ಸಿಎಂ ಕುಮಾರಸ್ವಾಮಿ ಪತ್ನಿ ಅನಿತಾ ಹಾಗೂ ಪುತ್ರ ನಿಖಿಲ್‌ ಚುನಾವಣಾ ಕಣಕ್ಕೆ..?

0
185

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೆಂಗಳೂರು : ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅಥವಾ ಪುತ್ರ ನಿಖಿಲ್‌ ಕುಮಾರಸ್ವಾಮಿ ಕಣಕ್ಕಿಳಿಯುವ ನಿರೀಕ್ಷೆಯಿದೆ.

ರಾಮನಗರ ಮತ್ತು ಚನ್ನಪಟ್ಟಣ ಎರಡೂ ಕ್ಷೇತ್ರಗಳಿಂದ ಆಯ್ಕೆಯಾಗಿದ್ದ ಕುಮಾರಸ್ವಾಮಿ ಅಂತಿಮವಾಗಿ ಚನ್ನಪಟ್ಟಣವನ್ನು ಆಯ್ಕೆ ಮಾಡಿಕೊಂಡಿದ್ದರು. ರಾಮನಗರ ವಿಧಾನಸಭಾ ಕ್ಷೇತ್ರದ ಸದಸ್ಯತ್ವಕ್ಕೆ ಮೇ 26 ರಂದು ರಾಜೀನಾಮೆ ಸಲ್ಲಿಸಿದ್ದರು.

ಉಪಚುನಾವಣೆ ಘೋಷಣೆ ಹೊರಬೀಳುವ ನಿರೀಕ್ಷೆಯಲ್ಲಿ ಯಾರು ಅಭ್ಯರ್ಥಿಯಾಗಬೇಕು ಎಂಬ ಕುರಿತು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರ ನಿವಾಸದಲ್ಲಿ ಸೋಮವಾರ ಅನೌಪಚಾರಿಕ ಚರ್ಚೆ ನಡೆದಿದ್ದು, ಕುಟುಂಬದ ಸದಸ್ಯರನ್ನೇ ಕಣಕ್ಕಿಳಿಸುವ ಪ್ರಸ್ತಾಪಕ್ಕೆ ಸಿಎಂ ಕುಮಾರಸ್ವಾಮಿ ಹಾಗೂ ಎಚ್‌.ಡಿ.ರೇವಣ್ಣ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ಪಕ್ಷದ ಉಸ್ತುವಾರಿ ವಹಿಸಿ ರಾಜ್ಯ ಪ್ರವಾಸ ಕೈಗೊಂಡಿದ್ದ ಹಿನ್ನೆಲೆಯಲ್ಲಿ ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರಗಳ ಚುನಾವಣೆಯನ್ನು ಅನಿತಾ ಕುಮಾರಸ್ವಾಮಿ ನಿರ್ವಹಿಸಿದ್ದರು. ಹೀಗಾಗಿ, ಅವರನ್ನೇ ಕಣಕ್ಕೆ ಇಳಿಸಬೇಕು ಎಂದು ದೇವೇಗೌಡರು ಬಯಸಿದ್ದಾರೆ. ತಮ್ಮ ರಾಜಕೀಯ ಬದುಕಿಗೆ ವೇದಿಕೆಯಾದ ರಾಮನಗರ ಕ್ಷೇತ್ರದ ಮೂಲಕವೇ ಪುತ್ರ ನಿಖಿಲ್‌ ಕುಮಾರಸ್ವಾಮಿಯನ್ನು ರಾಜಕಾರಣಕ್ಕೆ ಪರಿಚಯಿಸುವ ಆಸೆಯೂ ಸಿಎಂ ಕುಮಾರಸ್ವಾಮಿ ಅವರಲ್ಲಿದೆ. ಅನಿತಾ ಕುಮಾರಸ್ವಾಮಿ ತಪ್ಪಿದರೆ, ನಿಖಿಲ್‌ ಅಭ್ಯರ್ಥಿಗಳಾಗಲಿದ್ದು, ಸದ್ಯಕ್ಕೆ ಜೆಡಿಎಸ್‌ನಿಂದ ಬೇರೆ ಅಭ್ಯರ್ಥಿಗಳ ಪ್ರಸ್ತಾವನೆ ಇಲ್ಲ ಎಂದು ಹೇಳಲಾಗಿದೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)