ಕೋಟ ಡಬಲ್ ಮರ್ಡರ್ : ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಇಬ್ಬರು ಸಿಬ್ಬಂದಿಗಳು ಅರೆಸ್ಟ್

0
193

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (7) ಸಮ್ಮತ (0) ಅಸಮ್ಮತ (0) ಖಂಡಿಸುವೆ (2) ಅಭಿಪ್ರಾಯವಿಲ್ಲ (0)

ಉಡುಪಿ : ಕೋಟದ ಮಣೂರು ಗ್ರಾಮದ ಚಿಕ್ಕನಕೆರೆಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಇಬ್ಬರು ಸಿಬ್ಬಂದಿಯನ್ನು ಬಂಧಿಸಿರುವುದಾಗಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪವನ್ ಅಮಿನ್ ಕುಂದಾಪುರ ಹಾಗೂ ವೀರೇಂದ್ರ ಆಚಾರ್ಯ ಗಂಗೊಳ್ಳಿ ಬಂಧಿತ ಸಿಬ್ಬಂದಿಗಳು. ಜ.26ರಂದು ಕೊಲೆಯಾದ ಬಳಿಕ ಆರೋಪಿಗಳಿಗೆ ಕಾರಿನ ವ್ಯವಸ್ಥೆ ಆರೋಪ ಹಾಗೂ ಕೊಲೆ ನಡೆದ ಬಳಿಕ ಆರೋಪಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಆರೋಪಿಗಳಿಗೆ ಸಹಕರಿಸಿದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ಇವರಿಬ್ಬರ ಬಂಧನದೊಂದಿಗೆ ಯುವಕರಿಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಸಂಖ್ಯೆ ಎಂಟಕ್ಕೇರಿದೆ.

ಕೊಲೆ ನಡೆದ ದಿನ ರಾತ್ರಿ ಆರೋಪಿಗಳು ಅಡಗಿಕೊಳ್ಳಲು ಪವನ್ ಅಮಿನ್ ಹೆಬ್ರಿಯಲ್ಲಿರುವ ತನ್ನ ಮನೆಯಲ್ಲಿ ಅವಕಾಶ ನೀಡಿದ್ದ ಅಲ್ಲದೆ ಮರುದಿನ ಬೆಳಗ್ಗೆ ಕೊಲೇ ಆರೋಪಿ ಹರೀಶ್ ರೆಡ್ಡಿಯು ಪವನ್ ಅಮಿನ್‌ಗೆ ದೂರವಾಣಿ ಕರೆ ಮಾಡಿ ಮೊಬೈಲ್ ಫೋನ್ ಮತ್ತು ಸಿಮ್ ಸಹಿತ ಕೆಲವು ಸಾಮಗ್ರಿಗಳನ್ನು ಕಳುಹಿಸಿಕೊಡುವಂತೆ ಕೇಳಿದ್ದ. ಅದರಂತೆ ಅವುಗಳನ್ನು ಪ್ರಣವ್ ಭಟ್ ಎಂಬಾತನ ಮೂಲಕ ಪವನ್ ಅಮಿನ್ ಕಳುಹಿಸಿಕೊಟ್ಟಿದ್ದ ಎಂದು ಎಸ್ಪಿ ವಿವರಿಸಿದ್ದಾರೆ. ಇದಲ್ಲದೆ ಮರುದಿನ ಪವನ್ ಅಮಿನ್ ಇನ್ನೋರ್ವ ಆರೋಪಿ ವೀರೇಂದ್ರ ಆಚಾರ್ಯನೊಂದಿಗೆ ಸೇರಿ ಕೊಲೆ ಆರೋಪಿಗಳಿಗೆ ಕಾರೊಂದನ್ನು ವ್ಯವಸ್ಥೆ ಮಾಡಿ ಕೊಟ್ಟಿದ್ದ. ನಂತರ ಆರೋಪಿಗಳನ್ನು ಆಗುಂಬೆ ಎನ್.ಆರ್.ಪುರದಲ್ಲಿರುವ ತನ್ನ ಸಂಬಂಧಿಕರ ಮನೆಯಲ್ಲಿ ಅಡಗಿಕೊಳ್ಳಲು ವ್ಯವಸ್ಥೆ ಮಾಡಿ ಜ.28ರಂದು ಇವರಿಬ್ಬರನ್ನು ಅಲ್ಲಿಗೆ ಕರೆದೊಯ್ದಿದ್ದಾರೆ. ಬಳಿಕ ಅಲ್ಲಿಂದ ಪವನ್ ಮತ್ತು ವೀರೇಂದ್ರ ವಾಪಾಸ್ ಆದಾಗ ಆರೋಪಿ ಹರೀಶ್ ರೆಡ್ಡಿ ನೀಡಿದ್ದ ಮೊಬೈಲ್ ಫೋನ್‌ ಮತ್ತು ಇತರ ವಸ್ತುಗಳನ್ನು ತಂದು ಯಾರಿಗೂ ಸಿಗದಂತೆ ಬಚ್ಚಿಟ್ಟಿದ್ದರು ಎಂದು ಎಸ್ಪಿ ತಿಳಿಸಿದ್ದಾರೆ.

ಸಶಸ್ತ್ರ ಮೀಸಲು ಪಡೆಯ ಪವನ್ ಮತ್ತು ವೀರೇಂದ್ರ ಇವರಿಬ್ಬರನ್ನು ಭಾನುವಾರ ಬಂಧಿಸಲಾಗಿದ್ದು, ಕೃತ್ಯಕ್ಕೆ ಬಳಸಿದ ಕಾರು, ಮೊಬೈಲ್ ಫೋನ್ ಹಾಗೂ ಇತರ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಫೆ.15ರ ತನಕ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (7) ಸಮ್ಮತ (0) ಅಸಮ್ಮತ (0) ಖಂಡಿಸುವೆ (2) ಅಭಿಪ್ರಾಯವಿಲ್ಲ (0)