ಬೈಂದೂರು: ಗೋಪಾಲ ಪೂಜಾರಿ ಆರನೇ ಬಾರಿ ಅದೃಷ್ಟ ಪರೀಕ್ಷೆಗಿಳಿಯಲು ಸಿದ್ಧತೆ; ಆದರೆ ಬಿಜೆಪಿಯಲ್ಲಿ ನಾಲ್ವರೊಳಗೆ ಪೈಪೋಟಿ

0
1220

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (1) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು: ಹೊಸ ತಾಲೂಕಿನ ಹಿರಿಮೆಯೊಂದಿಗೆ ಮೊದಲ ವಿಧಾನಸಭಾ ಚುನಾವಣೆ ಎದುರು ನೋಡುತ್ತಿರುವ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಈಗಾಗಲೇ ನಾಲ್ಕು ಬಾರಿ ಗೆದ್ದಿರುವ ಕೆ. ಗೋಪಾಲ ಪೂಜಾರಿ ಅವರೇ ಸ್ಪರ್ಧಿಸುವುದು ಬಹುತೇಕ ಅಂತಿಮಗೊಂಡಿದೆ. ಆದರೆ ಬಿಜೆಪಿಯಿಂದ ಟಿಕೆಟ್‌ಗಾಗಿ ಆಕಾಂಕ್ಷಿಗಳಿಂದ ಪಕ್ಷದೊಳಗೇ “ಮಿನಿ ಚುನಾವಣೆ’ ನಡೆಯುತ್ತಿದೆ.

ನಾಲ್ಕು ಬಾರಿ ಗೆದ್ದು, ಒಂದು ಬಾರಿ ಸೋತಿರುವ ಗೋಪಾಲ ಪೂಜಾರಿ ಅವರು ಆರನೇ ಬಾರಿ ಅದೃಷ್ಟ ಪರೀಕ್ಷೆಗಿಳಿಯಲು ಸಿದ್ಧತೆ ನಡೆಸಿದ್ದಾರೆ. ಕ್ಷೇತ್ರದಲ್ಲಿ ಬಿರುಸಿನ ಸಂಚಾರವನ್ನು ಕೂಡ ಈಗಾಗಲೇ ಆರಂಭಿಸಿದ್ದಾರೆ. ಬೈಂದೂರಿನ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಿದ್ದೇನೆ, ಕ್ಷೇತ್ರದ ಜನ ಬೆಂಬಲಿಸುವ ನಿರೀಕ್ಷೆ ಯಿದೆ ಎನ್ನುತ್ತಾರವರು.

ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ. ಕಳೆದ ಬಾರಿ ಸ್ಪರ್ಧಿಸಿರುವ, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಬಿ.ಎಂ. ಸುಕುಮಾರ ಶೆಟ್ಟಿ ಈ ಬಾರಿಯ ಬಿಜೆಪಿ ಆಕಾಂಕ್ಷಿಗಳ ರೇಸ್‌ನಲ್ಲಿ ಮುಂಚೂಣಿ ಯಲ್ಲಿದ್ದಾರೆ. ತೆರೆಮರೆಯಲ್ಲಿ ಸಾಕಷ್ಟು ಕಸರತ್ತು ಕೂಡ ನಡೆಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಆತ್ಮೀಯರಾಗಿರುವುದು ಇವರ ಧನಾತ್ಮಕ ಅಂಶ.

ಇನ್ನು ಬಿಜೆಪಿಯ ಟಿಕೆಟ್‌ ಆಕಾಂಕ್ಷಿಗಳ ಯಾದಿಯಲ್ಲಿ ಕೇಳಿ ಬರುತ್ತಿರುವ ಹೆಸರೆಂದರೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿರುವ ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ ಅವರದು. ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಪುನರಾಗಮನದಿಂದ ಕುಂದಾಪುರದಲ್ಲಿ ಇವರಿಗೆ ಟಿಕೆಟ್‌ ಸಿಗುವ ಸಾಧ್ಯತೆಗಳು ಕಡಿಮೆ ಇರುವುದರಿಂದ ಬೈಂದೂರಿನಲ್ಲಿ ಅವಕಾಶ ಸಿಗಲಿದೆ ಎನ್ನುವ ಮಾತುಗಳು ಬಲವಾಗಿಯೇ ಕೇಳಿ ಬರುತ್ತಿವೆ. ಬೈಂದೂರಿನಲ್ಲಿ ಬಿಲ್ಲವ ಸಮುದಾಯದವರು ಹೆಚ್ಚಿದ್ದು, ಆ ನೆಲೆಯಲ್ಲಿ ಬಿಲ್ಲವ ಸಮುದಾಯದ, ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಟಿಕೆಟ್‌ ನೀಡುವ ಮೂಲಕ ಗೋಪಾಲ ಪೂಜಾರಿ ಅವರಿಗೆ ಸಡ್ಡು ಹೊಡೆಯಬಹುದು ಎಂಬುದು ಬಿಜೆಪಿ ಪಡಸಾಲೆಯಲ್ಲಿ ಕೇಳಿ ಬರುತ್ತಿರುವ ಮಾತು.

ಬಿ.ವೈ. ರಾಘವೇಂದ್ರ ಹೊಸ ಸೇರ್ಪಡೆ
ಇನ್ನು ಬಿಜೆಪಿ ಯಾದಿಗೆ ಹೊಸ ಸೇರ್ಪಡೆ ಬಿಎಸ್‌ವೈ ಪುತ್ರ, ಶಿವಮೊಗ್ಗ-ಬೈಂದೂರಿನ ಮಾಜಿ ಸಂಸದ, ಶಿಕಾರಿಪುರ ಶಾಸಕ ಬಿ.ವೈ. ರಾಘವೇಂದ್ರ. ಹಿಂದೆ ಈ ಭಾಗದ ಸಂಸದರೂ ಆಗಿದ್ದುದರಿಂದ, ಶಿಕಾರಿಪುರದಲ್ಲಿ ತಂದೆಗಾಗಿ ಸ್ಥಾನ ಬಿಟ್ಟುಕೊಡಬೇಕಿರುವುದರಿಂದ ಅವರು ಬೈಂದೂರಿನಲ್ಲಿ ಸ್ಪರ್ಧೆಗೆ ಮನಸ್ಸು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಹಾವೇರಿ ಜಿಲ್ಲೆಯ ರಾಣೆ ಬೆನ್ನೂರು ಅಥವಾ ಬೈಂದೂರು ಇವರ ಆದ್ಯತೆ.

ಇವರಷ್ಟೇ ಅಲ್ಲದೆ ಸುಖಾನಂದ ಶೆಟ್ಟಿ, ಜಯಾನಂದ ಹೋಬಳಿದಾರ್‌, ಡಾ| ಭರತ್‌ ಕುಮಾರ್‌ ಶೆಟ್ಟಿ, ಜಿ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ತಗ್ಗರ್ಸೆ ಅವರ ಹೆಸರುಗಳೂ ಬಿಜೆಪಿಯ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿಯಲ್ಲಿವೆ. ಜೆಡಿಎಸ್‌ನಿಂದ ಕಾರ್ಮಿಕ ಮುಖಂಡ ರವಿ ಶೆಟ್ಟಿ ಸ್ಪರ್ಧಿಸುವುದು ಬಹುತೇಕ ಅಂತಿಮಗೊಂಡಿದೆ.

ಸಚಿವ ಸ್ಥಾನ ವಂಚಿತ ಕ್ಷೇತ್ರ
ಬೈಂದೂರು ವಿಧಾನಸಭೆಯು 1952ರಲ್ಲಿ ಕುಂದಾಪುರದೊಂದಿಗೆ ಬೆಸೆದುಕೊಂಡಿದ್ದು, 1957ರಲ್ಲಿ ಬೇರೆ ಬೇರೆಯಾಯಿತು. 14 ಚುನಾವಣೆಗಳಲ್ಲಿ ಕಾಂಗ್ರೆಸ್‌ 10 ಬಾರಿ, ಬಿಜೆಪಿ 2 ಬಾರಿ, ಪ್ರಜಾ ಸೋಶಿಯಲಿಸ್ಟ್‌ ಪಕ್ಷ 1 ಬಾರಿ, ಜನತಾ ಪಕ್ಷ 1 ಬಾರಿ ಗೆಲುವಿನ ನಗೆ ಬೀರಿವೆ.

1952ರಲ್ಲಿ ಪಿಎಸ್‌ಪಿಯಿಂದ ಕುಂದಾಪುರ ಶಾಸಕರಾಗಿದ್ದ ಯಡ್ತರೆ ಮಂಜಯ್ಯ ಶೆಟ್ಟಿ ಅವರು 1957ರಲ್ಲಿ ಕಾಂಗ್ರೆಸ್‌ನಿಂದ ಬೈಂದೂರ ಲ್ಲಿಯೂ ಅವಿರೋಧವಾಗಿ ಆಯ್ಕೆ ಯಾಗಿದ್ದು, 1962ರಲ್ಲಿಯೂ ಗೆಲುವು ಕಾಣುತ್ತಾರೆ. ಈ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು ತಂದಿತ್ತ ಶಾಸಕರೆಂದರೆ ಐ.ಎಂ. ಜಯರಾಮ ಶೆಟ್ಟಿ ಅವರು. ಅನಂತರ 1997ರಿಂದ 2004ರ ವರೆಗೆ ಕಾಂಗ್ರೆಸ್‌ನಿಂದ ಗೆದ್ದ ಗೋಪಾಲ ಪೂಜಾರಿ ಅವರು 2008ರಲ್ಲಿ ಬಿಜೆಪಿಯ ಲಕ್ಷ್ಮೀನಾರಾಯಣ ಅವರೆದುರು ಸೋತರು. 2013ರಲ್ಲಿ ಮತ್ತೆ ಗೆದ್ದು 4ನೇ ಬಾರಿಗೆ ಆಯ್ಕೆಯಾಗಿದ್ದಾರೆ. ಯಡ್ತರೆ ಮಂಜಯ್ಯ ಶೆಟ್ಟಿ, ಎ.ಜಿ. ಕೊಡ್ಗಿ, ಅಪ್ಪಣ್ಣ ಹೆಗ್ಡೆ, ಗೋಪಾಲ ಪೂಜಾರಿ ಅವರಂತಹ ಪ್ರಬಲರೇ ಶಾಸಕ ರಾಗಿದ್ದರೂ ಬೈಂದೂರಿಗೆ ಸಚಿವ ಸ್ಥಾನ ಮಾತ್ರ ಸಿಕ್ಕಿಲ್ಲ.

ಬಿಜೆಪಿ: ನಾಲ್ವರೊಳಗೆ ಪೈಪೋಟಿ
ಕಾಂಗ್ರೆಸ್‌ನಿಂದ ಅಭ್ಯರ್ಥಿ ಆಯ್ಕೆ ಅಂತಿಮ ವಾಗಿದ್ದರೂ ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ. ಪ್ರಮುಖವಾಗಿ ಬಿ.ಎಂ. ಸುಕುಮಾರ ಶೆಟ್ಟಿ, ಜಯಪ್ರಕಾಶ ಹೆಗ್ಡೆ, ಕೋಟ ಶ್ರೀನಿವಾಸ ಪೂಜಾರಿ, ಬಿ.ವೈ. ರಾಘವೇಂದ್ರ ಅವರ ಹೆಸರುಗಳು ಕೇಳಿ ಬರುತ್ತಿವೆ.

ಬೈಂದೂರಿನಲ್ಲಿ ಈಗಾಗಲೇ ಕಾಂಗ್ರೆಸ್‌ ಹಾಗೂ ಬಿಜೆಪಿಯ ರಾಷ್ಟ್ರ, ರಾಜ್ಯ ಮಟ್ಟದ ನಾಯಕರು ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಭಾಗವಹಿಸಿದ್ದು, ಚುನಾವಣೆ ಕಾವು ಏರುವಂತೆ ಮಾಡಿದ್ದಾರೆ. ಕಳೆದ ನವೆಂಬರ್‌ನಲ್ಲಿ ಬಿಎಸ್‌ವೈ ನೇತೃತ್ವದಲ್ಲಿ ನವಕರ್ನಾಟಕ ನಿರ್ಮಾಣಕ್ಕಾಗಿ ಬಿಜೆಪಿ ಯಾತ್ರೆ, ಕಳೆದ ಜನವರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌ ಸಾಧನಾ ಸಮಾವೇಶ, ಬಿಜೆಪಿಯಿಂದ ಇತ್ತೀಚೆಗೆ ಜನ ಸುರಕ್ಷಾ ರ್ಯಾಲಿ ನಡೆಯಿತು. ಕ್ಷೇತ್ರಕ್ಕೆ ಹೆಚ್ಚು ಅನುದಾನ ತಂದ ಹೆಗ್ಗಳಿಕೆ ಕಾಂಗ್ರೆಸ್‌ಗಿದ್ದರೆ, ಪಕ್ಷದ ರಾಜ್ಯಾಧ್ಯಕ್ಷರೇ ಸಂಸದರಾಗಿರುವುದಲ್ಲದೆ ಹೆಚ್ಚಿನ ಜಿ.ಪಂ., ತಾ.ಪಂ. ಸದಸ್ಯರನ್ನು ಹೊಂದಿರುವುದು ಬಿಜೆಪಿಗೆ ವರವಾಗಿದೆ.

ಪ್ರಶಾಂತ್‌ ಪಾದೆ – ಉದಯವಾಣಿ)

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (1) ಖಂಡಿಸುವೆ (0) ಅಭಿಪ್ರಾಯವಿಲ್ಲ (0)