ಬಿಜೆಪಿ ಕಾರ್ಯಕರ್ತರ ಅಭಿನಂದನಾ ಕಾರ್ಯಕ್ರಮ ಹಾಗೂ ಶಾಸಕರಿಗೆ ಸನ್ಮಾನ ಸಮಾರಂಭ

0
531

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (4) ಅಭಿಪ್ರಾಯವಿಲ್ಲ (0)

ಶಿರೂರು : ಈ ಬಾರಿಯ ಚುನಾವಣೆಯಲ್ಲಿ ವಿಜಯಿಯಾಗುವ ಆತ್ಮವಿಶ್ವಾಸ, ನನ್ನ ಮೇಲೆ ಪಕ್ಷದ ಮುಖಂಡರು, ಕಾರ್ಯಕರ್ತರು ಇಟ್ಟ ಪ್ರೀತಿ-ವಿಶ್ವಾಸ ಹಾಗೂ ಕ್ಷೇತ್ರದಾದ್ಯಂತ ಬದಲಾವಣೆಯ ಗಾಳಿ ಬೀಸಿದ್ದರಿಂದ ಬೈಂದೂರು ಕ್ಷೇತ್ರದಲ್ಲಿ ಅತೀ ಹೆಚ್ಚು ಮತಗಳ ಅಂತರದಿಂದ ಬಿಜೆಪಿ ವಿಜಯಪತಾಕೆ ಹಾರಿಸಲು ಸಾಧ್ಯವಾಯಿತು ಎಂದು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು.

ಶಿರೂರು ಶ್ರೀವೆಂಕಟರಮಣ ಕಲ್ಯಾಣಮಂಟಪದಲ್ಲಿ ಶನಿವಾರ ಶಿರೂರು ಬಿಜೆಪಿ ಗ್ರಾಮಸಮಿತಿ ಆಶ್ರಯದಲ್ಲಿ ನಡೆದ ಕಾರ್ಯಕರ್ತರ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿಮಾನಿಗಳ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಈ ಬಾರಿ ಕ್ಷೇತ್ರದ ಜನತೆ ನನ್ನ ಮೇಲಿಟ್ಟ ನಂಬಿಕೆ ಉಳಿಸಿಕೊಳ್ಳಲು ಎಲ್ಲಾ ವರ್ಗದ ಜನರ ಸೇವಕನಾಗಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿವುದಾಗಿ ಹೇಳಿದ ಅವರು ಬೈಂದೂರು ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರಬೇಕೆಂಬ ಯೋಚನೆಯಿದೆ. ಸಮಾಜ ಸೇವೆಗೆ ಮುಡುಪಾಗಿಟ್ಟುಕೊಂಡ ನನ್ನೊಂದಿಗೆ ತಾವೆಲ್ಲರೂ ಕೈಜೋಡಿಸಬೇಕು. ಎಲ್ಲರೂ ಒಂದಾಗಿ ಹೋದಾಗ ಮಾತ್ರ ಯಶಸ್ಸು ಪಡೆಯಲು ಸಾಧ್ಯ ಜೀವನ ಪರ್ಯಂತ ಯಾರಿಗೂ ಯಾವುದೇ ಕಾರಣಕ್ಕೂ ವಿಸ್ವಾಸದ್ರೋಹ ಮಾಡಲಾರೆ. ರಾಜಕೀಯ ಕ್ಷೇತ್ರಕ್ಕೆ ಹೊಸಬನಾದರೂ ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ದುಡಿದು ಸಾಕಷ್ಟು ಅನುಭವವಿದೆ. ಆ ನಿಟ್ಟಿನಲ್ಲಿ ಜನರೊಂದಿಗೆ ಸೇರಿ ಮುನ್ನಡೆಯುವೆ ಎಂದರು.

ಕ್ಷೇತ್ರದಲ್ಲಿ ಈ ವರೆಗೆ ನಡೆಸಲಾಗಿರುವ ಬಹುಪಾಲು ಕಾಮಗಾರಿಗಳು ಕಳಪೆಯದ್ದಾಗಿದ್ದು, ಇಲಾಖಾ ಅಭಿಯಂತತರಿಗೆ ಈ ಬಗ್ಗೆ ಈಗಾಗಲೇ ತಿಳಿಸಿದ್ದೇನೆ. ಇದು ಸರಕಾರದ ದುಡ್ಡನ್ನು ಗುತ್ತಿಗೆದಾರರ ಮೂಲಕ ಕೊಳ್ಳೆ ಹೊಡೆಯುವ ಮಾಸ್ಟರ್ ಪ್ಲಾನ್ ಆಗಿದ್ದು, ಇನ್ನು ಮುಂದೆ ಕ್ಷೇತ್ರದಲ್ಲಿ ಇಂತಹ ಕಳಪೆ ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದು ಘೋಷಿಸಿದರು.

ಗ್ರಾಮಸಮಿತಿ ಅಧ್ಯಕ್ಷ ಶಂಕರ ಡಿ. ಮೇಸ್ತ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭ ಶಾಸಕರಿಗೆ ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು ಸನ್ಮಾನಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು, ಪ್ರಧಾನ ಕಾರ್ಯದರ್ಶಿ ನೆಲ್ಯಾಡಿ ದೀಪಕ್‍ಕುಮಾರ್ ಶೆಟ್ಟಿ, ಜಿಪಂ ಸದಸ್ಯ ಸುರೇಶ ಬಟ್ವಾಡಿ, ತಾಪಂ ಸದಸ್ಯ ಮೌಲಾನ ದಸ್ತಗೀರ್ ಸಾಹೇಬ್, ಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ್ ಶೆಟ್ಟಿ, ಬಿಜೆಪಿ ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು. ತಾಪಂ ಸದಸ್ಯ ಪುಷ್ಪರಾಜ್ ಶೆಟ್ಟಿ ಪ್ರಾಸ್ತಾವಿಸಿದರು. ತಳಸೀದಾಸ್ ಮೋಗೇರ ನಿರೂಪಿಸಿ, ಸಚಿನ್ ಮೊಗೇರ ವಂದಿಸಿದರು.

ಶಿರೂರು ಮಾರ್ಗ ಮಧ್ಯದಲ್ಲಿ ಬೈಂದೂರು ಒತ್ತಿನಣೆಯಲ್ಲಿ ನಡೆಸಲಾಗಿರುವ ಕಾಮಗಾರಿಯ ಮತ್ತೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಆ ಪ್ರದೇಶಕ್ಕೆ ಶಾಸಕರು ಭೇಟಿನೀಡಿ ಪರಿಶೀಲಿಸಿದರು.

ವರದಿ : ಬಿ ನರಸಿಂಹ ನಾಯಕ್ ಉಪ್ಪುಂದ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (4) ಅಭಿಪ್ರಾಯವಿಲ್ಲ (0)