ಓರ್ವ ಮುಳುಗುತಜ್ಞ ಸಾವು: 14 ದಿನಗಳಿಂದ ಥಾಯ್ಲೆಂಡ್‌ ಗುಹೆಯಲ್ಲಿರುವ ಬಾಲಕರಿಗೆ ಆಮ್ಲಜನಕ ಕೊರತೆ

0
220

ಹೆಚ್ಚಿನ ಓದುಗರು ಈ ಸುದ್ದಿಯನ್ನು ಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬ್ಯಾಂಕಾಕ್‌: ಥಾಯ್ಲೆಂಡ್‌ನ‌ ಗುಹೆಯಲ್ಲಿ ಸಿಲುಕಿಕೊಂಡ ಫ‌ುಟ್‌ಬಾಲ್‌ ತಂಡದ 12 ಬಾಲಕರು ಮತ್ತು ಕೋಚ್‌ ಅವರನ್ನು ಶೀಘ್ರ ರಕ್ಷಿಸಬೇಕಾದ ಅನಿವಾರ್ಯ ಈಗ ಉಂಟಾಗಿದೆ. ಗುಹೆಯಲ್ಲಿ ಆಮ್ಲಜನಕ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದು, ಆತಂಕಕಾರಿ ಮಟ್ಟ ತಲುಪಿದೆ. ಆರಂಭದಲ್ಲಿ ನೀರಿನ ಮಟ್ಟ ಇಳಿಯುವವರೆಗೆ, ಅಂದರೆ ಮೂರ್‍ನಾಲ್ಕು ತಿಂಗಳವರೆಗೆ ಅವರನ್ನು ಅಲ್ಲೇ ಉಳಿಸುವ ಬಗ್ಗೆ ಥಾಯ್ಲೆಂಡ್‌ ಅಧಿಕಾರಿಗಳು ಯೋಚಿ ಸಿದ್ದರು. ಈಗ ಆಮ್ಲ ಜನಕ ಅಪಾಯಕಾರಿ ಮಟ್ಟ ತಲುಪಿದ್ದು, ರಕ್ಷಣೆ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.

ಮುಳುಗುತಜ್ಞ  ಸಾವು
ಗುಹೆಯಲ್ಲಿದ್ದವರಿಗೆ ಆಮ್ಲಜನಕ ಸಿಲಿಂಡರ್‌ ತಲುಪಿಸಿ ವಾಪಸ್‌ ಬರುತ್ತಿರು ವಾಗ ಆಮ್ಲಜನಕ ಕೊರತೆಯಾಗಿ ನೌಕಾ ಪಡೆ ಮಾಜಿ ಮುಳುಗುತಜ್ಞ ಸಮನ್‌ ಕುನನ್‌ ಸಾವನ್ನಪ್ಪಿದ್ದಾರೆ. ವಾಪಸ್‌ ಬರುವಾಗ ಸಮನ್‌ ಬಳಿ ಸಾಕಷ್ಟು ಪ್ರಮಾಣದ ಆಮ್ಲಜನಕ ಇರಲಿಲ್ಲ ಎಂದು ಹೇಳಲಾಗಿದೆ. ಜತೆಗಿದ್ದ ಮುಳುಗು ತಜ್ಞ ಅವರನ್ನು ರಕ್ಷಿಸಲು ಪ್ರಯತ್ನಿಸಿದರಾದರೂ ಫ‌ಲ ನೀಡಲಿಲ್ಲ. ಈ ಘಟನೆಯಿಂದಾಗಿ ಬಾಲಕರನ್ನು ಸುರಕ್ಷಿತವಾಗಿ ವಾಪಸ್‌ ಕರೆತರುವ ಸಾಧ್ಯತೆಯ ಬಗ್ಗೆ ಆತಂಕ ಮೂಡಿದೆ. ನೌಕಾಪಡೆ ಸೀಲ್‌ನ ಮುಖ್ಯಸ್ಥ ಅಫಾಕೋರ್ನ್ ಯೂ ಕಾಂಗ್‌ಕೇವ್‌ ಹೇಳುವಂತೆ, ಗುಹೆಯಲ್ಲಿ ಆಮ್ಲಜನಕವು ಶೇ.15ರ ಮಟ್ಟಕ್ಕೆ ಕುಸಿದಿದ್ದು, ಇದರಿಂದಾಗಿ ಹೈಪಾಕ್ಸಿಯಾದಂತಹ ರೋಗ ಕಾಣಿಸಿಕೊಳ್ಳಬಹುದಾಗಿದೆ.

ಕೇಬಲ್‌ ಸಂಪರ್ಕಕ್ಕೆ ಪ್ರಯತ್ನ: ಈ ಬಾಲಕರು ತಮ್ಮ ಕುಟುಂಬದವರೊಂದಿಗೆ ಮಾತನಾಡಲು ಮತ್ತು ಹೊರಜಗತ್ತಿಗೆ ಸಂಪರ್ಕ ಸಾಧಿಸಲು ಅನುವಾಗುವುದಕ್ಕಾಗಿ ಒಎಫ್ಸಿ ಕೇಬಲ್‌ ಸಂಪರ್ಕಿಸಲೂ ತಜ್ಞರು ಪ್ರಯತ್ನ ನಡೆಸಿದ್ದಾರೆ. ಜತೆಗೆ ಕೇಬಲ್‌ ಮೂಲಕ ಆಕ್ಸಿಜನ್‌ ಪೂರೈಸುವ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ.

ಮತ್ತೆ ಮಳೆ ಭೀತಿ: ಶನಿವಾರ ಹಾಗೂ ರವಿವಾರ ಮತ್ತೆ ಭಾರೀ ಮಳೆ ಸುರಿಯುವ ಭೀತಿಯಿದ್ದು, ನೀರಿನ ಮಟ್ಟ ಗುಹೆಯಲ್ಲಿ ಏರುವ ಸಾಧ್ಯತೆಯಿದೆ. ಸದ್ಯ ಸೇನೆಯು ಗುಹೆಯಲ್ಲಿನ ನೀರನ್ನು ಪಂಪ್‌ ಮೂಲಕ ಹೊರಹಾಕುತ್ತಿದೆ. ಆದರೆ ನೀರಿನ ಮಟ್ಟವನ್ನು ಗಮನಾರ್ಹ ಪ್ರಮಾಣದಲ್ಲಿ ಕಡಿಮೆ ಮಾಡಲು ಸಾಧ್ಯವಾಗಿಲ್ಲ.

ರಕ್ಷಣೆ ಸಾಧ್ಯತೆಯೇನು?: ಸಿಲುಕಿಕೊಂಡಿರುವ ಕೆಲವು ಬಾಲಕರಿಗೆ ಈಜಲೂ ತಿಳಿದಿಲ್ಲ. ಅಲ್ಲದೆ ಅವರಿಗೆ ಈಜುವ ಸಲಕರಣೆಗಳನ್ನು ಧರಿಸಲು ಮತ್ತು ಅದನ್ನು ಬಳಸಿ ಈಜಲು ಹೇಳಿಕೊಟ್ಟು ಹೊರಗೆ ಕರೆತರುವುದು ಅತ್ಯಂತ ಕಷ್ಟಕರವಾಗಿದೆ ಮತ್ತು ಇದು ಅವರ ಸಾವು ಬದುಕಿನ ಪ್ರಶ್ನೆಯೂ ಆಗಲಿದೆ. ಈ ಮಧ್ಯೆಯೇ ಗುಹೆಗೆ ಸಮೀಪದ ಪರ್ವತ ಪ್ರದೇಶಗಳಿಂದ ಇರಬಹುದಾದ ಗುಹೆ ಸಂಪರ್ಕದ ಬಗ್ಗೆಯೂ ಹುಡುಕಾಟ ನಡೆಸಲಾಗುತ್ತಿದೆ. ಈವರೆಗೆ ಇದು ಫ‌ಲ ನೀಡಿಲ್ಲ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)