ದೇಶಾದ್ಯಂತ ಬಂದ್ ಬಿಸಿ… ಪ್ರಧಾನಿ ಮೋದಿ ಮಾತ್ರ ಮೌನಿ : ರಾಹುಲ್ ಗಾಂಧಿ

0
245

ಹೆಚ್ಚಿನ ಓದುಗರು ಈ ಸುದ್ದಿಯನ್ನು ಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ನವದೆಹಲಿ: ನಿರಂತರ ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆ ವಿರೋಧಿಸಿ ಇಂದು ಇಡೀ ದೇಶ ಬೀದಿಗಿಳಿದು ಹೋರಾಟ ಮಾಡುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಮಾತ್ರ ಈ ಬಗ್ಗೆ ತಮ್ಮ ಮೌನ ಮುಂದುವರೆಸಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ತೈಲೋತ್ಪನ್ನಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷ ಕರೆ ನೀಡಿರುವ ಭಾರತ್ ಬಂದ್ ಚಾಲ್ತಿಯಲ್ಲಿದ್ದು, ದೆಹಲಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಪಾಲ್ಗೊಂಡಿದ್ದಾರೆ. ಈ ಹಿಂದೆ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡಿದ್ದ ರಾಹುಲ್ ಗಾಂಧಿ ಭಾರತ್ ಬಂದ್ ಹಿನ್ನಲೆಯಲ್ಲಿ ತಮ್ಮ ಯಾತ್ರೆಯನ್ನು ಅರ್ಧಕ್ಕೇ ಮೊಟಕುಗೊಳಿಸಿ ದೆಹಲಿಗೆ ವಾಪಸ್ ಆಗಿದ್ದಾರೆ. ಅಲ್ಲದೆ ಇಂದು ದೆಹಲಿಯಲ್ಲಿ ಕಾಂಗ್ರೆಸ್ ಮುಖಂಡರೊಂದಿಗೆ ಸೇರಿ ಪಕ್ಷದ ಪ್ರತಿಭಟನಾ ಮೆರವಣಿಗೆಯಲ್ಲೂ ಪಾಲ್ಗೊಳ್ಳುವ ಮೂಲಕ ರಾಹುಲ್ ಬಂದ್ ಗೆ ಬೆಂಬಲ ನೀಡಿದರು. ಇಂದು ಬೆಳಗ್ಗೆ ಪಕ್ಷದ ಹಿರಿಯ ಮುಖಂಡರಾದ ಗುಲಾಂನಬಿ ಆಜಾದ್, ಅಶೋಕ್ ಗೆಹ್ಲೋಟ್ ಮತ್ತು ಆನಂದ್ ಶರ್ಮಾ ಅವರೊಂದಿಗೆ ರಾಜ್ ಘಾಟ್ ಗೆ ತೆರಳಿದ್ದ ರಾಹುಲ್ ಅಲ್ಲಿ ಮಹಾತ್ಮಗಾಂಧಿ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು. ಬಳಿಕ ಅಲ್ಲಿಯೇ ಸಮೀಪವಿದ್ದ ಪೆಟ್ರೋಲ್ ಬಂಕ್ ಗೆ ತೆರಳಿದ ರಾಹುಲ್ ಅಲ್ಲಿ ಪಕ್ಷದ ಕಾರ್ಯಕರ್ತರು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಬಳಿಕ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರೆಲ್ಲರೂ ಪಾಲ್ಗೊಂಡಿದ್ದ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ರಾಹುಲ್ ಗಾಂಧಿ, ಮೋದಿ ಸರ್ಕಾರದ ಸರ್ವಾಧಿಕಾರಿ ಧೋರಣೆಯಿಂದಾಗಿ ಇಂದು ದೇಶದ ಜನ ಬೀದಿಗಿಳಿಯುವಂತಾಗಿದೆ. ತೈಲೋತ್ಪನ್ನಗಳ ದರ ಏರಿಕೆಯಿಂದಾಗಿ ಬೇಸತ್ತ ಜನ ಇಂದು ತಾವೇ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಆದರೆ ಪ್ರಧಾನಿ ಮೋದಿ ಮಾತ್ರ ತಮ್ಮ ಮೌನ ಮುಂದುವರೆಸಿದ್ದಾರೆ. ದರ ಏರಿಕೆಯಿಂದಾಗಿ ಇಂದು ಜನ ತತ್ತರಿಸಿ ಹೋಗಿದ್ದರೂ ಪ್ರಧಾನಿ ಮೋದಿ ಮಾತ್ರ ಈ ಬಗ್ಗೆ ಒಂದೇ ಒಂದು ಶಬ್ಧ ಮಾತನಾಡುತ್ತಿಲ್ಲ. ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ದೇಶದಲ್ಲಿ ಕೋಮು ಗಲಭೆ, ಗೋ ರಕ್ಷಣೆ ಹೆಸರಲ್ಲಿ ಹಿಂಸಾಚಾರ, ಮಹಿಳೆಯರ ಮೇಲಿನ ಹಿಂಸಾಚಾರ ಹೆಚ್ಚಾಗಿದ್ದರೂ ಪ್ರಧಾನಿ ಮೋದಿ ಮಾತ್ರ ಇನ್ನೂ ತಮ್ಮ ಮೌನ ಮುರಿದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.

ಇಂದು ಈ ಸರ್ವಾಧಿಕಾರಿ ಸರ್ಕಾರದ ವಿರುದ್ಧ ವಿಪಕ್ಷಗಳು ಒಗ್ಗೂಡಿದ್ದು, ಭಾರತ್ ಬಂದ್ ನಮ್ಮ ಬಲ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ಜನರ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಆಲೋಚಿಸದ ಬಿಜೆಪಿ ಸರ್ಕಾರವನ್ನು ನಾವು ಕಿತ್ತೊಗೆಯುತ್ತೇವೆ. ಮುಂದಿನ ಚುನಾವಣೆಯಲ್ಲಿ ಜನ ತಮ್ಮ ಶಕ್ತಿ ಏನು ಎಂಬುದನ್ನು ಮೋದಿ ಮತ್ತು ಬಿಜೆಪಿಗೆ ತೋರಿಸುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿದರು.

ಕಳೆದ ಆಗಸ್ಟ್ 31ರಂದು ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೆಪ್ಟೆಂಬರ್ 12ರಂದು ವಾಪಸ್ ಆಗಮಿಸಬೇಕಿತ್ತು. ಆದರೆ ತಮ್ಮ ಪಕ್ಷದ ನೇತೃತ್ವದಲ್ಲಿ ಭಾರತ್ ಬಂದ್ ಘೋಷಣೆ ಮಾಡಿರುವುದರಿಂದ ರಾಹುಲ್ ತಮ್ಮ ಯಾತ್ರೆಯನ್ನು ಮೊಟಕುಗೊಳಿಸಿ 2 ದಿನ ಮುಂಚಿತವಾಗಿಯೇ ದೆಹಲಿಗೆ ವಾಪಸ್ ಆಗಿದ್ದಾರೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)