ಪ್ರಧಾನಿ ಮೋದಿ ವಿರುದ್ಧ ರಾಷ್ಟ್ರಪತಿಗೆ ದೂರು

0
184

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ನವದೆಹಲಿ [ಮೇ.14]: ನರೇಂದ್ರ ಮೋದಿ ಪ್ರಧಾನಿ ಹುದ್ದೆಯ ಘನತೆಗೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ ಎಂದು ಆರೊಪಿಸಿರುವ ಕಾಂಗ್ರೆಸ್ ಪಕ್ಷವು ಸೋಮವಾರ ರಾಷ್ಟ್ರಪತಿಯವರಿಗೆ ದೂರು ನೀಡಿದೆ.

 ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರಿಗೆ ಸಲ್ಲಿಸಿರುವ 2 ಪುಟಗಳ ದೂರಿನಲ್ಲಿ ಕಾಂಗ್ರೆಸ್, ಹುಬ್ಬಳ್ಳಿಯಲ್ಲಿ  ಚುನಾವಣಾ ಪ್ರಚಾರ ಸಭೆಯಲ್ಲಿ ಮಾಡಿರುವ ಭಾಷಣವನ್ನು ಪ್ರಸ್ತಾಪಿಸಿದೆ.

ಭಾರತವು ಈವರೆಗೆ ಕಂಡ ಎಲ್ಲಾ ಪ್ರಧಾನಿಗಳು ಹುದ್ದೆಯ ಗೌರವ-ಘನತೆಗಳನ್ನು ಕಾಪಾಡಿದ್ದಾರೆ. ಆದರೆ ನರೇಂದ್ರ ಮೋದಿ, ಸಾರ್ವಜನಿಕವಾಗಿ ಬೆದರಿಕೆಯೊಡ್ಡುವ ಭಾಷೆಯನ್ನು ಬಳಸುತ್ತಿದ್ದಾರೆ, ಎಂದು ಕಾಂಗ್ರೆಸ್ ದೂರಿನಲ್ಲಿ  ಹೇಳಿದೆ.

ಅದಕ್ಕೆ ಪುರಾವೆಯಾಗಿ ಹುಬ್ಬಳ್ಳಿಯಲ್ಲಿ ವಿಧಾನಸಭೆ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಷಣದ ವಿಡಿಯೋವನ್ನು ಲಗತ್ತಿಸಿದೆ.

ಹುಬ್ಬಳ್ಳಿಯಲ್ಲಿ ಮಾಡಿದ ಭಾಷಣದಲ್ಲಿ ಪ್ರಧಾನಿ ಮೋದಿ ಕಾಂಗ್ರೆಸ್ ಹಾಗೂ ಅದರ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ’ಕಾಂಗ್ರೆಸ್ ನಾಯಕರೇ, ಸರಿಯಾಗಿ ಕೇಳಿಸಿಕೊಳ್ಳಿ, ಹದ್ದು ಮೀರಿದರೆ,ನಾನು ಮೋದಿ, ಚೆನ್ನಾಗಿರಲ್ಲ…’ ಎಂದು ಹೇಳಿದ್ದಾರೆಂದು ಕಾಂಗ್ರೆಸ್ ಆರೋಪಿಸಿದೆ.

ಕಾಂಗ್ರೆಸ್‌ನಂತಹ ರಾಷ್ಟ್ರೀಯ ಪಕ್ಷದ ನಾಯಕರಿಗೆ ಬೆದರಿಕೆ ಹಾಕುವುದು ಖಂಡನೀಯ. 130 ಕೋಟಿ ಜನರನ್ನು ಪ್ರತಿನಿಧಿಸುವ ಪ್ರಧಾನಿಯ ಭಾಷೆ ಈ ರೀತಿಯಾಗಿರಲು ಸಾಧ್ಯವಿಲ್ಲ.

ರಾಷ್ಟ್ರಪತಿಯವರು ಪ್ರಧಾನಿಯವರ ಇಂತಹ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿ, ಪ್ರಧಾನಿ ಮೋದಿಗೆ ಎಚ್ಚರಿಕೆ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)