ಸರ್ಕಾರಿ ನೌಕರಿಗೆ ಕಡ್ಡಾಯ ಮಿಲಿಟರಿ ಸೇವೆ

0
1478

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ರಕ್ಷಣೆಗೆ ಸಂಬಂಧಿಸಿದ ಸಂಸತ್ತಿನ ಸ್ಥಾಯೀ ಸಮಿತಿ ಸರ್ಕಾರಿ ನೌಕರಿ ಬಯಸುವವರಿಗೆ 5 ವರ್ಷ ಮಿಲಿಟರಿ ಸೇವೆ ಕಡ್ಡಾಯ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಕೇಂದ್ರ ಸಿಬಂದಿ ಮತ್ತು ತರಬೇತಿ ಇಲಾಖೆ ಅದಕ್ಕೆ ಸಂಬಂಧಿಸಿದ ಶಿಫಾರಸನ್ನು ಸಿದ್ದಪಡಿಸಿ ಕೇಂದ್ರ ಸರಕಾರಕ್ಕೆ ಸಲ್ಲಿಸಬೇಕು ಎಂದು ಅದು ಸಲಹೆ ಮಾಡಿದೆ. ಯುಪಿಎ ಅವಧಿಯಲ್ಲೂ ಕಡ್ಡಾಯ ಮಿಲಿಟರಿ ಸೇವೆ ಜಾರಿಗೆ ತರುವಂತೆ ಸಂಸತ್ತಿನ ಚರ್ಚೆಯ ನಡುವೆ ಕೆಲವು  ಸದಸ್ಯರು ಅಂದಿನ ರಕ್ಷಣಾ ಸಚಿವರಾದ ಎ ಕೆ ಎಂಟನಿಯವರಿಗೆ ಸಲಹೆ ನೀಡಿದ್ದರು. ಹಲವಾರು ವರ್ಷಗಳಿಂದ ಸೇನಾ ಪಡೆಗಳು ಮಾನವ ಸಂಪನ್ಮೂಲ ಕೊರತೆ ಎದುರಿಸುತ್ತಾ ಬಂದಿದೆ ಎನ್ನುವುದು ದಿಟ. ಪ್ರಸ್ತುತ ಭೂ ಸೇನೆ ಮಂಜೂರಾದ ಅಧಿಕೃತ ಸಂಖ್ಯೆಯಲ್ಲಿ 7000 ಅಧಿಕಾರಿಗಳು, 20,000 ಯೋಧರು ಹಾಗೂ ವಾಯು ಪಡೆ ಮತ್ತು ನೌಕಾಪಡೆ ತಲಾ 150 ಅಧಿಕಾರಿ ಮತ್ತು 15,000 ಯೋಧರ ಕೊರತೆಯನ್ನು ಎದುರಿಸುತ್ತಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಪತ್ರಾಂಕಿತ ಹುದ್ದೆಗಳ ನೇಮಕಾತಿಯಲ್ಲಿ ಸೇನೆಯ ಸೇವೆ ಕಡ್ದಾಯಗೊಳಿಸಿದರೆ ಸೇನೆಯ ಅಧಿಕಾರಿ ಸ್ತರದ ಖಾಲಿ ಹುದ್ದೆಗಳು ಭರ್ತಿಯಾಗುವುದಲ್ಲದೇ, ಶಿಸ್ತಿಗೆ ಹೆಸರಾದ ಸೈನಿಕರು ಹೆಚ್ಚು ದಕ್ಷತೆಯೊಂದಿಗೆ ಕಾರ್ಯನಿರ್ವಹಿಸಿ ಸರ್ಕಾರಿ ಕಚೇರಿಗಳ  ಕಾರ್ಯಶೈಲಿಯಲ್ಲಿ ಗಮನಾರ್ಹ ಬದಲಾವಣೆ ತರಬಹುದು ಎನ್ನುವುದು ಸಂಸದೀಯ ಸಮಿತಿಯ ಅಭಿಪ್ರಾಯ.

ಜೀವನಾನುಭವ : ಖಾಸಗಿ ರಂಗದ ವಿಫುಲ ಉದ್ಯೋಗಾವಕಾಶಗಳ ಹೊರತಾಗಿಯೂ  ಸರ್ಕಾರಿ ನೌಕರಿ ಇನ್ನೂ ತನ್ನ ಆಕರ್ಷಣೆ ಕಳೆದುಕೊಂಡಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪತ್ರಾಂಕಿತ ಹುದ್ದೆಗಾಗಿ ದೊಡ್ದ ಸಂಖ್ಯೆಯಲ್ಲಿ ಆಕಾಂಕ್ಷಿಗಳು ಪ್ರತಿ ವರ್ಷ ಅರ್ಜಿ ಸಲ್ಲಿಸುತ್ತಾರೆ. ಸೇನೆಯ ಅಧಿಕಾರಿಗಳಿಗೆ ನಾಗರಿಕ ಅಧಿಕಾರಿಗಳ ಸಮಾನವಾಗಿ ವೇತನ, ಹೆಚ್ಚಿನ ಭತ್ಯ ಮತ್ತು ಪೆನ್ಷನ್ ನೀಡಲಾಗುತ್ತಿದೆಯಾದರೂ ಸೇನೆಯ ಕಠಿಣ ಬದುಕನ್ನು ಇಷ್ಟಪಡದ ಸುಖಲೋಲುಪ ಮಾನಸಿಕತೆಯ ಯುವಕರು ಮತ್ತು ಪೋಷಕರಿಂದಾಗಿ ಸೇನೆಯಲ್ಲಿ ಮಂಜೂರಾದ ಹುದ್ದೆಗಳು ಭರ್ತಿಯಾಗುತ್ತಿಲ್ಲ. ಒಂದೆಡೆ ಉಗ್ರವಾದ ಇನ್ನೊಂದೆಡೆ ಚೀನಾ ಮತ್ತು ಪಾಕಿಸ್ಥಾನಗಳೆರಡರ ಕಡೆಯಿಂದಲೂ ಹೆಚ್ಚುತ್ತಿರುವ ಗಡಿ ತಂಟೆಯಿಂದಾಗಿ ಸೇನಾಪಡೆಗಳಲ್ಲಿ  ಹುದ್ದೆ ಖಾಲಿ ಇರುವುದು ಯುದ್ಧ ಸನ್ನತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ದೇಶದ ಭದ್ರತೆಯ ಹಿತದೃಷ್ಟಿಯಿಂದ ಇದು ಒಳ್ಳೆಯದಲ್ಲ. ಇಸ್ರೇಲ್, ಸ್ವಿಟ್ಜರ್ ಲೇಂಡ್ ನಂತಹ ವಿಶ್ವದ ಕೆಲವು ದೇಶಗಳಲ್ಲಿರುವಂತೆ ಎಲ್ಲಾ ಯುವಕರಿಗೂ  ಕಡ್ಡಾಯ ಮಿಲಿಟರಿ ಸೇವೆ ವ್ಯವಸ್ಥೆ ಭಾರತದಂತಹ ದೊಡ್ಡ ದೇಶಕ್ಕೆ ಸರಿ ಹೊಂದಲಾಗದಾದರೂ ಸರ್ಕಾರಿ ನೌಕರಿ ಬಯಸುವ ಯುವಕರಿಗೆ ಸೇನೆಯಲ್ಲಿ ಕೆಲವು ವರ್ಷ ಸೇವೆ ಸಲ್ಲಿಸಬೇಕೆನ್ನುವ ಶರತ್ತನ್ನು ಸರ್ಕಾರ ವಿಧಿಸಬಹುದು. ಇದರಿಂದ ದೇಶದ ನೌಕರಶಾಹಿ ಇನ್ನಷ್ಟು ದಕ್ಷವಾಗುವುದೆನ್ನುವುದು ಸಂದೇಹಾತೀತ.

ನಮ್ಮ ನೌಕರಶಾಹಿಯಲ್ಲಿ ಭ್ರಷ್ಟಾಚಾರ, ಅದಕ್ಷತೆ, ಅಶಿಸ್ತು ಹೆಚ್ಚುತ್ತಿರುವ ಹಾಗೂ ಸಾಮಾಜಿಕ ಕಳಕಳಿ ಕಾಣೆಯಾಗುತ್ತಿರುವ ಕುರಿತು ಆಗಾಗ್ಗೆ ಕೇಳುತ್ತಿರುತ್ತೇವೆ. ಸರ್ಕಾರದ ಉನ್ನತ ಹುದ್ದೆಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಬೇಕಾದ ಅಧಿಕಾರಿಗಳು ವಿವಿಧತೆಯಲ್ಲಿ ಅಪೂರ್ವವೆನಿಸುವ ಏಕತೆಗೆ ಹೆಸರಾದ ಸೇನೆಯಲ್ಲಿ ಸೇವೆ ಸಲ್ಲಿಸುವುದರಿಂದ ಸಮಗ್ರ ಭಾರತವನ್ನು ಕಾಣುವ ಅವಕಾಶ ದೊರಕಿದಂತಾಗುತ್ತದೆ. ಸೇನೆಯ ಸೇವಾವಧಿಯಲ್ಲಿ ದೊರಕುವ ಕಠಿಣ ಪರಿಸ್ಥಿತಿಯನ್ನು ಎದುರಿಸುವ ಧೈರ್ಯ, ನಿರ್ಣಯ ತೆಗೆದುಕೊಳ್ಳುವಲ್ಲಿ ಆತ್ಮವಿಶ್ವಾಸ, ಅಧೀನಸ್ಥರನ್ನು ಮುನ್ನಡೆಸುವ ನಿಪುಣತೆ ಅವರಿಗೆ ಆಡಳಿತಾತ್ಮಕವಾಗಿ ಸಹಾಯಕವಾಗಬಲ್ಲದು. ಗುಂಪು ಸಹಕಾರ ಮನೋಭಾವ (team spirit), ಗುರಿ ಸಾಧನೆಗಾಗಿ ಎಲ್ಲರ ಸಹಕಾರ ಪಡೆಯುವ ಮನೋಭಾವವೇ ಮುಂತಾದ ಸೈನ್ಯ ನಾಯಕತ್ವ ಗುಣಗಳು ಅಧಿಕಾರಿಗಳಿಗೆ ಶಾಸನ ವ್ಯವಸ್ಥೆಯ ಕ್ಲಿಷ್ಟತೆಯನ್ನು ಲೀಲಾಜಾಲವಾಗಿ ಎದುರಿಸುವಲ್ಲಿ ಸಹಾಯಕವಾಗಬಲ್ಲದು. ಗಡಿಯಲ್ಲಿನ ಸೈನಿಕರ, ನಾಗರಿಕರ ಕಷ್ಟಮಯ ಬದುಕನ್ನು ಪ್ರತ್ಯಕ್ಷವಾಗಿ ಕಾಣುವುದರಿಂದ ದೊರಕುವ ಜೀವನಾನುಭವ ಅಧಿಕಾರಿಗಳಲ್ಲಿ ಸಂವೇದನಾಶೀಲತೆ ಮತ್ತು ಹೃದಯ ವೈಶಾಲ್ಯತೆ ವಿಕಸಿಸಿ ಬದುಕನ್ನು ಕಾಣುವ ಅವರ ದೃಷ್ಟಿಕೋಣವನ್ನು ಇನ್ನಷ್ಟು ವಿಶಾಲವಾಗಿಸಬಲ್ಲದು. ಇದರಿಂದಾಗಿ ಸಮಾಜದ ಪೀಡಿತರ ನೋವುಗಳಿಗೆ ಅವರು ಹೆಚ್ಚು ಮಾನವೀಯತೆಯಿಂದ ಸ್ಪಂದಿಸುವರೆಂದು ಆಶಿಸಬಹುದು.

ದೇಶಪ್ರೇಮ ಮತ್ತು ದಕ್ಷತೆ : ದೇಶದ ಸೇನಾ ಪಡೆಗಳಲ್ಲಿ ಸೇವೆ ಸಲ್ಲಿಸಿದ ಅಧಿಕಾರಿಗಳು ಮತ್ತು ಯೋಧರು ರಾಜ್ಯಗಳ ರಾಜ್ಯಪಾಲರಾಗಿಯೂ, ಮಂತ್ರಿ-ಮುಖ್ಯ ಮಂತ್ರಿಗಳಾಗಿಯೂ, ಉದ್ಯಮಿಗಳಾಗಿಯೂ, ಉನ್ನತ ಅಧಿಕಾರಿಗಳಾಗಿಯೂ ಪರಿಣಾಮಕಾರಿಯಾಗಿ ಸೇವೆ ಸಲ್ಲಿಸಿದ ಹೇರಳ ಉದಾಹರಣೆ ಸಿಗುತ್ತದೆ. ಸೈನ್ಯ ಸೇವೆಗೈದ ಹೆಸರಾಂತ ವೈದ್ಯಾದಿಕಾರಿಗಳು, ಇಂಜಿನಿಯರ್ ಗಳು, ಕೇಂದ್ರ ಲೋಕ ಸೇವಾ ಆಯೋಗದ ಅಧ್ಯಕ್ಷ, ವಿಪತ್ತು ನಿರ್ವಹಣೆ (disaster management) ಆಯೋಗ ಅಧ್ಯಕ್ಷ, ವಿಶ್ವವಿದ್ಯಾಲಯಗಳ ಕುಲಪತಿ, ಹೆಸರಾಂತ ಕಾಲೇಜುಗಳ ಪ್ರಾಂಶುಪಾಲರೇ ಮುಂತಾದ ಹುದ್ದೆಗಳನ್ನು ನಿರ್ವಹಿಸಿ ತಮ್ಮ ವೃತ್ತಿಪರತೆಯನ್ನು ಮೆರೆದಿದ್ದಾರೆ. ಹರ್ಯಾಣಾ, ಹಿಮಾಚಲ, ಪಂಜಾಬ್ ರಾಜ್ಯಗಳಲ್ಲಿ ಈಗಾಗಲೇ ಅಧಿಕಾರಿ ಮತ್ತು ಅಧಿಕಾರೇತರ ಹುದ್ದೆಗಳಲ್ಲಿ ರಾಷ್ಟ್ರದಲ್ಲೇ ಅತಿ ಹೆಚ್ಚು ಮಾಜಿ ಸೈನಿಕರು ಸೇವೆ ಸಲ್ಲಿಸುತ್ತಿದ್ದಾರೆ.

ಸಂಸತ್ ಸಮಿತಿಯ ಶಿಫಾರಸನ್ನು ಸರ್ಕಾರ ಗಂಬೀರವಾಗಿ ಪರಿಶೀಲಿಸಬೇಕಿದೆ. ಕಡ್ಡಾಯ ಮಿಲಿಟರಿ ಸೇವೆಯನ್ನು ಸದ್ಯಕ್ಕೆ ಒಮ್ಮಿಂದೊಮ್ಮೆಗೆ ಜಾರಿಗೆ ತರುವುದು ಸಾದ್ಯವಿಲ್ಲ. ಆದರೆ ಈ ಕುರಿತು ದೀರ್ಘಕಾಲೀನ ಯೋಜನೆ ರೂಪಿಸಬೇಕಿದೆ. ಪ್ರಾರಂಭಿಕ ಹಂತದಲ್ಲಿ ಅಧಿಕಾರಿ ಮತ್ತು ಅಧಿಕಾರೇತರ ಹುದ್ದೆಗಳಲ್ಲಿ ಕನಿಷ್ಟ 20%-25% ಹುದ್ದೆಗಳನ್ನು ಸೇನೆಯಲ್ಲಿ ಸೇವೆ ಸಲ್ಲಿಸಿದವರಿಗೆ ಕಾದಿರಿಸುವ ಕ್ರಮ ಕೈಗೊಳ್ಳಬಹುದು. ಕ್ರಮೇಣ ಈ ಸಂಖ್ಯೆಯನ್ನು ಹೆಚ್ಚಿಸಬಹುದಾಗಿದೆ. ಕೇವಲ ನೌಕರಿಗಳಲ್ಲಷ್ಟೇ ಅಲ್ಲ, ರಾಜ್ಯ ವಿಧಾನ ಸಭೆ ಮತ್ತು ಲೋಕಸಭೆ ಸೀಟುಗಳನ್ನು ಸೈನಿಕರಿಗಾಗಿ ಮೀಸಲಿಡುವ ಸತ್ಸಂಪ್ರದಾಯದ ಕುರಿತು ಸರ್ಕಾರ ಯೋಚಿಸಲಿ. ‘ಭಾರತ್ ತೇರೆ ಟುಕಡೇ ಹೋಂಗೆ..’ ಎನ್ನುವ ರಾಷ್ತ್ರ ವಿರೋಧಿ ಬಾವನೆ ರಾಷ್ಟ್ರವನ್ನು ಗೆದ್ದಲಿನಂತೆ ಒಳಗಿಂದೊಳಗೆ ಕಿತ್ತು ತಿನ್ನುತ್ತಿದೆ. ದಾರಿ ತಪ್ಪುತ್ತಿರುವ ಯುವಕರಲ್ಲಿ ಮತ್ತು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ದೇಶ ವಿರೋಧಿ ಶಕ್ತಿಗಳೊಂದಿಗೆ ಕೈ ಜೋಡಿಸುತ್ತಿರುವ ರಾಜಕಾರಣಿಗಳಲ್ಲಿ ರಾಷ್ಟ್ರೀಯತೆ ಮತ್ತು ದೇಶ ಪ್ರೇಮದ ಬಾವನೆ ಹೆಚ್ಚಿಸುವ ದೃಷ್ಟಿಯಿಂದ ಸರ್ಕಾರದ ಈ ಕ್ರಮ ನಿಶ್ಚಿತವಾಗಿಯೂ ಸಕಾರಾತ್ಮಕ ಪರಿಣಾಮ ಬೀರಬಲ್ಲದು ಎನ್ನುವುದರಲ್ಲಿ ಸಂದೇಹವಿಲ್ಲ.

ಸರ್ಕಾರದ ಉನ್ನತಾಧಿಕಾರಿಗಳ ಮತ್ತು ರಾಜಕಾರಣಿಗಳ ಮಕ್ಕಳೇ ಹೆಚ್ಚಾಗಿ IAS, IPS ಅಧಿಕಾರಿಗಳಾಗಿ  ಸೇವೆ ಸೇರುತ್ತಿದ್ದಾರೆ. ಐಷಾರಾಮಿ ಬದುಕಿನಾಚಿನ ಜೀವನದ ಕಷ್ಟ ಕಾರ್ಪಣ್ಯವನ್ನು ಕಾಣದ ನೌಕರಶಾಹಿಯಿಂದ ನಮ್ಮ ಆಡಳಿತ ವ್ಯವಸ್ಥೆ ಇಂದು ಜಡವಾಗಿದೆ. ದೇಶದ ರೈತರ, ಬಡವರ, ಸೈನಿಕರ ಕಷ್ಟ, ತ್ಯಾಗ, ಬಲಿದಾನವನ್ನು ಹಗುರವಾಗಿ ಕಾಣುವ ಪ್ರ‍ವೃತ್ತಿ ನಮ್ಮ ಉನ್ನತ ಅಧಿಕಾರಿಗಳಲ್ಲಿ ಢಾಳಾಗಿ ಕಾಣುತ್ತಿದೆ. ಹವಾನಿಯಂತ್ರಿತ ಕೊಠಡಿಗಳಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳ ಪೈಕಿ  ಅನೇಕರಲ್ಲಿ ಸಾಮಾಜಿಕ ಜವಾಬ್ದಾರಿ, ದೇಶಪ್ರೇಮಕ್ಕಿಂತ ಹೆಚ್ಚಾಗಿ ತಮ್ಮ ಸ್ವಾರ್ಥ ಚಿಂತನೆಯೇ ಹೆಚ್ಚಾಗಿದೆ. ಸೇನೆಯಲ್ಲಿರುವಂತೆ ಸರ್ವಪ್ರಥಮ ದೇಶದ ಕುರಿತಾಗಿ, ಆ ನಂತರ ತನ್ನ ಅಧೀನಸ್ಥರ ಮತ್ತು ಕೊನೆಯದಾಗಿ ತನ್ನ ವೈಯ್ಯಕ್ತಿಕ ಹಿತದ ಕುರಿತು ಯೋಚಿಸುವ ಚಿಂತನೆ ನಮ್ಮ ನಾಗರಿಕ ಅಧಿಕಾರಿಗಳಿಲ್ಲೂ ಬರಬೇಕಾಗಿದೆ. ಒಂದು ಜಿಲ್ಲೆಯ, ತಾಲೂಕಿನ ಆಡಳಿತದ ಜವಾಬ್ದಾರಿ ಹೊತ್ತ ಅಧಿಕಾರಿಗಳು ಸ್ವಾರ್ಥಪರ ಚಿಂತನೆಯಿಂದ ಹೊರ ಬಂದು ಯೋಚಿಸುವಂತಾಗಲು ಅವರಿಗೆ ಜೀವನದ ಕಷ್ಟ-ನಷ್ಟಗಳನ್ನು ಕಾಣುವ ಸಂಕಷ್ಟಗಳನ್ನು ಕೆಚ್ಚಿನಿಂದ ಎದುರಿಸುವ, ದೇಶಕ್ಕಾಗಿ ತ್ಯಾಗ ಮಾಡುವ ಮನೋಬಾವನೆ ಹುಟ್ಟಿಸುವ ನೈಜ ವಾತಾವರಣ ಸೇನೆಯಲ್ಲದೇ ಇನ್ನೆಲ್ಲೂ ಸಿಗದು. ಆದ್ದರಿಂದ ನಾಗರಿಕ ಅಧಿಕಾರ ಬಯಸುವ ಯುವಕರು ಕೆಲವು ವರ್ಷ ಸೇನೆಯ ಬದುಕನ್ನು ನೋಡಲಿ ಎನ್ನುವ ಸಂಸದೀಯ ಸಮಿತಿ ಶಿಫಾರಸನ್ನು ಸರ್ಕಾರ ಹಂತ ಹಂತವಾಗಿ ಜಾರಿಗೆ ತರಲಿ.

 

 

 

ವರದಿ : ಬೈಂದೂರು ಚಂದ್ರಶೇಖರ ನಾವಡ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)