ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಜಾಥಾ ಹಾಗೂ ಸಸಿ ನೆಡುವ ಕಾರ್ಯಕ್ರಮವು

0
633

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

  

ಪರಿಸರ ಜಾಗೃತಿ ಜಾಥಾ, ವೃಕ್ಷಾರೋಪಣ, ಪ್ಲಾಸ್ಟಿಕ್ ಸೌಧಕ್ಕೆ ಚಾಲನೆ, ಸಭಾ ಕಾರ್ಯಕ್ರಮದಲ್ಲಿ ಗಣ್ಯರಿಂದ, ಪರಿಣತರಿಂದ ಪರಿಸರ ಸಂಬಂಧೀ ಅತ್ಯಮೂಲ್ಯ ಸಂದೇಶ ಬಿತ್ತರ, ಸ್ಪರ್ಧಾ ವಿಜೇತರಿಗೆ ಬಹುಮಾನ ಪ್ರದಾನ ಹಾಡು, ನೃತ್ಯ, ನೃತ್ಯ ರೂಪಕಗಳ ಬಹು ಆಯಾಮಗಳ ಸಂಯೋಜನೆಯೊಂದಿಗೆ ತ್ರಾಸಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ವಿಶ್ವ ಪರಿಸರ ದಿನಾಚರಣೆ ಅರ್ಥಪೂರ್ಣವಾಗಿ ಪ್ರಸ್ತುತಗೊಂಡಿತು.

ಬೆಳಿಗ್ಗೆ 8 ಗಂಟೆಗೆ ಮರವಂತೆ ಬೀಚ್‍ಗೆ ಬಂದು ಸೇರಿದ ತಾಲ್ಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಸ್ಕೌಟ್, ಗೈಡ್ ಮಕ್ಕಳು ಶಿಕ್ಷಕರ ಜತೆಗೆ ಪರಿಸರ ಜಾಗೃತಿ ಮೂಡಿಸುವ ಘೋಷಣಾ ಫಲಕಗಳನ್ನು ಹಿಡಿದು ಚೆಂಡೆಯ ಸದ್ದಿಗೆ ಹೆಜ್ಜೆ ಹಾಕುತ್ತ ತ್ರಾಸಿಯ ಪ್ರವಾಸೀ ಉದ್ಯಾನದ ವರೆಗೆ ಜಾಥಾ ನಡೆಸಿದರು. ಜಾಥಾಕ್ಕೆ ಚಾಲನೆ ನೀಡಿದ್ದ ಕುಂದಾಪುರದ ಸಹಾಯಕ ಆಯುಕ್ತ ಟಿ. ಭೂಬಾಲನ್ ಉದ್ಯಾನದಲ್ಲಿ ಗಿಡಗಳನ್ನು ನೆಟ್ಟರಲ್ಲದೆ, ಪ್ಲಾಸ್ಟಿಕ್ ತ್ಯಾಜ್ಯ ಹಾಕಲೆಂದು ನಿರ್ಮಿಸಿದ್ದ ಪ್ಲಾಸ್ಟಿಕ್ ಸೌಧಗಳನ್ನು ಉದ್ಘಾಟಿಸಿದರು. ಆ ಬಳಿಕ ಅಲ್ಲಿನ ಕೊಂಕಣಿ ಖಾರ್ವಿ ಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಸಭೆಗೆ ಮುನ್ನ ಕಲಾವಿದ ಗಣೇಶ ಗಂಗೊಳ್ಳಿ ಬಳಗ ಪರಿಸರ ಗೀತೆಗಳನ್ನು ಪ್ರಸ್ತುತಪಡಿಸಿತು.

ಬೈಂದೂರಿನ ಸುರಭಿ ಕಲಾಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ, ರಂಗ ಸುರಭಿಯ ಬಾಲ ಕಲಾವಿದರಿಂದ ಪರಿಸರ ಪ್ರೇಮದ ಅಗತ್ಯ ಸಾರುವ ‘ಒಂದು ಗುಬ್ಬಿಯ ಹಾಡು’ ನೃತ್ಯ ರೂಪಕ ಪ್ರದರ್ಶನಗೊಂಡಿತು. ಪರಿಸರ ರಕ್ಷಣೆ ಕುರಿತು ನಡೆಸಿದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಪಾರಿತೋಷಕ ವಿತರಿಸಲಾಯಿತು. ಗಿಡಕ್ಕೆ ನೀರು ಸುರಿಯುವ ಮೂಲಕ ನಡೆದ ಉದ್ಘಾಟನೆ, ಅತಿಥಿಗಳಿಗೆ ಸ್ಮರಣಿಕೆಯ ರೂಪದಲ್ಲಿ ನೀಡಿದ ಗಂಧದ ಗಿಡ ಪರಿಸರಪರ ಸಂದೇಶ ಸಾರಿದುವು. ಪಾಲ್ಗೊಂಡಿದ್ದ ಸಾವಿರಕ್ಕೂ ಮಿಕ್ಕಿದ ವಿದ್ಯಾರ್ಥಿಗಳಿಗೆ ಮಜ್ಜಿಗೆ, ಉಪಾಹಾರ, ಊಟ ನೀಡುವುದರ ಜತೆಗೆ ಬಟ್ಟೆಯ ಕೈಚೀಲ, ಕೊಡೆಗಳನ್ನೂ ವಿತರಿಸಿ ಅವರನ್ನು ಆದರಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಯಶಸ್ವಿಯಾಗಿ ನಡೆದ ಕಾರ್ಯಕ್ರಮದ ಹಿಂದೆ ಮಾಲಿನ್ಯ ನಿಯಂತ್ರಣ ಮಂಡಳಿಯ ಉಡುಪಿ ಜಿಲ್ಲೆಯ ಅಧಿಕಾರಿ, ಸಿಬ್ಬಂದಿಯ ಶ್ರಮ, ಸಹಯೋಗ ನೀಡಿದ ಇಲಾಖೆಗಳ ಸಹಕಾರ ಎದ್ದುಕಂಡಿತು.

 

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)