ಮಾತಿನ ಚತುರ ವಾಜಪೇಯಿ ಮಾತಿಲ್ಲದೇ ಮೌನ-ಅಜಾತಶತ್ರು ಅಜರಾಮರ

0
228

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಅಟಲ್ ಬಿಹಾರಿ ವಾಜಪೇಯಿ ಬಿಜೆಪಿ ಪಕ್ಷದ ಪ್ರಭಾವಿ ನಾಯಕ. ದೇಶದಲ್ಲಿ ಬಿಜೆಪಿಯನ್ನು ಬೆಳೆಸಿ ಅಧಿಕಾರಕ್ಕೆ ತಂದ ಶೂರ. ಮಾತಿನಲ್ಲೇ ವಿರೋಧ ಪಕ್ಷಗಳನ್ನು ಕಟ್ಟಿ ಹಾಕಬಲ್ಲ ತೀಕ್ಷ್ಣ ಮೋಡಿಗಾರ. ಹಾಸ್ಯದ ಮೂಲಕ ಸದನವನ್ನೇ ನಗೆಗಡಲಲ್ಲಿ ತೇಲಿಸಬಲ್ಲ ಚತುರ. ಕಾವ್ಯಾತ್ಮಕ ಭಾಷಣ ಶೈಲಿಯಿಂದ ಎಲ್ಲರ ಹೃದಯ ಗೆದ್ದ ಕವಿಹೃದಯಿ. ಮೂರು ಬಾರಿ ಪ್ರದಾನಿಯಾಗಿ ದೇಶವನ್ನು ಮುನ್ನಡೆಸಿದ ಬಿಜೆಪಿಯ ಛಲಗಾರ. 2000 ಇಸವಿ ಎಂದರೆ ಅದು ವಾಜಪೇಯಿ ಯುಗ. ಅವರದ್ದೇ ಸಾಮ್ರಾಜ್ಯ. ಯಾರನ್ನೂ ನೋಯಿಸದೇ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಚಾಕಚಕ್ಯತೆಯ ಚಾಣಕ್ಯ. ಅಂತಹ ವಾಜಪೇಯಿ ತನ್ನ 93ರ ಹರೆಯದಲ್ಲಿ ನಮ್ಮನ್ನಗಲಿದರು. ದೈವಾಧೀನರಾದರು.

ಅಟಲ್ ಬಿಹಾರಿ ವಾಜಪೇಯಿಯವರ ಕೊನೆಯ ದಿನಗಳನ್ನು ನೆನೆಯುವಾಗ ಬೇಸರ, ದುಖ ಒತ್ತೊತ್ತಿ ಬರುತ್ತದೆ. ಹೊಸದಿಲ್ಲಿಯ ಅಶೋಕಾ ರಸ್ತೆಯಲ್ಲಿರುವ ಬಿಜೆಪಿ ಪ್ರಧಾನ ಕಛೇರಿಯಿಂದ ಅನತಿ ದೂರದಲ್ಲಿರುವ (ಕೇವಲ 5 ನಿಮಿಷದ ಹಾದಿ) ಕೃಷ್ಣ ಮೆನನ್ ಮಾರ್ಗದ ವಾಜಪೇಯಿ ಬಂಗಲೆಯಲ್ಲಿ ಕೊನೆಯ ದಿನಗಳನ್ನು ಕಳೆದ ವಾಜಪೇಯಿ ಅವರು ಕೊನೆಯುಸಿರೆಳೆಯುವ ಮುನ್ನ ಕಳೆದ ಎರಡು ತಿಂಗಳಿನಿಂದ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿ ಕೃತಕ ಉಸಿರಾಟದ ಯಂತ್ರ ಉಪಯೋಗಿಸುತ್ತಿದ್ದರು. ಪಾರ್ಶ್ವವಾಯು ರೋಗದಿಂದ ಹಲವಾರು ವರ್ಷಗಳಿಂದ ಮನೆಯಲ್ಲಿ ಹಾಸಿಗೆ ಹಿಡಿದಿದ್ದ ಅಟಲ್ ಬಿಹಾರಿ ವಾಜಪೇಯಿ ಎಂಬ ಅಜಾತಶತ್ರು ಆಕಾಶ ದಿಟ್ಟಿಸುತ್ತಾ ಮಲಗಿದ್ದರು. ಒಂದು ಕಾಲದಲ್ಲಿ ನೂರಾರು ಬಿಜೆಪಿ ನಾಯಕರು, ಕಾರ್ಯಕರ್ತರ ಮಧ್ಯೆ ಇದ್ದ ವಾಜಪೇಯಿ ಕೊನೆ ಘಳಿಗೆಯಲ್ಲಿ ಯಾರಿಗೂ ಬೇಡವಾಗಿದ್ದರು. ದೇಹಕ್ಕೆ ಲಕ್ವ ಹೊಡೆದ ಕಾರಣ ವಾಜಪೇಯಿ ಅವರ ಮಾತೂ ನಿಂತಿತ್ತು. ಎಲ್ಲವನ್ನೂ ಕಣ್ಣಿನಲ್ಲೇ ಅರ್ಥೈಸುತ್ತಿದ್ದರು. ನಾಡಿನ ವಿದ್ಯಾಮಾನದ ಅರಿವಿಲ್ಲದೇ ತದೇಕಚಿತ್ತದಿಂದ ದೃಷ್ಟಿ ಹಾಯಿಸುತ್ತಿದ್ದ ಅಂದಿನ ಪ್ರಭಾವಿ ಪ್ರಧಾನಿಯನ್ನು ಜೀವನದ ಕೊನೆಯ ದಿನಗಳಲ್ಲಿ ನೋಡುವಾಗ ಮನಸ್ಸು ಭಾರವಾಗುತ್ತಿತ್ತು.

ವಾಜಪೇಯಿ ಅಧಿಕಾರದಲ್ಲಿದ್ದಾಗ ಅವರ ಸುತ್ತ ಸುಳಿದಾಡುತ್ತಿದ್ದ ನಾಯಕರು ಅವರು ಹಾಸಿಗೆಯಲ್ಲಿದ್ದಾಗ ಕಾಣೆಯಾಗಿದ್ದರು. ವಾಜಪೇಯಿಯವರ ಅತ್ಯಂತ ಆಪ್ತರಾದ ಹಿರಿಯ ವಕೀಲರೂ, ಬರಹಗಾರರಾದ ಎನ್.ಎಂ.ಘಟಾಟೆ ವಾರಕ್ಕೊಮ್ಮೆ ಅಥವಾ ವಾರಕ್ಕೆರಡು ಬಾರಿ ಬಂದು ವಾಜಪೇಯಿ ಹತ್ರ ಕುಳಿತು ಹೋಗುತ್ತಿದ್ದರು. ಆರು ದಶಕಗಳ ಒಡನಾಡಿ ಮಾಜಿ ಉಪಪ್ರಧಾನಿ ಎಲ್.ಕೆ.ಆಡ್ವಾಣಿ, ಉತ್ತರಾಖಂಡದ ಮುಖ್ಯಮಂತ್ರಿಯಾಗಿದ್ದ ಬಿ.ಸಿ.ಖಂಡೂರಿ ಅವರು ವಾಜಪೇಯಿ ನಿವಾಸಕ್ಕೆ ನಿಯಮಿತವಾಗಿ ಬಂದು ಯೋಗಕ್ಷೇಮ ವಿಚಾರಿಸಿ ಹೋಗುತ್ತಿದ್ದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆಗಾಗ್ಗೆ ವಾಜಪೇಯಿ ಆರೋಗ್ಯ ವಿಚಾರಿಸುತ್ತಿದ್ದರು. ಹುಟ್ಟುಹಬ್ಬಕ್ಕೆ ವೈಯಕ್ತಿಕ ಶುಭಾಶಯ ಹೇಳಲೂ ಮರೆಯುತ್ತಿರಲಿಲ್ಲ. ಇವಿಷ್ಟು ಬಿಟ್ಟರೆ ವಾಜಪೇಯಿಯತ್ತ ತಿರುಗಿ ನೋಡುವ ನಾಯಕರಿರಲಿಲ್ಲ. ಅವರ ಪಕ್ಷದ ನೇತಾರರೇ ಅವರನ್ನು ಕಡೆಗಣಿಸಿದ್ದರು.

ವಾಜಪೇಯಿ ಲಕ್ವ ಹೊಡೆದು ಮಾತು ಕಳಕೊಂಡು ಮಲಗಿದ್ದರೂ ಮಾನಸಿಕವಾಗಿ ಜಾಗೃತರಾಗಿದ್ದರು. ಫಿಸಿಯೋಥೆರಪಿ ತಜ್ಞರು, ವೈದ್ಯರು ಮತ್ತು ದಾದಿಯರು ವಾಜಪೇಯಿಯವರ ಕೊನೆಗಾಲದ ಒಡನಾಡಿಗಳಾಗಿದ್ದರು. ದೀರ್ಘಕಾಲದ ಅನಾರೋಗ್ಯದಿಂದ ವಾಜಪೇಯಿಯವರ ಮನಸ್ಸು ಮಂಕಾಗಿತ್ತು. ಹಾಸ್ಯಪ್ರಜ್ಞೆ ಕಳೆದುಹೋಗಿತ್ತು. ಮಾತಿಲ್ಲ. ಬರೇ ಮೌನ… ಮೌನ… ಮೌನ. ವಾಜಪೇಯಿ ಕೊನೆಗೆ ದುರಂತ ನಾಯಕನಾಗಿ ಅಸುನೀಗಿದರು..! ಅವರ ಆತ್ಮಕ್ಕೆ ಶಾಂತಿ ಸಿಗಲಿ.

-ರಶೀದ್ ವಿಟ್ಲ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)