17ರ ಬಾಲಕನನ್ನು ಮದುವೆಯಾದವಳ ಬಂಧನ; ಆತನಿಂದ ಆಕೆಗೆ ಮಗುವಿದೆಯಂತೆ

0
209

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

ಮುಂಬಯಿ: 17ವರ್ಷದ ಬಾಲಕನನ್ನು ಮದುವೆಯಾಗಿರುವ 22 ವರ್ಷದ ಮಹಿಳೆಯನ್ನು ವಾಣಿಜ್ಯ ನಗರಿ ಪೊಲೀಸರು ಬಂಧಿಸಿದ್ದು, ಆಕೆಯ ವಿರುದ್ಧ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪೊಕ್ಸೋ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಆದರೆ ತನ್ನ ಮೇಲಿನ ಆರೋಪವನ್ನು ನಿರಾಕರಿಸಿರುವ ಆಕೆ ನಾವಿಬ್ಬರು ಕಳೆದ ವರ್ಷವೇ ಮದುವೆಯಾಗಿದ್ದು, ನಮ್ಮದು ಪರಸ್ಪರ ಒಪ್ಪಿತ ಸಂಬಂಧ. ಈ ಸಂಬಂಧದಿಂದ ನನಗೆ 5 ತಿಂಗಳ ಮಗು ಕೂಡ ಇದೆ ಎಂದು ಹೇಳಿದ್ದು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾಳೆ.

ಅಪ್ರಾಪ್ತನಾಗಿರುವ ನನ್ನ ಮಗನನ್ನು ಪುಸಲಾಯಿಸಿ ಮದುವೆಯಾಗಿದ್ದಾಳೆ ಎಂದು ಬಾಲಕನ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಳು.

ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿಯೇ ಮಹಿಳೆ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದರೆ ಬರೋಬ್ಬರಿ 1 ವರ್ಷದ ಬಳಿಕ ಆಕೆಯ ಬಂಧನವಾಗಿದೆ. ಪೋಕ್ಸೋ ಕಾಯಿದೆ ಜತೆಗೆ ಅಪಹರಣ, ಕ್ರಿಮಿನಲ್ ಬೆದರಿಕೆ ಮತ್ತು ಬಾಲ್ಯವಿವಾಹ ಕಾಯಿದೆ ಅಡಿಯಲ್ಲಿ ಸಹ ಆಕೆಯ ವಿರುದ್ಧ ಪ್ರಕರಣ ದಾಖಲಾಗಿದೆ.

ವಿವಾಹಕ್ಕೆ ಮಹಿಳೆಯ ವಯಸ್ಸು 18 ಮತ್ತು ಪುರುಷನ ವಯಸ್ಸು 21 ಆಗಿರಬೇಕು ಎಂದು ಕಾನೂನಿದೆ.

ನವೆಂಬರ್ 8, 2017ರಲ್ಲಿ ಇವರಿಬ್ಬರ ವಿವಾಹವಾಗಿದ್ದು, ಡಿಸೆಂಬರ್ 23, 2017 ರಂದು ತನ್ನ ಪೋಷಕರು ಮತ್ತು ಸಹೋದರನ ಜತೆಯಲ್ಲಿ ನಮ್ಮ ಮನೆಗೆ ಬಂದ ಮಹಿಳೆ ನಿಮ್ಮ ಮಗನನ್ನು ಮದುವೆಯಾಗಿದ್ದೇನೆ. ಇನ್ನು ಮೇಲೆ ನಿಮ್ಮ ಮನೆಯಲ್ಲಿ ವಾಸ ಮಾಡುತ್ತೇನೆ ಎಂದು ಹೇಳಿದಳು. ಆದರೆ ನಾನು ಮತ್ತು ಪತಿ ಇದಕ್ಕೆ ವಿರೋಧ ವ್ಯಕ್ತಪಡಿಸಿದೆವು. ಅದೇ ದಿನ ರಾತ್ರಿ 11 ಗಂಟೆಗೆ ನನ್ನ ಮಗನು ಕೂಡ ಮನೆ ಬಿಟ್ಟು ಹೋಗಿದ್ದು ಹಿಂತಿರುಗಿ ಬರಲು ನಿರಾಕರಿಸಿದ್ದಾನೆ. ಆತನನ್ನು ಮದುವೆಯಾದ ಮಹಿಳೆ ಈಗಾಗಲೇ 2 ಬಾರಿ ಮದುವೆಯಾಗಿ, ವಿಚ್ಛೇದನ ಪಡೆದವಳು ಎಂದು ಬಾಲಕನ ತಾಯಿ ದೂರಿನಲ್ಲಿ ತಿಳಿಸಿದ್ದಾಳೆ.

ಕಳೆದ 2 ವರ್ಷದಿಂದ ನನ್ನ ಮಗನಿಗೂ, ಆತನನ್ನು ಮದುವೆಯಾಗಿರುವ ಮಹಿಳೆಗೂ ಸಂಪರ್ಕವಿದ್ದು, ನಾನು ದೂರವಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಆಕೆ ಬೆದರಿಕೆ ಹಾಕಿದ್ದಳು. ಒಮ್ಮೆ ಸೀಮೆ ಎಣ್ಣೆ ಸುರಿದುಕೊಂಡು, ಮತ್ತೊಮ್ಮೆ ವಿಷ ಕುಡಿಯಲು ಯತ್ನಿಸಿದ್ದಳು. ಈ ರೀತಿ ನನ್ನ ಮಗನ ಮೇಲೆ ಮಾನಸಿಕ ಒತ್ತಡ ಹೇರಿದ ಆಕೆ ಆತ 10ನೇ ತರಗತಿಯಲ್ಲಿ ನಪಾಸಾಗಲು ಕಾರಣಳಾಗಿದ್ದಾಳೆ ಎಂದಾಕೆ ದೂರಿದ್ದಾಳೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)