ಇಂಗ್ಲೆಂಡ್ ವಿರುದ್ಧದ ಪದಾರ್ಪಣೆ ಪಂದ್ಯದಲ್ಲಿಯೇ ಅರ್ಧಶತಕ ಸಿಡಿಸಿದ ಹನುಮ ವಿಹಾರಿ

0
223

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಓವಲ್: ಇಂಗ್ಲೆಂಡ್ ವಿರುದ್ಧದ ಪದಾರ್ಪಣೆ ಪಂದ್ಯದಲ್ಲೇ ಅರ್ಧಶತಕ ಭಾರಿಸಲು ನೆರವಾಗಿದ್ದು ಭಾರತದ ಮಾಜಿ ಕ್ರಿಕೆಟಿಗ ಹಾಗೂ ಭಾರತೀಯ ಕ್ರಿಕೆಟ್ ದಂತಕಥೆ ‘ದಿ ವಾಲ್’ ಖ್ಯಾತಿಯ ರಾಹುಲ್ ದ್ರಾವಿಡ್ ಎಂದು ಉದಯೋನ್ಮುಖ ಕ್ರಿಕೆಟಿಗ ಹುನುಮ ವಿಹಾರಿ ಹೇಳಿದ್ದಾರೆ.

ಓವಲ್ ನ ಕೆನ್ನಿಂಗ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ದಿಢೀರ್ ಕುಸಿತ ಕಂಡಿದ್ದ ಭಾರತ ತಂಡಕ್ಕೆ ಉದಯೋನ್ಮುಖ ಕ್ರಿಕೆಟಿಗ ಹನುಮ ವಿಹಾರಿ ಮತ್ತು ಆಲ್ ರೌಂಡರ್ ರವೀಂದ್ರ ಜಡೇಜಾ ಬೆನ್ನೆಲುಬಾಗಿ ನಿಂತಿದ್ದರು. ಈ ಜೋಡಿ 77 ರನ್ ಗಳ ಅಮೋಘ ಜೊತೆಯಾಟ ನೀಡಿತ್ತು. ಹನುಮ ವಿಹಾರಿ 56 ರನ್ ಗಳಿಸಿ ತಮ್ಮ ಪದಾರ್ಪಣೆ ಪಂದ್ಯದಲ್ಲಿಯೇ ಅರ್ಧಶತಕ ಸಿಡಿಸಿದ ಸಾಧನೆ ಮಾಡಿದರು. ಮತ್ತೊಂದು ಬದಿಯಲ್ಲಿದ್ದ ರವೀಂಜ್ರ ಜಡೇಜಾ ಅಜೇಯ 86 ರನ್ ಗಳಿಸಿ ತಂಡಕ್ಕಾಗ ಬಹುದಾಗಿದ್ದ ದೊಡ್ಡ ಮುಜುಗರವನ್ನು ತಪ್ಪಿಸಿದರು.

ದಿನದಾಟದ ಅಂತ್ಯದ ಬಳಿಕ ತಮ್ಮ ಉತ್ತಮ ಪ್ರದರ್ಶನದ ಕುರಿತು ಮಾತನಾಡಿದ ಕ್ರಿಕೆಟಿಗ ಹನುಮ ವಿಹಾರಿ, ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಬಳಿಕ ನಾನು ಕೂಡಲೇ ರಾಹುಲ್ ದ್ರಾವಿಡ್ ಅವರಿಗೆ ಕರೆ ಮಾಡಿದ್ದೆ. ಟೀಂ ಇಂಡಿಯಾಗೆ ಆಯ್ಕೆಯಾದ ಸಂತಸ ಒಂದೆಡೆಯಾದರೆ, ಪದಾರ್ಪಣೆ ಪಂದ್ಯದ ಒತ್ತಡ ಮತ್ತೊಂದೆಡೆ. ನಿಜಕ್ಕೂ ನಾನು ತುಂಬಾ ಒತ್ತಡದಲ್ಲಿದ್ದೆ. ಆದರೆ ರಾಹುಲ್ ದ್ರಾವಿಡ್ ನನ್ನ ಆತಂಕ ದೂರ ಮಾಡಿದರು. ದ್ರಾವಿಡ್ ಟೆಸ್ಟ್ ಕ್ರಿಕೆಟ್ ನ ಲೆಜೆಂಡ್ ಆಟಗಾರರು. ಇಂಗ್ಲೆಂಡ್ ನೆಲದಲ್ಲಿ ಬ್ಯಾಟಿಂಗ್ ಸಂಬಂಧಿಸಿದಂತೆ ಅವರು ನೀಡಿದ್ದ ಸಲಹೆಗಳು ನನಗೆ ತುಂಬಾ ನೆರವಿಗೆ ಬಂದಿತು.

ನಿನ್ನಲ್ಲಿ ಟ್ಯಾಲೆಂಟ್ ಇದೆ. ನಿನ್ನ ಬ್ಯಾಟಿಂಗ್ ಕೌಶಲ್ಯಗಳನ್ನು ಸರಿಯಾದ ಸಮಯದಲ್ಲಿ ಬಳಕೆ ಮಾಡು. ಮೈದಾನದಲ್ಲಿ ಆಕ್ರಮಣಕಾರಿ ಚಿಂತನೆಗಿಂತ ಸೌಮ್ಯ, ಶಾಂತಿ ಚಿತ್ತತೆ ಕೆಲಸ ಮಾಡುತ್ತದೆ. ಫಲಿತಾಂಶಕ್ಕಿಂತ ನಿನ್ನ ಬ್ಯಾಟಿಂಗ್ ಅನ್ನು ನೀನು ಎಂಜಾಯ್ ಮಾಡು ಎಂದು ಸಲಹೆ ನೀಡಿದರು. ಅವರ ಸಲಹೆಗಳು ನಿಜಕ್ಕೂ ನೆರವಾಯಿತು. ಪ್ರಮುಖವಾಗಿ ಇಂಗ್ಲೆಂಡ್ ತಂಡದ ಸ್ಟಾರ್ ಬೌಲರ್ ಗಳಾದ ಜೇಮ್ಸ್ ಆ್ಯಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ಅವರನ್ನು ಎದುರಿಸುವಾಗ ನಾನು ಒತ್ತಡಕ್ಕೆ ಒಳಗಾಗುತ್ತಿದ್ದೆ. ಆಗ ದ್ರಾವಿಡ್ ಅವರು ಹೇಳಿದ ಸಲಹೆಗಳು ನೆನಪಿಗೆ ಬರುತ್ತಿದ್ದವು. ಇಂದು ನನ್ನ ಪ್ರದರ್ಶನಕ್ಕೆ ರಾಹುಲ್ ದ್ರಾವಿಡ್ ಅವರೇ ಕಾರಣ ಎಂದು ಹನುಮ ವಿಹಾರಿ ಹೇಳಿದ್ದಾರೆ.

ಅ್ಯಂಡರ್ಸನ್ ಮತ್ತು ಬ್ರಾಡ್ ವಿಶ್ವಖ್ಯಾತ ಸ್ಟಾರ್ ಬೌಲರ್ ಗಳು.. ಇಂತಹ ಘಟಾನುಘಟಿ ಬೌಲರ್ ಗಳ ಎದುರಿಸುವಾಗ ಸಾಮಾನ್ಯವಾಗಿಯೇ ಒತ್ತಡ ಹೆಚ್ಚಾಗುತ್ತದೆ. ಆದರೆ ನಾನು ದ್ರಾವಿಡ್ ಅವರ ಸಲಹೆಯಂತೆ ಒತ್ತಡವನ್ನು ನಿಭಾಯಿಸಿದೆ. ಶಾಂತ ಚಿತ್ತ ಆಟ ನನಗೆ ನೆರವಾಯಿತು. ನಾಯಕ ವಿರಾಟ್ ಕೊಹ್ಲಿ ಜೊತೆ ಆಡುವಾಗ ಸ್ಟ್ರೈಕ್ ರೊಟೇಟ್ ಮಾಡುವುದು, ಜೊತೆಯಾಟವನ್ನು ಹಿಗ್ಗಿಸುವುದು ಅವಶ್ಯಕವಾಗಿತ್ತು. ಕೊಹ್ಲಿ ಜೊತೆ ಆಡುವಾಗ ಅವರೂ ಕೂಡ ಸಾಕಷ್ಟು ಸಲಹೆಗಳನ್ನು ನೀಡಿದರು. ಹೊಸ ಆಟಗಾರರಿಗೆ ಕೊಹ್ಲಿ ಅತ್ಯುತ್ತಮವಾಗಿ ಮಾರ್ಗದರ್ಶನ ಮಾಡುತ್ತಾರೆ. ಕೊಹ್ಲಿ ಜೊತೆ ಆಡುವಾಗ ನಾನು ಆರಂಭದಲ್ಲಿ ಒತ್ತಡಕ್ಕೆ ಒಳಗಾಗಿದ್ದೆನಾದರೂ ಬಳಿಕ ಯಾವುದೇ ರೀತಿಯ ಒತ್ತಡ ನನ್ನನ್ನು ಕಾಡಲಿಲ್ಲ. ಕೊಹ್ಲಿ ನನಗೆ ಸಂಪೂರ್ಣ ಸಹಕಾರ ನೀಡಿದರು. ಪದಾರ್ಪಣೆ ಪಂದ್ಯದಲ್ಲಿ ಕೊಹ್ಲಿಯಿಂದ ಸಿಕ್ಕ ಸಾಥ್ ನನ್ನ ಆತ್ಮ ವಿಶ್ವಾಸವನ್ನು ಇಮ್ಮಡಿಗೊಳಿಸಿತು. ಕೊಹ್ಲಿ ಜೊತೆ ಇದ್ದಾಗ ನನ್ನ ಕೆಲಸ ಸುಲಭ ಎಂದೆನಿಸುತ್ತಿತ್ತು. ನನ್ನ ಉತ್ತಮ ಪ್ರದರ್ಶನದ ಯಶಸ್ಸು ಅವರಿಗೆ ಸಲ್ಲಬೇಕು. ಪಿಚ್ ಗೆ ಸಂಬಂಧಿಸಿದಂತೆ ಮತ್ತು ಇಂಗ್ಲೆಂಡ್ ಬೌಲರ್ ಗಳಿಗೆ ಸಂಬಂಧಿಸಿದಂತೆ ಕೊಹ್ಲಿ ಸಾಕಷ್ಟು ಅಂಶಗಳನ್ನು ನನ್ನೊಂದಿಗೆ ಹಂಚಿಕೊಂಡರು. ಇದು ನನ್ನ ಉತ್ತಮ ಪ್ರದರ್ಶನಕ್ಕೆ ಕಾರಣವಾಯಿತು ಎಂದು ವಿಹಾರಿ ಹೇಳಿದ್ದಾರೆ.

ಅಂತೆಯೇ ಬೆನ್ ಸ್ಟೋಕ್ಸ್ ವಾಕ್ಸಮರದ ಕುರಿತು ಮಾತನಾಡಿ ವಿಹಾರಿ, ಆ ಕ್ಷಣಕ್ಕೆ ಸ್ಟೋಕ್ಸ್ ಅಕ್ರಮಣಕಾರಿಯಾಗಿದ್ದರು. ಬಹುಶಃ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರಿಂದ ವಾಕ್ಸಮರದ ಮೂಲಕ ಕೆಣಕಲು ಯತ್ನಿಸಿದರು. ಆದರೆ ನಾಯಕ ಕೊಹ್ಲಿ ನನ್ನ ನೆರವಿಗೆ ನಿಂತರು. ಸಿಕ್ಸರ್ ಸಿಡಿಸಿದ ಬಳಿಕ ಸ್ಟೋಕ್ಸ್ ವಾಕ್ಸಮರ ನಡೆಸಿದರು.ಆ ಸಂದರ್ಭದಲ್ಲಿ ನಾಯಕ ಕೊಹ್ಲಿ ಬೆನ್ನಿಗೆ ನಿಂತ ರೀತಿ ಯಾವುದೇ ಉದಯೋನ್ಮುಖ ಆಟಗಾರಿನಿಗಾದರೂ ಆತ್ಮವಿಶ್ವಾಸ ತುಂಬುತ್ತದೆ.

ಅಂತೆಯೇ ನನ್ನ ಮತ್ತು ಜಡೇಜಾ ಅವರ ನಡುವಿನ ಜೊತೆಯಾಟ ಕೂಡ ಪ್ರಮುಖವಾಗಿತ್ತು. ಒಮ್ಮೆ ಆಟಕ್ಕೆ ಹೊಂದಿಕೊಂಡ ಬಳಿಕ ನನಗೆ ಬ್ಯಾಟಿಂಗ್ ಸಲೀಸು ಎನಿಸಿತು ಎಂದು ಹೇಳಿದರು.

ತಂಡಕ್ಕೆ ಆಯ್ಕೆಯಾದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿಹಾರಿ, ಯಾವುದೇ ಆಟಗಾರನಿಗಾದರೂ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಬೇಕು ಎಂದು ಸರ್ವಶ್ರೇಷ್ಠ ಕನಸಾಗಿರುತ್ತದೆ. ನನಗೂ ಕೂಡ. ಮೊದಲಿಗೆ ನಾನು ಈ ವಿಚಾರ ಕೇಳಿದ ಕೂಡಲೇ ನನ್ನ ಪೋಷಕರಿಗೆ ಮಾಹಿತಿ ನೀಡಿದೆ. ಅವರೂ ಕೂಡ ತುಂಬಾ ಖುಷಿ ಪಟ್ಟರು. ಇದು ಆರಂಭ ಮಾತ್ರ. ನಾನು ಇನ್ನು ಸವೆಸಬೇಕಾದ ಹಾದಿ ತುಂಬಾ ಇದೆ. ತಂಡದಲ್ಲಿ ನನ್ನ ಸ್ಥಾನ ಭದ್ರ ಪಡಿಸಿಕೊಳ್ಳಲು ನಾನು ಇನ್ನೂ ಸಾಕಷ್ಟು ಉತ್ತಮ ಇನ್ನಿಂಗ್ಸ್ ಗಳನ್ನು ಆಡಬೇಕು ಎಂದು ವಿಹಾರಿ ಹೇಳಿದ್ದಾರೆ.

ವಿಹಾರಿ 2013 ಮತ್ತು 2015ರ ಐಪಿಎಲ್ ಟೂರ್ನಿಯಲ್ಲಿ ಆಡಿದ್ದರು. 5 ವರ್ಷಗಳಿಂದಲೇ ಐಪಿಎಲ್ ನಲ್ಲಿ ಆಡುತ್ತಿದ್ದರೂ , ವಿಹಾರಿಗೆ ರಾಷ್ಟ್ರೀಯ ತಂಡದ ಬಾಗಿಲು ತೆರೆದಿರಲಿಲ್ಲ. ಇನ್ನು ಆಂಧ್ರ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಸಿಗುವ ಮಾನ್ಯತೆ ದೇಶೀಯ ಕ್ರಿಕೆಟ್ ಪಂದ್ಯಗಳಿಗೆ ದೊರೆಯುವುದಿಲ್ಲ. ದೇಶೀ ಕ್ರಿಕೆಟಿಗರ ಗುರುತಿಸುವಿಕೆ ಕೂಡ ತೀರಾ ಕಡಿಮೆ. ಆಂಧ್ರ ಪ್ರದೇಶ ಕ್ರಿಕೆಟ್ ನಲ್ಲಿ ನಾನು ಸಾಕಷ್ಟು ಕಠಿಣ ಪರಿಸ್ಥಿತಿಗಳನ್ನು ಎದುರಿಸಿದ್ದೇನೆ. ಭಾರತ ಎ ತಂಡಕ್ಕೆ ಆಯ್ಕೆಯಾದಾಗಲೂ ಸಾಕಷ್ಟು ಕಠಿಣ ಪರಿಸ್ಥಿತಿಗಳನ್ನು ಎದುರಿಸಿದ್ದೇನೆ. ಬಹುಶಃ ಕಠಿಣ ಪರಿಸ್ಥಿತಿಯೇ ಯಾವುದೇ ಪರಿಸ್ಥಿತಿ ಎದುರಿಸಲು ನಾನು ಸಜ್ಜಾಗುವಂತೆ ಮಾಡಿದೆ ಎಂದು ವಿಹಾರಿ ಹೇಳಿದ್ದಾರೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)