ಭಾರತದಲ್ಲಿ ಟಿಕ್‍ಟಾಕ್ ಬ್ಯಾನ್ – ಗೂಗಲ್, ಆಪಲ್ ಕಂಪನಿಗಳಿಗೆ ಕೇಂದ್ರ ಸೂಚನೆ

0
1044

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ನವದೆಹಲಿ: ಜನಪ್ರಿಯ ವಿಡಿಯೋ ಶೇರಿಂಗ್ ಅಪ್ಲಿಕೇಶನ್ ಚೀನಾ ಮೂಲದ ಟಿಕ್ ಟಾಕ್ ಅನ್ನು ಆಪ್‍ಪ್ಲೇ ಸ್ಟೋರ್ ನಿಂದ ತೆಗೆದು ಹಾಕಿ ಎಂದು ಗೂಗಲ್ ಮತ್ತು ಆಪಲ್ ಕಂಪನಿಗಳಿಗೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸೂಚನೆ ನೀಡಿದೆ.

ಮದ್ರಾಸ್ ಹೈ ಕೋರ್ಟ್ ಈ ಅಪ್ಲಿಕೇಶನ್ ತೆಗೆದು ಹಾಕುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಈ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಅಪ್ಲಿಕೇಶನ್ ತೆಗೆದು ಹಾಕುವಂತೆ ಸೂಚನೆ ನೀಡಿದೆ.

ಈ ಅಪ್ಲಿಕೇಶನ್ ನಲ್ಲಿ ಜನ ಆಕ್ಷೇಪಾರ್ಹ ವಿಡಿಯೋಗಳನ್ನು ಹಂಚಿ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಹೀಗಾಗಿ ಈ ಆ್ಯಪನ್ನು ನಿಷೇಧಿಸಬೇಕೆಂದು ಅರ್ಜಿದಾರರು ಸಾರ್ವಜನಿಕಾ ಹಿತಾಸಕ್ತಿ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದರು. ಅರ್ಜಿದಾರರ ವಾದವನ್ನು ಪುರಸ್ಕರಿಸಿದ ಮದ್ರಾಸ್ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಆ್ಯಪ್ ನಿಷೇಧಿಸುವಂತೆ ಏ.3 ರಂದು ಮಧ್ಯಂತರ ಆದೇಶ ಹೊರಡಿಸಿತ್ತು.

ಟಿಕ್ ಟಾಕ್ ಆ್ಯಪನ್ನು ಅಭಿವೃದ್ಧಿಪಡಿಸಿದ ಬೈಟ್‍ಡಾನ್ಸ್ ಟೆಕ್ನಾಲಜಿ ಈ ಆದೇಶಕ್ಕೆ ತಡೆ ನೀಡುವಂತೆ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಮಂಗಳವಾರ ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾ. ರಂಜನ್ ಗೊಗೋಯ್ ಮತ್ತು ನ್ಯಾ. ಸಂಜೀವ್ ಖನ್ನಾ ಅವರಿದ್ದ ದ್ವಿಸದಸ್ಯ ಪೀಠ ಈ ಆದೇಶಕ್ಕೆ ತಡೆ ನೀಡುವುದಿಲ್ಲ ಎಂದು ಹೇಳಿ ಮುಂದಿನ ವಿಚಾರಣೆಯನ್ನು ಏಪ್ರಿಲ್ 22ಕ್ಕೆ ಮುಂದೂಡಿತು.

ಸುಪ್ರೀಂ ಕೋರ್ಟ್ ಮದ್ರಾಸ್ ಹೈ ಕೋರ್ಟ್ ಆದೇಶಕ್ಕೆ ತಡೆ ನೀಡದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಆ್ಯಪನ್ನು ಕಿತ್ತು ಹಾಕುವಂತೆ ಆಪಲ್ ಮತ್ತು ಗೂಗಲ್ ಕಂಪನಿಗಳಿಗೆ ಸೂಚಿಸಿದೆ. ಕೇಂದ್ರದ ಸೂಚನೆಯ ಹಿನ್ನೆಲೆಯಲ್ಲಿ ಗೂಗಲ್ ಮತ್ತು ಆಪಲ್ ಕಂಪನಿ ಆ್ಯಪ್ ಸ್ಟೋರ್ ನಿಂದ ಟಿಕ್ ಟಾಕ್ ಕಿತ್ತು ಹಾಕಿದೆ.

ಕಂಪನಿ ಸ್ಪಷ್ಟನೆ : ವಿವಾದ ಸಂಬಂಧ ಸ್ಪಷ್ಟನೆ ನೀಡಿರುವ ಬೈಟ್‍ಡಾನ್ಸ್ ಟೆಕ್ನಾಲಜಿ, ಟಿಕ್ ಟಾಕ್ ನಲ್ಲಿ ಶೇರ್ ಮಾಡಲಾಗುತ್ತಿರುವ ಜನರ ವಿಡಿಯೋಗಳಿಗೆ ಕಂಪನಿಯನ್ನು ಜವಾಬ್ದಾರಿಯನ್ನಾಗಿ ಮಾಡಲು ಸಾಧ್ಯವಿಲ್ಲ. ಭಾರತದ ಕಾನೂನಿನ ಮೇಲೆ ನಂಬಿಕೆ ಗೌರವವಿದ್ದು ಇಲ್ಲಿಯವರೆಗೆ ಸುಮಾರು 60 ಲಕ್ಷ ಆಕ್ಷೇಪಾರ್ಹ ವಿಡಿಯೋಗಳನ್ನು ಡಿಲೀಟ್ ಮಾಡಿದ್ದೇವೆ. ಈ ಸಂಬಂಧ ವಿಡಿಯೋಗಳ ಮೇಲೆ ಮತ್ತಷ್ಟು ನಿಗಾ ವಹಿಸುತ್ತೇವೆ ಎಂದು ತಿಳಿಸಿದೆ.

ಆ್ಯಪ್ ವಿಶ್ಲೇಷಣಾ ಸಂಸ್ಥೆ ಸೆನ್ಸರ್ ಟವರ್ ಪ್ರಕಾರ ಭಾರತದಲ್ಲಿ 24 ಕೋಟಿಗೂ ಹೆಚ್ಚು ಟಿಕ್ ಟಾಕ್ ಅಪ್ಲಿಕೇಶನ್ ಡೌನ್‍ಲೋಡ್ ಆಗಿದೆ. 2016ರ ಸೆಪ್ಟೆಂಬರ್ ತಿಂಗಳಿನಲ್ಲಿ ಟಿಕ್ ಟಾಕ್ ಬಿಡುಗಡೆಯಾಗಿತ್ತು.

ಟಿಕ್ ಟಾಕ್‍ನಂತಹ ಆ್ಯಪ್ ಯುವಜನತೆಯ ಭವಿಷ್ಯ ಹಾಗೂ ಮಕ್ಕಳ ಮನಸ್ಥಿತಿಯನ್ನು ಹಾಳು ಮಾಡುತ್ತಿದೆ. ಈ ಕುರಿತು ಮದ್ರಾಸ್ ಹೈ ಕೋರ್ಟ್ ನ  ನ್ಯಾ. ಎನ್ ಕಿರುಬಕರನ್ ಹಾಗೂ ನ್ಯಾ. ಎಸ್ ಸುಂದರ್ ಅವರಿದ್ದ ದ್ವಿಸದಸ್ಯ ಪೀಠ ಟಿಕ್ ಟಾಕ್ ವಿಡಿಯೋಗಳನ್ನು ಪ್ರಸಾರ ಮಾಡುವ ಮಾಧ್ಯಮಗಳನ್ನು ನಿಷೇಧಿಸುವಂತೆ ಆದೇಶಿಸಿದ್ದರು. ಮಕ್ಕಳು ಸೈಬರ್ ಸಂತ್ರಸ್ತ್ರರಾಗುವುದನ್ನು ತಪ್ಪಿಸಲು ಅಮೆರಿಕ ಸರ್ಕಾರ ಮಕ್ಕಳ ಆನ್‍ಲೈನ್ ಗೌಪ್ಯತೆ ರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದಿದೆ. ಇದೇ ರೀತಿಯಲ್ಲಿ ಕೇಂದ್ರ ಸರ್ಕಾರ ಕಾನೂನು ರೂಪಿಸಬೇಕು ಎಂದು ಪೀಠ ಅಭಿಪ್ರಾಯಪಟ್ಟಿತ್ತು.

ಫೆಬ್ರವರಿಯಲ್ಲಿ ತಮಿಳುನಾಡು ವಿಧಾನಸಭಾ ಅಧಿವೇಶನದಲ್ಲಿ ನಾಗಪಟ್ಟಣದ ಶಾಸಕ ತಮೀಮ್ ಅನ್ಸಾರಿ ಈ ಅಪ್ಲಿಕೇಶನ್ ಅನ್ನು ನಿಷೇಧ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಅಪ್ಲಿಕೇಶನ್ ನಿಂದಾಗಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುತ್ತಿದೆ ಎಂದು ಸದನಕ್ಕೆ ತಿಳಿಸಿದ್ದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)