30 ಸಾವಿರ ಮತಗಳ ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ – ಬಿ.ಎಂ. ಸುಕುಮಾರ ಶೆಟ್ಟಿ

0
312

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

ಬೈಂದೂರು: ಕಳೆದ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಲಾವಕಾಶದ ಕೊರತೆಯಿಂದಾಗಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಾಧ್ಯವಾಗದೆ ಹಾಗೂ ಬಿಜೆಪಿ ಕೆಜೆಪಿ ಗೊಂದಲಗಳಿಂದಾಗಿ ಸೋಲು ಅನುಭವಿಸಬೇಕಾಯಿತು. ಆದರೆ ನಾನು ಸೋತ ಬಳಿಕ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳದೇ ಪಕ್ಷ ಸಂಘಟನೆಯಲ್ಲಿ ಸಕ್ರೀಯ ತೊಡಗಿಸಿಕೊಂಡಿದ್ದು, ತಳಮಟ್ಟದಿಂದ ಪಕ್ಷ ಸಂಘಟಿಸಿ, ಬೈಂದೂರು ಬಿಜೆಪಿಯ ಭದ್ರ ಕೋಟೆಯನ್ನಾಗಿ ಮಾಡಲಾಗಿದೆ, ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 30 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದರು.ಇಲ್ಲಿನ ಬಿಜೆಪಿ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮೇ. 1ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉಡುಪಿಗೆ ಭೇಟಿ ನೀಡಲಿದ್ದು, ಅಲ್ಲಿನ ಎಂಜಿಎಂ ಕಾಲೇಜು ಮೈದಾನದಲ್ಲಿ ನಡೆಯುವ ಬಿಜೆಪಿ ಸಮಾವೇಶದಲ್ಲಿ ಬೈಂದೂರು ಕ್ಷೇತ್ರದಿಂದ ಸುಮಾರು 10 ಸಾವಿರಕ್ಕೂ ಅಕ ಬಿಜೆಪಿ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಭಾಗವಹಿಸಲಿದ್ದಾರೆ ಎಂದರು.

ಯೋಗಿ ಆದಿತ್ಯನಾಥ ಬೈಂದೂರಿಗೆ: ಉತ್ತರ ಪ್ರದೇಶದ ಮುಖ್ಯಮಂತ್ರಿ ಹಾಗೂ ಹಿಂದೂ ಫೈರ್‍ಬ್ರ್ಯಾಂಡ್ ಯೋಗಿ ಆದಿತ್ಯನಾಥ್ ಅವರು ಮೇ. 4ಂದು ಬೈಂದೂರು ಕ್ಷೇತ್ರಕ್ಕೆ ಭೇಟಿ ನೀಡಲಿದ್ದು, ಆ ದಿನ ಬೃಹತ್ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಲಿದ್ದಾರೆ ಎಂದರು.
ಮೂಲ ಸೌಕರ್ಯದ ಕೊರತೆ: ಕಳೆದ 18 ವರ್ಷದಿಂದ ಇಲ್ಲಿನ ಶಾಸಕರು ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ, ಕ್ಷೇತ್ರದಲ್ಲಿ 5 ನದಿಗಳು ಹರಿಯುತ್ತಿದ್ದರೂ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಂಡಿಲ್ಲ, ಮರಳು ಸಮಸ್ಯೆಯಿಂದ ಜನ ಕಂಗೆಟ್ಟಿದ್ದಾರೆ, ಯಾವುದೇ ಶೈಕ್ಷಣಿಕ ಸಂಸ್ಥೆ ಆರಂಭಿಸಿಲ್ಲ, ಶಿಕ್ಷಿತರು ಉದ್ಯೋಗಕ್ಕಾಗಿ ಪರದಾಡಬೇಕಾಗಿದೆ, ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶವಿದ್ದರೂ, ಅದನ್ನು ಅಭಿವೃದ್ದಿಪಡಿಸಿಲ್ಲ, ಸುಸಜ್ಜಿತ ಆಸ್ಪತ್ರೆಯಿಲ್ಲ ಹೀಗೆ ಬೈಂದೂರು ಹಲವು ಮೂಲ ಸೌಕರ್ಯದ ಕೊರತೆ ಎದುರಿಸುತ್ತಿದ್ದು ಈ ಕ್ಷೇತ್ರ ಸ್ವಾತಂತ್ರ್ಯದ ಬಳಿಕ ಶೇ. 10ರಷ್ಟು ಮಾತ್ರ ಬದಲಾವಣೆ ಕಂಡಿದೆ ಎಂದರು.

ಬಿಜೆಪಿ ಕ್ಷೇತ್ರಾಧ್ಯಕ್ಷ ಸದಾನಂದ ಉಪ್ಪಿನಕುದ್ರು ಮಾತನಾಡಿ, ಕಳೆದ ಹಲವು ವರ್ಷದಿಂದ ಇಲ್ಲಿನ ಶಾಸಕರಾಗಿದ್ದ ಗೋಪಾಲ ಪೂಜಾರಿಯವರು ಕ್ಷೇತ್ರದ ಅಭಿವೃದ್ಧಿಗೆ ಏನನ್ನೂ ಮಾಡಿಲ್ಲ, ಚುನಾವಣೆಗೆ 3 ತಿಂಗಳಿರುವಾಗ ಅಲ್ಲಲ್ಲಿ 500ಮೀ, 600ಮೀ ರಸ್ತೆ ಮಾಡಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಸಿಆರ್‍ಎಫ್ ನಿ, ಸುನಾಮಿಯಿಂದ ರಸ್ತೆ, ಸೇತುವೆ ನಿರ್ಮಾಣ ಮಾಡಿ, ಅದು ತನ್ನ ಸಾಧನೆ ಎಂಬುವಂತೆ ಬಿಂಬಿಸುತ್ತಿದ್ದಾರೆ, ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಮನೆ ಮನೆಗೆ ತಲುಪಿಸುತ್ತೇವೆ ಎಂದ ಅವರು ಈ ಬಾರಿಯ ಚುನಾವಣೆಯಲ್ಲಿ ಸುಕುಮಾರ ಶೆಟ್ಟಿ ಗೆಲ್ಲುವುದು ಹಾಗೂ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು ನೂರಕ್ಕೆ ನೂರು ಖಚಿತ ಎಂದರು.

ಕ್ಷೇತ್ರದ ಸಂಚಾಲಕ ಪ್ರವೀಣ ಗುಂಡ್ಮಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ದೀಪಕ್‍ಕುಮಾರ ಶೆಟ್ಟಿ, ಮುಖಂಡ ನವೀನಚಂದ್ರ ಉಪ್ಪುಂದ ಉಪಸ್ಥಿತರಿದ್ದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)