ ಬಗ್ಗೆ ಪೊಲೀಸರಿಗೆ ದೂರು ನೀಡಲು ತೆರಳಿದಾಗ ಸುದರ್ಶನ್ ಯಾದವ್ ಅವರ ಮಾವ, ನಗರ ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿ ಆಂಜನೇಯ ಕೇಸ್ ದಾಖಲಿಸಿಕೊಳ್ಳಲು ನಿರಾಕರಿಸಿದ್ದರು. ಅದ್ದರಿಂದ ತನಿಖೆ ವಿಳಂಬವಾಗಿದೆ. ಮಗಳ ಶವ ಪತ್ತೆಗೂ ಮೊದಲೇ ಆಂಜನೇಯ ತಮ್ಮ ಮಗಳ ಮೊಬೈಲ್ ಮತ್ತು ಬೈಕ್ ತಮಗೆ ವಾಪಸ್ ನೀಡಿದ್ದು ಅವರು ಆರೋಪಿಯನ್ನು ರಕ್ಷಿಸಲು ನಿಂತಿರುವುದು ಸ್ಪಷ್ಟ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಪೊಲೀಸರು ನಡೆಸುವ ತನಿಖೆ ಮೇಲೆ ವಿಶ್ವಾಸವಿದೆ. ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು. ಘಟನೆಗೆ ಸಂಬಂಧಿಸಿ ಅನಗತ್ಯ ಗೊಂದಲ ಸೃಷ್ಟಿಸಲಾಗುತ್ತಿದೆ. ನಾವು ತೀವ್ರ ಘಾಸಿಗೊಂಡಿದ್ದೇವೆ. ಪ್ರಕರಣದ ಬಗ್ಗೆ ಕಪೋಲಕಲ್ಪಿತ ವರದಿ ಮಾಡಬೇಡಿ ಎಂದು ಈ ಸಂದರ್ಭದಲ್ಲಿ ಪಾಲಕರು ಮನವಿ ಮಾಡಿಕೊಂಡರು.

ವಿದ್ಯಾರ್ಥಿಗಳು ಸಹ ಈ ವಿಚಾರಕ್ಕೆ ಹೋರಾಟ ಮಾಡುವ ಮೂಲಕ ಬೆಂಬಲಿಸಿದ್ದಾರೆ. ಆದರೆ ಈ ವಿಷಯ ಸೂಕ್ಷ್ಮವಾಗಿದ್ದು, ವಿವಿಧ ಮಾಧ್ಯಮಗಳ ಮೂಲಕ ಅನಗತ್ಯ ಗೊಂದಲ ಸೃಷ್ಟಿಸಿ ತಮ್ಮ ಮನಸಿಗೆ ಮತ್ತಷ್ಟು ನೋವು ಉಂಟು ಮಾಡಬೇಡಿ ಎಂದು ಮೃತ ವಿದ್ಯಾರ್ಥಿನಿ ಪಾಲಕರು ಕೇಳಿಕೊಂಡಿದ್ದಾರೆ. ಏ. 25ರಂದು ರಾಯಚೂರಿನಲ್ಲಿ ಕೃತ್ಯ ಖಂಡಿಸಿ ಬೃಹತ್ ಪ್ರತಿಭಟನೆಗೆ ನಿರ್ಧಾರಿಸಲಾಗಿದೆ ಎಂದು ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಗುರು ವಿಶ್ವಕರ್ಮ ಹೇಳಿದ್ದಾರೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)