ಬೈಂದೂರು : ಒಣಕೊಡ್ಲು ಮಹಾಲಿಂಗೇಶ್ವರನಿಗೆ ಸ್ಪರ್ಶ ಪೂಜೆ

0
274

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು : ಬೈಂದೂರು ವರ್ಷದಲ್ಲಿ ಒಮ್ಮೆ ಮಾತ್ರ ಇಲ್ಲಿ ಶಿವಲಿಂಗವನ್ನು ಸ್ಪರ್ಶಿಸಿ ಪೂಜಿಸುವ ಅವಕಾಶ. ಜಾತಿ ಮತ ಪಂಥ ಭೇದ ಬಡವ ಬಲ್ಲಿದ ಎಂಬ ಭೇದ ಇಲ್ಲಿಲ್ಲ. ಶಿವರಾತ್ರಿಯಂದು ಸರತಿ ಸಾಲಿನಲ್ಲಿ ನಿಂತು ಶಿವನನ್ನು ಸ್ಪರ್ಶಿಸಿ ಪೂಜಿಸುವುದಕ್ಕಾಗಿ ನಾಡಿನಾದ್ಯಂತ ಇರುವ ಶಿವಭಕ್ತರು ಇಲ್ಲಿಗೆ ದೌಡಾಯಿಸುತ್ತಾರೆ.

ಇದು ಬೈಂದೂರು ವ್ಯಾಪ್ತಿಯ ಗಂಗನಾಡು ಎಂಬ ಕುಗ್ರಾಮದಲ್ಲಿರುವ ವಣಕೊಡ್ಲು ಶ್ರೀ ಮಹಾಲಿಂಗೇಶ್ವರನ ಮಹಿಮೆ. ಭಕ್ತರು ನೇರವಾಗಿ ಗರ್ಭಗುಡಿ ಪ್ರವೇಶಿಸಿ ಶಿವಲಿಂಗವನ್ನು ಸ್ಪರ್ಶಿಸಿ ಹಾಲು ಹಣ್ಣು ತುಪ್ಪ ನೈವೇದ್ಯ ನೆರವೇರಿಸುತ್ತಾರೆ. ಮಂಗಳವಾರ ಬೆಳಗ್ಗಿನಿಂದ ಸಹಸ್ರಾರು ಮಂದಿ ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಪುಳಕಿತರಾದರು. ಗೋಕರ್ಣವನ್ನು ಹೊರತು ಪಡಿಸಿದರೆ ಶಿವಲಿಂಗವನ್ನು ಮುಟ್ಟಿ ಪೂಜೆ ಮಾಡುವ ಅವಕಾಶವಿರುವುದು ಇಲ್ಲಿ ಮಾತ್ರ. ಅದು ಶಿವರಾತ್ರಿಯಂದು ಮಾತ್ರ.

ಬೈಂದೂರಿನಿಂದ ಸುಮಾರು 9 ಕಿ.ಮೀ. ದೂರ ಸಾಗಿದಾಗ ಸಹ್ಯಾದ್ರಿಯ ಮಡಿಲಿನಲ್ಲಿರುವ ಕುಗ್ರಾಮವೇ ಗಂಗನಾಡು. ಇಲ್ಲಿಯೇ ಸಮೀಪದಲ್ಲಿದೆ ವನಕೊಡ್ಲು ಪ್ರದೇಶ. ಬಹುತೇಕ ಗಿರಿಜನರೇ ನೆಲೆಸಿರುವ ಇಲ್ಲಿ ಮಹಾಲಿಂಗೇಶ್ವರ ಪ್ರಧಾನ ದೇವರು. ದೇವಾಲಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಈ ದೇವಾಲಯದ ಮುಂಭಾಗದಲ್ಲಿ ಪುಷ್ಕರಣಿಯಿದ್ದು (ಕೆರೆ) ಇದು ಸದಾ ಕಾಲ ನೀರಿನಿಂದ ತುಂಬಿರುತ್ತದೆ. ಇದಕ್ಕೆ ಕಾಶಿಯ ಗಂಗಾ ನದಿಯಿಂದ ನೀರು ಬರುತ್ತದೆ ಎಂಬ ಪ್ರತೀತಿಯಿದೆ. ಇದರಿಂದಾಗಿ ಈ ಊರಿಗೆ ಗಂಗನಾಡು ಎಂಬ ಹೆಸರು ಬಂದಿದೆ ಎನ್ನಲಾಗಿದೆ. ಈ ಕೆರೆಯ ನೀರನ್ನು ತೀರ್ಥ ಎಂದು ಭಾವಿಸಲಾಗುತ್ತದೆ. ಇದನ್ನು ಪ್ರೋಕ್ಷಣೆ ಮಾಡಿಕೊಂಡರೆ ಚರ್ಮ ರೋಗಗಳು ನಿವಾರಣೆಯಾಗುತ್ತದೆ ಎಂಬ ಭಾವನೆ ಭಕ್ತರಲ್ಲಿದೆ.

ಈ ಕ್ಷೇತ್ರ ಕಾರಣಿಕವಾದುದು. ಶಿವರಾತ್ರಿ ಪರ್ವದ ದಿನ ಮಾತ್ರ ಶಿವಲಿಂಗವನ್ನು ಮುಟ್ಟಿ ಪೂಜಿಸುವ ಅವಕಾಶ ಇಲ್ಲಿ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಇದು ಬಹಳ ವಿಶೇಷವಾದುದು. ಜಾತಿಮತ ಪಂಥ ಬೇಧವಿಲ್ಲದೆ ನಡೆಯುವ ಪ್ರಕ್ರಿಯೆ ಇದು. ಸಹಸ್ರಾರು ಭಕ್ತರು ಶಿವನನ್ನು ಮುಟ್ಟಿ ಪೂಜಿಸಲು ಅನುಕೂಲ ಮಾಡಿಕೊಡಲಾಗುತ್ತದೆ. ಬೆಳಗ್ಗೆ 5.30ರಿಂದ ರಾತ್ರಿ 10.30ರ ತನಕ ಅವಕಾಶವಿದೆ. ಬಳಿಕ ಕಟ್ಟೆ ಉತ್ಸವ, ಶುದ್ಧಕಲಶ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ನಡೆಯುತ್ತದೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)