ಗರ್ಲ್ ಫ್ರೆಂಡ್ನ ಜೊತೆ ಬಂದಿದ್ದ ಯವಕನ ಕೈ ಕತ್ತರಿಸಿ ಪರಾರಿಯಾದ ದುಷ್ಕರ್ಮಿಗಳು

0
203

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೆಂಗಳೂರು: ಪ್ರೇಯಸಿಯ ಜೊತೆ ಪ್ರವಾಸಕ್ಕೆ ಬಂದಿದ್ದ ಪ್ರೇಮಿಯೊಬ್ಬನ ಮುಂಗೈಯನ್ನು ಕತ್ತರಿಸಿ ಅದರೊಂದಿಗೆ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಹೊರವಲಯದ ಬನ್ನೇರುಘಟ್ಟದ ಬೆಟ್ಟದ ಬಳಿ ಈ ಧಾರುಣ ಘಟನೆ ನಡೆದಿದ್ದು, ಚಿತ್ರದುರ್ಗ ಮೂಲದ ರವೀಶ್ (23 ವರ್ಷ) ಕೈ ಕಳೆದುಕೊಂಡ ಪ್ರೇಮಿ. ರವೀಶ್ ಆನೇಕಲ್ ತಾಲೂಕಿನ ಯಾರಂಡಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಆತನೊಂದಿಗೆ ಇದ್ದ ಯುವತಿ ಕೂಡ ಚಿತ್ರದುರ್ಗದ ಮೂಲದವಳಾಗಿದ್ದು, ನಗರದಲ್ಲಿಯೇ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಳು ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ಏನಿದು ಘಟನೆ? : ಸಂತ್ರಸ್ಥ ರವೀಶ್ ಮತ್ತು ಆತನ ಪ್ರೇಯಸಿ ಇಬ್ಬರು ಸೇರಿ ಬನ್ನೇರುಘಟ್ಟದ ಚಂಪಕಧಾಮ ಸ್ವಾಮಿ ದೇವಾಲಯದ ಹಿಂಭಾಗದಿಂದ ಸುವರ್ಣಮುಖಿ ಆಂಜನೇಯ ದೇವಸ್ಥಾನಕ್ಕೆ ಹೋಗುತ್ತಿದ್ದರು. ಅದು ಅರಣ್ಯ ಪ್ರದೇಶವಾಗಿದ್ದು, ಅಲ್ಲಿಗೆ ಅರಣ್ಯ ಪ್ರದೇಶದ 3 ಕಿ.ಮೀ. ಕಾಲು ದಾರಿಯ ಮೂಲಕವೇ ಹೋಗಬೇಕು. ಈ ವೇಳೆ ದಾರಿ ಮಧ್ಯದಲ್ಲಿಯೇ ಕೆಲ ದುಷ್ಕರ್ಮಿಗಳು ಇದ್ದು, ರವೀಶ್ ಮತ್ತು ಆತನ ಪ್ರೇಯಸಿಯನ್ನು ಕೆಣಕಿದ್ದಾರೆ. ಈ ವೇಳೆ ಇಬ್ಬರ ನಡುವೆ ವಾಕ್ಸಮರ ಏರ್ಪಟ್ಟಿದ್ದು, ಜಗಳ ತಾರಕಕ್ಕೇರಿ ದುಷ್ಕರ್ಮಿಗಳು ತಮ್ಮ ಬಳಿ ಇದ್ದ ಲಾಂಗು ಹಾಗೂ ಮಚ್ಚು ಬಳಸಿ, ಯುವಕನ ಬಲಭಾಗದ ಮುಂಗೈ ಕತ್ತರಿಸಿದ್ದಾರೆ. ಅಲ್ಲದೆ ಇಷ್ಟಕ್ಕೇ ಸುಮ್ಮನಾಗದೇ ವಿಕೃತಿ ಮೆರೆದ ದುಷ್ಕರ್ಮಿಗಳು ಕತ್ತರಿಸಿದ ಕೈಯನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ.

ಘಟನೆಯಿಂದಾಗಿ ರಕ್ತದ ಮಡುವಿನಲ್ಲಿ ಬಿದ್ದು, ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಪ್ರಿಯಕರನನ್ನು ಕಾಪಾಡಿ ಎಂದು ಯುವತಿ ಸ್ಥಳೀಯರಲ್ಲಿ ಕೇಳಿಕೊಂಡಿದ್ದಾಳೆ. ಬಳಿಕ ಸ್ಥಳೀಯರ ಸಹಾಯದಿಂದ ರವೀಶ್ ನನ್ನು ಬನ್ನೇರುಘಟ್ಟ ರಸ್ತೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅತಿಯಾದ ರಕ್ತಸ್ರಾವದಿಂದ ಬಳಲುತ್ತಿದ್ದ ರವೀಶ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ. ಸದ್ಯ ರವೀಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಇನ್ನು ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬನ್ನೇರುಘಟ್ಟ ಪೊಲೀಸರು, ಯುವತಿಯಿಂದ ಮಾಹಿತಿ ಪಡೆದಿದ್ದಾರೆ. ಈ ವೇಳೆ ಯುವತಿ ಗೊಂದಲಮಯ ಹೇಳಿಕೆ ನೀಡುತ್ತಿದ್ದು, ದಾಳಿ ಮಾಡಿದವರ ಬಗ್ಗೆ ಯಾವುದೇ ರೀತಿಯ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ಎಷ್ಟು ಜನ ದಾಳಿ ಮಾಡಿದ್ದಾರೆ ಎಂದು ಪೊಲೀಸರು ಕೇಳಿದ ಪ್ರಶ್ನೆಗೆ ಒಂದು ಬಾರಿ ಇಬ್ಬರು ಎಂದರೆ, ಮತ್ತೊಮ್ಮೆ ಮೂವರು ಎಂದು ಹೇಳುತ್ತಿದ್ದಾಳೆ. ಯಾವುದೇ ಮಾಹಿತಿ ಕೇಳಿದರೂ ಗೊಂದಲದ ಉತ್ತರ ನೀಡುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಸ್ತುತ ಘಟನೆ ನಡೆದ ಪ್ರದೇಶದ ಸ್ಥಳ ಪರಿಶೀಲನೆ ನಡೆಸಿರುವ ಪೊಲೀಸರು ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)