ಬೈಕ್‌ಗೆ ಒದ್ದ ಟ್ರಾಫಿಕ್ ಪೊಲೀಸ್: ಗರ್ಭಿಣಿ ಸಾವು

0
154
dinetmedia

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (5) ಅಭಿಪ್ರಾಯವಿಲ್ಲ (0)

ತಿರುಚ್ಚಿ: ಗರ್ಭಿಣಿ ಪತ್ನಿ ಜತೆಗೆ ಪ್ರಯಾಣಿಸುತ್ತಿದ್ದ ಬೈಕ್‌ಗೆ ಟ್ರಾಫಿಕ್ ಇನ್ಸ್‌ಪೆಕ್ಟರ್ ಒಬ್ಬರು ಬಲವಾಗಿ ಒದ್ದಿರುವ ಕಾರಣ ಆಯತಪ್ಪಿ ಬಿದ್ದು ಗರ್ಭಿಣಿ ಮೃತಪಟ್ಟ ಘಟನೆ ತಿರುಚ್ಚಿ ಸಮೀಪದ ಥುವಕುಡಿ ಬಳಿ ಮಂಗಳವಾರ ಸಂಜೆ ನಡೆದಿದೆ. ಆರೋಪಿ ಇನ್ಸ್‌ಪೆಕ್ಟರ್ ಕಾಮರಾಜ್‍ರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

ಹೆಲ್ಮೆಟ್ ಧರಿಸಿಲ್ಲ ಎಂದು ಬೈಕ್ ಮೇಲೆ ಹೋಗುತ್ತಿದ್ದ ದಂಪತಿಗಳನ್ನು ಪೊಲೀಸರು ಬೆನ್ನತ್ತಿದ್ದಾರೆ. ಈ ಘಟನೆಯಲ್ಲಿ ಬೈಕ್‌ನಿಂದ ಗರ್ಭಿಣಿ ಜಾರಿ ಬಿದ್ದಿದ್ದಾರೆ. ತೀವ್ರವಾಗಿ ಗಾಯಗೊಂಡ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದು, ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ತಂಜಾವೂರು ಜಿಲ್ಲೆಯ ಉಷಾ (30) ಎಂದು ಗುರುತಿಸಲಾಗಿದೆ.

ತಿರುಚ್ಚಿ-ತಂಜಾವೂರು ರಾಷ್ಟ್ರೀಯ ಹೆದ್ದಾರಿ ಥುವಕುಡಿಯ ಗಣೇಶ ಸರ್ಕಲ್‌ ಬಳಿ ಟ್ರಾಫಿಕ್ ಪೊಲೀಸರು ತನಿಖೆ ಮಾಡುತ್ತಿದ್ದರು. ಇದೇ ಸಮಯದಲ್ಲಿ ಸೂಲಪೇಟೆ ಮೂಲದ ರಾಜ ಆತನ ಪತ್ನಿ ಉಷಾ ಬೈಕ್ ಮೇಲೆ ಹೋಗುತ್ತಿದ್ದರು. ಅವರ ಬೈಕನ್ನು ಪೊಲೀಸರು ನಿಲ್ಲಿಸುವ ಪ್ರಯತ್ನ ಮಾಡಿದರು. ಆದರೆ ಬೈಕ್ ನಿಲ್ಲಿಸದೆ ರಾಜ ಮುಂದೆ ಸಾಗಿದರು.

ಇನ್ನೊಂದು ವಾಹನದಲ್ಲಿ ಪೊಲೀಸರು ಬೆನ್ನತ್ತಿದರು. ಬೈಕ್ ಹಿಂದೆ ಕುಳಿತಿದ್ದ ಇನ್ಸ್‌ಪೆಕ್ಟರ್ ಬಲವಾಗಿ ಕಾಲಿನಿಂದ ಒದ್ದಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ಸ್‌ಪೆಕ್ಟರ್ ಕಾಲು ಬಲವಾಗಿ ಗರ್ಭಿಣಿ ಹೊಟ್ಟೆಗೆ ತಗುಲಿದ್ದು ಇಬ್ಬರೂ ಬೈಕ್‌ನಿಂದ ಉರುಳಿಬಿದ್ದಿದ್ದಾರೆ. ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಉಷಾ ಅಲ್ಲೇ ಮೃತಪಟ್ಟಿದ್ದು, ಗಂಡ ಗಂಭೀರವಾಗಿ ಗಾಯಗೊಂಡಿದ್ದಾನೆ.

ಈ ಘಟನೆಯಿಂದ ರೊಚ್ಚಿಗೆದ್ದ ಮೃತರ ಕುಟುಂಬಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರ ಕ್ರಮವನ್ನು ವಿರೋಧಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಸ್ಥಳೀಯರ ದಾಳಿಯಲ್ಲಿ ಪೊಲೀಸರ ವಾಹನಗಳು ಜಖಂ ಆಗಿವೆ. ಘಟನೆಯಲ್ಲಿ ಹಲವು ಪೊಲೀಸರಿಗೂ ಗಾಯಗಳಾಗಿವೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಕಾರಣ ಘಟನಾ ಸ್ಥಳಕ್ಕೆ ಆಗಮಿಸಿದ ಡಿಎಸ್‌ಪಿ ಮೇಲೆ ಚಪ್ಪಲಿ ಎಸೆದಿದ್ದಾರೆ. ರಸ್ತೆ ತಡೆದು ಪ್ರತಿಭಟಿಸಲಾಗಿದೆ. ಪೊಲೀಸರ ಈ ವರ್ತನೆ ವಿರುದ್ಧ ರಾಜ್ಯದಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (5) ಅಭಿಪ್ರಾಯವಿಲ್ಲ (0)