ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಕಾಯಂ

0
215

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಹೊಸದಿಲ್ಲಿ[ಜು.9] : ದೇಶವನ್ನೇ ತಲ್ಲಣಗೊಳಿಸಿದ್ದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಅಪರಾಧಿಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್ ಅವರಿಗೆ ಗಲ್ಲು ಶಿಕ್ಷೆ ಕಾಯಂ ಮಾಡಿದೆ.

ನಿರ್ಭಯಾ ಪ್ರಕರಣದಲ್ಲಿ ತಮಗೆ ನೀಡಿರುವ ಗಲ್ಲು ಶಿಕ್ಷೆಯನ್ನು ಪ್ರಶ್ನಿಸಿ, ದೋಷಿಗಳು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಮನವಿಯ ವಿಚಾರಣೆ ನಡೆಸಿದ ಕೋರ್ಟ್, ಜು. 9ರಂದು ಕೆಳ ನ್ಯಾಯಾಲಯದ ಆದೇಶವನ್ನೇ ಎತ್ತಿ ಹಿಡಿಯಿತು.

ಡಿಸೆಂಬರ್ 2012ರಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ದೇಶವೇ ಬೆಚ್ಚಿ ಬಿದ್ದಿತ್ತು. ಎಲ್ಲೆಡೆಯಿಂದ ಈ ಘಟನೆಗೆ ವಿರೋಧ ವ್ಯಕ್ತವಾಗಿದ್ದು, ದೋಷಿಗಳಿಗೆ ಸೂಕ್ತ ಶಿಕ್ಷೆಯಾಗಬೇಕೆಂದು ಆಗ್ರಹಿಸಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ದಿಲ್ಲಿ ಕೋರ್ಟ್ ಆರೋಪಿಗಳಾದ ಪವನ್ ಗುಪ್ತಾ (22), ವಿನಯ್ ಶರ್ಮಾ (23), ಮುಖೇಶ್ (29) ಮತ್ತು ಅಕ್ಷಯ್ ಕುಮಾರ್ ಸಿಂಗ್‌ (31)ಗೆ ಗಲ್ಲು ಶಿಕ್ಷೆ ಕಾಯಂ ಮಾಡಿದೆ.

ತಮಗೆ ನೀಡಿರುವ ಶಿಕ್ಷೆಯನ್ನು ಪ್ರಶ್ನಿಸಿ, ಅಕ್ಷಯ್ ಹೊರತು ಪಡಿಸಿ ಉಳಿದ ಆರೋಪಿಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಸುಪ್ರೀಂ ಕೋರ್ಟ್ ಸಹ ಹೈ ಕೋರ್ಟ್ ತೀರ್ಪನ್ನು 2017ರಲ್ಲಿ ಎತ್ತಿ ಹಿಡಿದಿತ್ತು. ಆದರೆ, ಮತ್ತೆ ದೋಷಿಗಳು ಮೇಲ್ಮನವಿ ಸಲ್ಲಿಸಿದ್ದು, ಅದರ ವಿಚಾರಣೆ ನಡೆಸಿದ ಸುಪ್ರೀಂ ಮಹತ್ವದ ಆದೇಶ ನೀಡಿದೆ.

ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸಲು ಅವಕಾಶ : ಸುಪ್ರೀಂ ಈ ದೋಷಿಗಳಿಗೆ ಗಲ್ಲು ಕಾಯಂಗೊಳಿಸಿದ್ದು, ಶಿಕ್ಷೆಯಿಂದ ಪಾರಾಗಲು ಮತ್ತೊಂದು ಅವಕಾಶವಿದೆ. ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸುವ ಅವಕಾಶವೊಂದು ಆ ಅಪರಾಧಿಗಳಿಗಿದ್ದು, ರಾಷ್ಟ್ರಪತಿ ನಿರ್ಧಾರವೇನಾಗಬಹುದೋ ಕಾದು ನೋಡಬೇಕು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)