ಉಡುಪಿಯಲ್ಲಿ ವಿಶ್ವ ಬಂಟರ ಸಮ್ಮಿಲನ: ಮೇಳೈಸಿದ ಬಂಟರ ವೈಭವ

0
261

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಉಡುಪಿ: ಉಡುಪಿಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಉಡುಪಿ ಜಿಲ್ಲಾ ಬಂಟರ ಸಂಘದ ಸಹಯೋಗದಲ್ಲಿ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಂಗಣದ ಆವರಣದಲ್ಲಿ ಬಂಟರ ವೈಭವ ಮೇಳೈಸಿತು. ಅಭೂತಪೂರ್ವವಾಗಿ ನಡೆದ ವಿಶ್ವ ಬಂಟರ ಸಮ್ಮಿಲನಕ್ಕೆ ದೇಶ ವಿದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬಂಟರು ಆಗಮಿಸಿದ್ದರು.

ಉಡುಪಿಯ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಂಗಣದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮಕ್ಕೆ ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀ ವಿಶ್ವಸಂತೋಷ ಭಾರತೀ ಸ್ವಾಮೀಜಿಯವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಸಮ್ಮೇಳನಕ್ಕಾಗಿ ನಿರ್ಮಿಸಿದ ತೋನ್ಸೆ ಶಶಿರೇಖಾ ಆನಂದ ಶೆಟ್ಟಿ ವೇದಿಕೆಯನ್ನು ಶಶಿರೇಖಾ ಮತ್ತು ಆನಂದ ಶೆಟ್ಟಿಯವರು ಉದ್ಘಾಟಿಸಿದರು.

ಬಳಿಕ ನಡೆದ ಕಾರ್ಯಕ್ರಮದಲ್ಲಿ ಬೈಂದೂರು ಬಂಟರ ಸಂಘದ ಅಧ್ಯಕ್ಷ ಬಿ.ಜಗನ್ನಾಥ ಶೆಟ್ಟಿ, ಬೆಳಗಾವಿ ಉದ್ಯಮಿ ಬಾರಕೂರು ವಿಠ್ಠಲ ಹೆಗ್ಡೆ, ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ, ಮಂಗಳೂರಿನ ದೇವಿ ಎಜುಕೇಶನ್‌ ಸೊಸೈಟಿ ಅಧ್ಯಕ್ಷ ಸದಾನಂದ ಶೆಟ್ಟಿ, ಹಿರಿಯ ಸಂಸ್ಕೃತಿತಜ್ಞ, ಸಾಹಿತಿ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ, ಯಕ್ಷಗಾನ ವಿದ್ವಾಂಸ ಡಾ. ಶಿಮಂತೂರು ನಾರಾಯಣ ಶೆಟ್ಟಿ, ಕಾಸರಗೋಡಿನ ಸಂಘಟಕ ದಾಸಣ್ಣ ಆಳ್ವ, ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಕಾಪುವಿನ ಡಾ.ಪ್ರಭಾಕರ ಶೆಟ್ಟಿ, ಮುಂಬೈ ಉದ್ಯಮಿ ಮೈನಾ ಸುಬ್ಬಣ್ಣ ಶೆಟ್ಟಿ, ಯುಎಇ ಉದ್ಯಮಿ ಸರ್ವೋತ್ತಮ ಶೆಟ್ಟಿ, ಸಮಾಜ ಸೇವಕ ಕಾಪು ವಿಶ್ವನಾಥ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಗಡಿ ಪ್ರಧಾನ ಸಮ್ಮಿಲನದಲ್ಲಿ ಒಟ್ಟು 67 ಮಂದಿ ಗಡಿಪ್ರಧಾನ ಹೊಂದಿದ ಗಡಿಕಾರರನ್ನು  ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಬಂಟರ ಸಾಂಸ್ಕೃತಿಕ ವೈಭವದ ಪ್ರತಿರೂಪಗಳಾದ ಭತ್ತದ ತಿರಿ, ಅಕ್ಕಿಮುಡಿ, ಊರಿನ ಕೋಳಿ, ತೆರೆದ ಬಾವಿ, ಕಂಬಳದ ಕೋಣಗಳು, ದೈವದ ಮನೆಗಳು ಗಮನಸೆಳೆದವು. ಜೊತೆಗೆ ವೇದಿಕೆಯ ಗುತ್ತಿನಮನೆ ಮಾದರಿ ಗಮನ ಸೆಳೆಯಿತು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)