ಶಬರಿಮಲೆ ದೇಗುಲದ ಒಳಗೆ ಮತ್ತೊಂದು ಮಹಿಳೆಯ ಪ್ರವೇಶ?

0
208

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ತಿರುವನಂತಪುರ: ಕೊಲ್ಲಂನ 36 ವರ್ಷದ ಎಸ್‌ಪಿ ಮಂಜು ಎಂಬ ಮಹಿಳೆ ಶಬರಿಮಲೆ ದೇಗುಲ ಪ್ರವೇಶಿಸಿ, ಅಯ್ಯಪ್ಪ ಸ್ವಾಮಿ ದರ್ಶನ ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ.

ಈ ಸಂಬಂಧ ಶಬರಿಮಲೆ ದೇಗುಲದ ಆವರಣದಲ್ಲಿ ಮಂಜು ನಿಂತಿರುವ ಫೋಟೋ ಹಾಗೂ ವೀಡಿಯೋಗಳನ್ನೂ ತೋರಿಸಿದ್ದಾಳೆ. ಮಂಜು ಅವರ ಮಾತು ಸತ್ಯವಾಗಿದ್ದೇ ಆದಲ್ಲಿ, ಶಬರಿಮಲೆಗೆ ಪ್ರವೇಶಿಸಿದ 50 ವರ್ಷದೊಳಗಿನ ಮಹಿಳೆಯರ ಪೈಕಿ 4ನೇಯವರಾಗಲಿದ್ದಾರೆ.
ಕೇರಳ ದಲಿತ ಫೆಡೆರೇಷನ್‌ನ ಸಕ್ರಿಯ ಕಾರ್ಯಕರ್ತರೂ ಆಗಿರುವ ಮಂಜು, ಪೊಲೀಸರಿಂದ ಭದ್ರತೆ ಇತ್ಯಾದಿಗಳನ್ನು ಕೇಳಿಲ್ಲ. ಶಬರಿಮಲೆಗೆ ಎಲ್ಲರೂ ಸಾಗುವಂತೆ ಬೆಟ್ಟ ಹತ್ತಿ ಹೋಗಿದ್ದಾಗಿ ಅವರು ಹೇಳಿಕೊಂಡಿದ್ದಾರೆ.

 ಬೆಳಗ್ಗೆ 7.30ರ ವೇಳೆಗೆ ಸನ್ನಿಧಾನಕ್ಕೆ ತಲುಪಿ, ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದ್ದೇನೆ. ತುಪ್ಪಾಭಿಷೇಕ ಸೇವೆಯನ್ನೂ ಮಾಡಿಸಿದ್ದಾಗಿ ಮಂಜು ಹೇಳಿದ್ದು, 10.30ಕ್ಕೆ ಪಾಂಬಗೆ ವಾಪಾಸಾಗಿರುವುದಾಗಿ ಅವರು ಹೇಳಿದ್ದಾರೆ.

ಮಂಗಳವಾರ ಅಯ್ಯಪ್ಪ ಸ್ವಾಮಿ ದರ್ಶನ ಮುಗಿಸಿ ಚತ್ತನ್ನೂರ್‌ನಲ್ಲಿರುವ ನಿವಾಸಕ್ಕೆ ಅವರು ಹಿಂದಿರುಗಿದ್ದಾರೆ. ಮಂಜು ಅವರು ಈ ಹಿಂದೆ 2018 ಅಕ್ಟೋಬರ್‌ನಲ್ಲಿ ಶಬರಿಮಲೆಗೆ ತೆರಳಲು ಪ್ರಯತ್ನಿಸಿದ್ದು, ಪಾಂಬದಲ್ಲಿ ಅವರನ್ನು ಪೊಲೀಸರು ತಡೆದು ನಿಲ್ಲಿಸಿದ್ದರು. ಮಂಜು ಅವರು ದೇಗುಲ ಪ್ರವೇಶಿಸಿರುವ ಕುರಿತು ಫೇಸ್‌ಬುಕ್‌ ಗ್ರೂಪ್‌ ನವೋಧನ ಕೇರಳಂ ಶಬರಿಮಲಯಿಲೆಕ್ಕುನಲ್ಲಿ ಪ್ರಕಟಿಸಲಾಗಿದೆ.

ಶಬರಿಮಲೆಗೆ ಸಾಗುವ ವೇಳೆ, ಕೆಲವರು ಮುಂಬರು ಸಮಸ್ಯೆಗಳನ್ನು ಎದುರಿಸಲು ಸಿದ್ಧವೇ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ್ದಾರೆ. ಆದರೆ ಅವರು ಬೇರೆ ಜನಗಳನ್ನು ಕರೆದು ಗಲಭೆ, ವಿರೋಧ ವ್ಯಕ್ತಪಡಿಸಿಲ್ಲ ಎಂದು ಮಂಜು ಹೇಳಿಕೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ತಮ್ಮೊಂದಿಗೆ ಇನ್ನಿತರ ಮಹಿಳೆಯರನ್ನೂ ಶಬರಿಮಲೆಗೆ ಕರೆದೊಯ್ಯುವ ಕುರಿತು ಯೋಜನೆ ಹಾಕುವುದಾಗಿ ಅವರು ಹೇಳಿದ್ದಾರೆ.

ಆದರೆ ಮಂಜು ಅವರ ಪ್ರವೇಶದ ಕುರಿತು ಪೊಲೀಸರು ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ. ಮಹಿಳೆಯರ ಪ್ರವೇಶದ ಕುರಿತು ಪೊಲೀಸರ ಗಮನಕ್ಕೆ ಬಂದಿಲ್ಲ ಎಂದು ಮೂಲಗಳು ಹೇಳಿವೆ. ಸಮಾಜಿಕ ತಾಣಗಳಲ್ಲಿ ಈ ವಿಚಾರ ಬಹಿರಂಗಗೊಳ್ಳುತ್ತಿದ್ದಂತೆ ಪೊಲೀಸರು ಮಂಜು ಅವರ ಮನೆಗೆ ಭೇಟಿ ನೀಡಿ, ಹೇಳಿಕೆ ದಾಖಲಿಸಿಕೊಂಡಿದ್ದಾರೆ ಹಾಗೂ ಅವರ ಮನೆಗೆ ಭದ್ರತೆ ಒದಗಿಸಿದ್ದಾರೆ.

ಜನವರಿಯಲ್ಲಿ ಶಬರಿಮಲೆ ದೇಗುಲದ ಬಾಗಿಲು ತೆರೆದ ಬಳಿಕ ಕೇರಳದ ಬಿಂದು, ಕನಕದುರ್ಗ ಹಾಗೂ ಶ್ರೀಲಂಕಾ ಮೂಲದ ಮಹಿಳೆ ಶಶಿಕಲಾ ಪೊಲೀಸರ ಸಹಾಯದೊಂದಿಗೆ ಶಬರಿಮಲೆಗೆ ಪ್ರವೇಶ ಮಾಡಿದ್ದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)