ಯಡಿಯೂರಪ್ಪ ನಾಟಕ, ಶೋಭಾ ಕರಂದ್ಲಾಜೆ ನಾಟಕ ಎಂದ ಸಿದ್ದರಾಮಯ್ಯ

0
188

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ದೇವದುರ್ಗ (ರಾಯಚೂರು ಜಿಲ್ಲೆ), ಫೆಬ್ರವರಿ 12 : ಯಡಿಯೂರಪ್ಪ ನಾಟಕ, ಶೋಭಾ ಕರಂದ್ಲಾಜೆ ನಾಟಕ. ಈಶ್ವರಪ್ಪನಿಗೆ ಲಿಂಕ್ ತಪ್ಪಿಹೋಗಿದೆ. ಹಗಲು ಒಂದು ಥರ ಭಾಷಣ ಮಾಡ್ತಾರೆ, ರಾತ್ರಿ ಒಂಥರಾ ಭಾಷಣ ಮಾಡ್ತಾರೆ. ಕನಕಗಿರಿಗೆ ಬಂದಾಗ ಈಶ್ವರಪ್ಪ ಭಾಷಣ ಮಾಡಿದರು: ಸುಳ್ಳೋ ಪಳ್ಳೋ ಬಿಜೆಪಿ ಬಗ್ಗೆ ಒಳ್ಳೆಯದೇ ಹೇಳಿರಿ ಜನರ ಮುಂದೆ ಹೇಳಿದರು.

ಹೀಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಕಾಂಗ್ರೆಸ್ ನ ಜನಾಶೀರ್ವಾದ ಯಾತ್ರೆಯಲ್ಲಿ ಬಿಜೆಪಿಯನ್ನು ಸೋಮವಾರ ಗೇಲಿ ಮಾಡಿದರು. ಅಧಿಕಾರ ಇರುವಾಗ ಒಂದು ದಿನ ಕೊಳೆಗೇರಿ ಕಡೆಗೆ ತಿರುಗಿ ನೋಡಲಿಲ್ಲ. ಇವರ ಮನೆ ಹಾಳಾಗ. ಈಗ ಹೊಸ ನಾಟಕ ಶುರು ಮಾಡಿದ್ದಾರೆ: ಸ್ಲಮ್ ನಲ್ಲಿ ಮಲಗ್ತೀವಿ ಅಂತ ಶುರು ಮಾಡಿದ್ದಾರೆ ಎಂದರು.

ಐದು ವರ್ಷ ಅಧಿಕಾರದಲ್ಲಿದ್ದರಲ್ಲ ಯಡಿಯೂರಪ್ಪ ಸ್ಲಮ್ ನವರಿಗೆ ಏನು ಮಾಡಿದರು? ಬೆಂಗಳೂರಿನಲ್ಲಿ ಸ್ಲಮ್ ನಲ್ಲಿನ ಮನೆಗಳಿಗೆ ಪ್ರತಿ ತಿಂಗಳು ಹತ್ತು ಸಾವಿರ ಲೀಟರ್ ನೀರು ನಮ್ಮ ಸರಕಾರ ಕೊಡ್ತಿದೆ. ನಾವು ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡದವರ ಪರವಾಗಿ ಇದ್ದೇವೆ. ಅವರ ಪರವಾಗಿ ಕೆಲಸ ಮಾಡಿದ್ದೇವೆ ಎಂದು ಹೇಳಿದರು.

ಜನರು ಆಶೀರ್ವಾದ ಮಾಡಿದರೆ ಸರಕಾರ ನಡೆಸ್ತೀವಿ. ಇಲ್ಲದಿದ್ದರೆ ನಿಮ್ಮ ಪರವಾಗಿ ಕೆಲಸ ಮಾಡುವುದಂತೂ ಮಾಡ್ತೀವಿ. ಆದರೆ ಬಿಜೆಪಿಯವರಿಗೆ ಈ ಬಗ್ಗೆ ಕೂಡ ಕನಿಷ್ಠ ಅರಿವು ಇಲ್ಲ. ಪರಿವರ್ತನಾ ಯಾತ್ರೆ ಅಂತ ಬಿಜೆಪಿ ಅಧ್ಯಕ್ಷರಾದ ತಕ್ಷಣ ಯಡಿಯೂರಪ್ಪ ಇಲ್ಲಿಗೂ ಬಂದಿದ್ದರು. ಮಿಷನ್ ನೂರೈವತ್ತು ಅಂತಾರೆ. ಏಪ್ರಿಲ್ ನಲ್ಲಿ ನಂಜನಗೂಡು- ಗುಂಡ್ಲುಪೇಟೆ ಉಪ ಚುನಾವಣೆ ನಡೆಯಿತು. ಆ ಚುನಾವಣೆಗಳು ಮುಂದಿನ ಚುನಾವಣೆ ದಿಕ್ಸೂಚಿ ಅಂದರು. ಏನಾಯಿತು? ಎರಡೂ ಕಡೆ ಕಾಂಗ್ರೆಸ್ ಗೆಲುವು ಪಡೆಯಿತು.

ಇನ್ನು ಈಚೆಗೆ ಯಡಿಯೂರಪ್ಪ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಇರಲಿ, ಅವರ ಸ್ಟ್ಯಾಂಡರ್ಡ್ ಅಷ್ಟೇ ಬಿಡಿ. ಆದರೆ ಯಡಿಯೂರಪ್ಪ ಜೈಲಿಗೆ ಹೋದರು. ಗಣಿಗಾರಿಕೆಯಲ್ಲಿ ಲೂಟಿ ಹೊಡೆದು, ಚೆಕ್ ನಲ್ಲಿ ಲಂಚ ಪಡೆದು ಜೈಲಿಗೆ ಹೋದರು. ಅದೆನು ಬೀಗತನ ಮಾಡೊಕ್ಕೆ ಜೈಲಿಗೆ ಹೋದರಾ? ಇಂಥವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಸಿದ್ದರಾಮಯ್ಯ ಸರಕಾರ ಭ್ರಷ್ಟ ಸರಕಾರ ಅಂತಾರಲ್ಲ ನರೇಂದ್ರ ಮೋದಿ, ಅವರಿಗೆ ನಾಚಿಕೆ ಇದೆಯಾ?

ಇಂಥ ಸುಳ್ಳು ಹೇಳುವ ಬಿಜೆಪಿಯವರಿಗೆ ಅಧಿಕಾರ ಕೊಡಬೇಕಾ? ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡದವರಿಗೆ ಕೆಸಿಪಿ ಹಣ ಇದೆ. ಜನಸಂಖ್ಯೆಗೆ ಅನುಗುಣವಾಗಿ ಹಣ ಖರ್ಚು ಮಾಡಲು ಕಾನೂನು ಮಾಡಿದ್ದು ಕಾಂಗ್ರೆಸ್ ಸರಕಾರ. ನಮ್ಮ ಸರಕಾರಕ್ಕೂ ಮುನ್ನ ಖರ್ಚು ಮಾಡಿದ್ದು ಇಪ್ಪತ್ತೊಂದು ಸಾವಿರ ಕೋಟಿ. ನಾವು ಕಾನೂನು ಮಾಡಿದ ಮೇಲೆ ಐದು ವರ್ಷದಲ್ಲಿ ಎಂಬತ್ತೇಳು ಸಾವಿರ ಕೋಟಿ ರುಪಾಯಿ ಖರ್ಚು ಮಾಡಲಾಗಿದೆ.

ನಮ್ಮ ರಾಜ್ಯದಲ್ಲಿ ಇಪ್ಪತ್ತೇಳು ಸಾವಿರ ಕೋಟಿ ರುಪಾಯಿಯನ್ನು ಪರಿಶಿಷ್ಟ ಜಾತಿ- ಪಂಗಡದವರಿಗೆ ಖರ್ಚು ಮಾಡಿದ್ದೀವಿ. ಮುಂದಿನ ಸಾಲಿಗೆ ಮೂವತ್ತು ಸಾವಿರ ಕೋಟಿ ಖರ್ಚು ಮಾಡಲಿದ್ದೇವೆ. ಸಾಮಾಜಿಕ ನ್ಯಾಯದ ಬಗ್ಗೆ ಯಡಿಯೂರಪ್ಪ- ಬಿಜೆಪಿಯಿಂದ ಪಾಠ ಕಲಿಯುವ ಅಗತ್ಯ ಇಲ್ಲ. ಅದು ಕಾಂಗ್ರೆಸ್ ರಕ್ತದಲ್ಲೇ ಇದೆ.

ಗುತ್ತಿಗೆಯಲ್ಲಿ ಮೀಸಲಾತಿ ಕೊಟ್ಟ ಏಕೈಕ ರಾಜ್ಯ ಕರ್ನಾಟಕ. ದೇಶದ ಬೇರೆ ಎಲ್ಲಾದರೂ ಈ ರೀತಿ ಮೀಸಲಾತಿ ಕೊಟ್ಟಿದ್ದಾರಾ ಅಂತ ಮೋದಿ ತಿಳಿಸಲಿ. ಕೆಐಎಡಿಬಿಯಲ್ಲಿ ಶೇ ನಾಲ್ಕರಷ್ಟು ಬಡ್ಡಿದರದಲ್ಲಿ ಸಾಲ ನೀಡಿದ್ದೇವೆ. ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಿಸಬೇಕು ಎಂಬ ಒತ್ತಾಯ ಇದೆ. ಅದು ನನ್ನ ಮನಸ್ಸಿನಲ್ಲಿ ಇದೆ. ಜಾತಿ ಸಮೀಕ್ಷೆ ಮಾಡುತ್ತಿದ್ದೇವೆ. ಹದಿನೈದು ಪ್ಲಸ್ ಮೂರು ಹದಿನೆಂಟು ಪರ್ಸೆಂಟ್ ನಿಮ್ಮ ಸಮುದಾಯಕ್ಕಿದೆ. ನಿಮ್ಮ ಒಟ್ಟು ಜನಸಂಖ್ಯೆ ಲೆಕ್ಕ ಇಟ್ಟು ಇಪ್ಪತ್ನಾಲ್ಕು ಪರ್ಸೆಂಟ್ ಮೀಸಲಾತಿ ತರಬೇಕಿದೆ. ಜಾತಿ ಸಮೀಕ್ಷೆ ವರದಿ ಬರ್ತಿದ್ದ ಹಾಗೆ ಈಗ ಇರುವ ಮೀಸಲಾತಿ ಪ್ರಮಾಣವನ್ನು ಐವತ್ತು ಪರ್ಸೆಂಟ್ ನಿಂದ ಎಪ್ಪತ್ತು ಪರ್ಸೆಂಟ್ ಗೆ ಏರಿಕೆ ಮಾಡ್ತೀನಿ.

ಬಿಜೆಪಿ ಮೀಸಲಾತಿ ವಿರೋಧಿ ಪಕ್ಷ. ಅನಂತಕುಮಾರ್ ಹೆಗಡೆ ನರೇಂದ್ರ ಮೋದಿ ಮಂತ್ರಿ ಮಂಡಲದಲ್ಲಿ ಮಂತ್ರಿ. ಅವರು ಏನಂತಾರೆ, ನಾವು ಬಂದಿರೋದು ಸಂವಿಧಾನ ಬದಲಾಯಿಸಲು ಅಂತಾರೆ. ಇಂಥವರಿಂದ ಸಾಮಾಜಿಕ ನ್ಯಾಯ ನಿರೀಕ್ಷೆ ಮಾಡಲು ಸಾಧ್ಯವಾ? ಅದು ಏನಿದ್ದರೂ ಕಾಂಗ್ರೆಸ್ ನಿಂದ ಸಾಧ್ಯ. ನಾವು ಮೀಸಲಾತಿ ಹೆಚ್ಚಾಗಬೇಕು ಎಂಬ ನಿಲುವಿನ ಪರ ಇದೀವಿ.

ನಾವು ನುಡಿದಂತೆ ನಡೆದಿದ್ದೇವೆ. ಕೊಟ್ಟಿದ್ದ ಎಲ್ಲ ಭರವಸೆಗಳನ್ನು ಈಡೇರಿಸಿದ್ದೇವೆ. ನಮ್ಮ ಸರಕಾರ ಜಾರಿಗೆ ತಂದ ಯೋಜನೆಗಳನ್ನು ಬೇರೆ ಯಾರಾದರೂ ತಂದಿದ್ದಾರಾ? ಮೋದಿ ಸಾಲ ಮನ್ನಾ ಮಾಡಿದಿರಾ? ಎಂಟು ಸಾವಿರ ಕೋಟಿ ರುಪಾಯಿ ಸಾಲ ಮನ್ನಾ ಮಾಡಿರೋದು ಲಾಲಿಪಪ್ ಕೊಟ್ಟಂತೆ ಅಂತಾರೆ ಜಾವಡೇಕರ್. ಇವರು ಕೇಂದ್ರದಿಂದ ಬಿಡಿಗಾಸು ಕೊಡಲು ಸಹ ಆಗಲ್ಲ ಎಂದುಬಿಟ್ಟರು. ಆದ್ದರಿಂದ ಇಂಥವರನ್ನು ಆಯ್ಕೆ ಮಾಡುವ ಬದಲು ಮತ್ತೆ ಕಾಂಗ್ರೆಸ್ ಗೆ ಆಶೀರ್ವಾದ ಮಾಡಿ, ರಾಹುಲ್ ಗಾಂಧಿ ಅವರಿಗೆ ಆಶೀರ್ವಾದ ಮಾಡಿ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)