ಬೆಳವಾಡಿಯಲ್ಲಿ ಮಗನ ಸಾವಿನ ದುಃಖದಲ್ಲೇ ಉಸಿರು ಚೆಲ್ಲಿದ ತಂದೆ

0
147

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

ಮೈಸೂರು, ಫೆಬ್ರವರಿ 12 : ಎದೆಯೆತ್ತರ ಬೆಳೆದ ಮಗ ಅನಾರೋಗ್ಯದಿಂದ ಕೊನೆಯುಸಿರೆಳೆದ ದುಃಖದಲ್ಲಿ ಅಪ್ಪನೂ ಪ್ರಾಣ ಬಿಟ್ಟ ಘಟನೆ ವರದಿಯಾಗಿದೆ.

ಈ ಹೃದಯವಿದ್ರಾವಕ ಘಟನೆ ನಡೆದಿದ್ದು ನಗರ ಹೊರವಲಯದ ಬೆಳವಾಡಿಯಲ್ಲಿ. ಗ್ರಾಮದ ನಿವಾಸಿ ಪುಟ್ಟೇಗೌಡ (68) ಮಗ ಭೈರನ ಸಾವಿನ ದುಃಖ ಭರಿಸಲಾಗದೆ ಕೊನೆಯುಸಿರೆಳೆದವರು. ಪುಟ್ಟೇಗೌಡ ಅವರಿಗೆ ಮೂವರು ಹೆಣ್ಣುಮಕ್ಕಳು, ಒಬ್ಬ ಮಗ. ಹೆಣ್ಣು ಮಕ್ಕಳಿಗೆ ಮದುವೆ ಮಾಡಿದ್ದ ಪುಟ್ಟೇಗೌಡರು ಮಗ ಭೈರ (33) ಮತ್ತು ಪತ್ನಿಯೊಂದಿಗೆ ವಾಸವಾಗಿದ್ದರು.

ಮಗನಿಗೆ ಮದುವೆ ಮಾಡಲು ವಧು ಅನ್ವೇಷಣೆಯಲ್ಲೂ ತೊಡಗಿದ್ದರು. ಈ ನಡುವೆ ಕುಟುಂಬಕ್ಕೆ ಆಸರೆಯಾಗಿದ್ದ ಭೈರನಿಗೆ ಅನಾರೋಗ್ಯ ಕಾಡಿತ್ತು. ವೈದ್ಯರಿಗೆ ತೋರಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಇತ್ತೀಚೆಗೆ ಅನಾರೋಗ್ಯ ಉಲ್ಬಣಿಸಿ ಶನಿವಾರ ರಾತ್ರಿ ಭೈರ ಸಾವಿಗೀಡಾದರು.

ಆತನ ಅಂತ್ಯಸಂಸ್ಕಾರಕ್ಕೆ ಭಾನುವಾರ ಸಿದ್ಧತೆ ನಡೆದಿತು. ಬಂಧು- ಬಳಗದವರು, ಗಾಮಸ್ಥರೆಲ್ಲರೂ ಸೇರಿದ್ದರು. ಪುತ್ರನ ಶವವನ್ನು ಸ್ಮಶಾನಕ್ಕೆ ಒಯ್ಯುವ ಸಂದರ್ಭದಲ್ಲಿ ತೀವ್ರ ದುಃಖಿತರಾದ ಪುಟ್ಟೇಗೌಡರು ಅಸ್ವಸ್ಥರಾದರು. ತಕ್ಷಣ ಕೆಲವು ಸಂಬಂಧಿಗಳು ಅವರನ್ನು ಆಸ್ಪತೆಗೆ ಕರೆದೊಯ್ದರೆ, ಉಳಿದವರು ಭೈರನ ಶವವನ್ನು ಅಂತ್ಯಸಂಸ್ಕಾರಕ್ಕಾಗಿ ಸ್ಮಶಾನಕ್ಕೆ ಕೊಂಡೊಯ್ದರು.

ಇನ್ನೇನು ಅಂತ್ಯಸಂಸ್ಕಾರ ನಡೆಸಬೇಕು ಎನ್ನುವಷ್ಟರಲ್ಲಿಯೇ ಪುಟ್ಟೇಗೌಡರೂ ಕೊನೆಯುಸಿರೆಳೆದರು ಎಂಬ ಸುದ್ದಿ ಗ್ರಾಮಕ್ಕೆ ಬರಸಿಡಿಲಿನಂತೆ ಬಡಿಯಿತು. ಕುಟುಂಬದವರು, ಸಂಬಂಧಿಗಳು ಪುತ್ರನ ಶವವನ್ನು ಸ್ಮಶಾನದಲ್ಲೇ ಇರಿಸಿ ಮತ್ತೆ ಮನೆಗೆ ಧಾವಿಸಿದರು. ಪುಟ್ಟೇಗೌಡರ ನಿಧನಕ್ಕೆ ಕಂಬನಿ ಮಿಡಿದರು.

ಮನೆಗೆ ಆಸರೆಯಾಗಿದ್ದ ಮಗನ ಸಾವಿನ ನೋವನ್ನು ಅರಗಿಸಿಕೊಳ್ಳಲಾಗದೆ ಪರಿತಪಿಸುತ್ತಿದ್ದ ಪುಟ್ಟೇಗೌಡರ ಪತ್ನಿ, ಈಗ ಕುಟುಂಬದ ಮುಖ್ಯಸ್ಥನಾದ ಪತಿಯ ಸಾವು ಕಂಡು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಮನೆಯ ಹೆಣ್ಣುಮಕ್ಕಳು ಮತ್ತು ಬಂಧುಗಳ ರೋದನ ಮುಗಿಲು ಮುಟ್ಟಿತ್ತು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)