ಮೀನುಗಾರರಿಗೆ ಸೀಮೆಎಣ್ಣೆ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಯತ್ನ-ನಾಡದೋಣಿ ಮೀನುಗಾರರ ಸಮಾವೇಶ ಉದ್ಘಾಟಿಸಿ ಬಿ.ವೈ. ರಾಘವೇಂದ್ರ

0
311

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (4) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು: ದೇಶದಲ್ಲಿನ ಬಡ ಮಹಿಳೆಯರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಉಜ್ವಲ ಯೋಜನೆ ಜಾರಿಗೆ ತಂದು, ಸೀಮೆ ಎಣ್ಣೆ ಮುಕ್ತ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಿದೆ. ಇದರಿಂದಾಗಿ ನಾಡದೋಣಿ ಮೀನುಗಾರರಿಗೆ ಸೀಮೆಎಣ್ಣೆ ಸಮಸ್ಯೆ ಎದುರಾಗಿದೆ. ಈ ಯೋಜನೆಯಿಂದ ಸಾಂಪ್ರದಾಯಿಕ ಮೀನುಗಾರರಿಗೆ ವಿನಾಯಿತಿ ನೀಡಿ, ಅವರಿಗೆ ಸಬ್ಸಿಡಿ ದರದಲ್ಲಿ ಸಾಕಷ್ಟು ಸೀಮೆಎಣ್ಣೆ ಒದಗಿಸುವಂತೆ ಇಲ್ಲಿನ ಸಂಸದ ಯಡಿಯೂರಪ್ಪನವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿ, ಮೀನುಗಾರ ಸೀಮೆಎಣ್ಣೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಮಾಜಿ ಸಂಸದ ಹಾಗೂ ಶಿಕಾರಿಪುರ ಕ್ಷೇತ್ರದ ಶಾಸಕ ಬಿ. ವೈ. ರಾಘವೇಂದ್ರ ಹೇಳಿದ್ದಾರೆ.
ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಬೆಳ್ಳಿಹಬ್ಬ ಪ್ರಯುಕ್ತ ಉಪ್ಪುಂದದ ಕೊಡೇರಿ ಬಂದರಿನಲ್ಲಿ ಶನಿವಾರ ನಡೆದ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ತಮ್ಮ ಹೊತ್ತಿನ ಬುತ್ತಿನ ತುಂಬಿಸಿಕೊಳ್ಳುವ ನೆಲೆಯಲ್ಲಿ ಪ್ರತಿ ದಿನ ಕಡಲಿನೊಂದಿಗೆ ಸೆಣೆಸುತ್ತಿರುವ ಮೀನುಗಾರರು ಶ್ರಮಜೀವಿಗಳಾಗಿದ್ದು, ಪ್ರಾಮಾಣಿಕರು ಹಾಗೂ ಸ್ವಾಭಿಮಾನಕ್ಕೆ ಹೆಸರುವಾಸಿಯಾಗಿರುವುದಲ್ಲದೇ ದೇಶ ಪ್ರೇಮಿಗಳಾಗಿದ್ದಾರೆ. ಇಲ್ಲಿನ ನಾಡದೋಣಿ ಮೀನುಗಾರರ ಸಂಘದ ಕಾರ್ಯವೈಖರಿಯನ್ನು ಶ್ಲಾಘಿಸಿದ ಅವರು ಈ ಸಂಘ ಕೇವಲ ಈ ಭಾಗಕ್ಕೆ ಮಾತ್ರ ಸೀಮಿತವಾಗಿರದೇ, ರಾಜ್ಯದ ಎಲ್ಲಾ ಸಾಂಪ್ರದಾಯಿಕ ಮೀನುಗಾರರ ಸಮಸ್ಯೆಗಳ ಬಗ್ಗೆ ಹೋರಾಟ ನಡೆಸುತ್ತಿದೆ ಎಂದರು.

ಸಂಸದ ಬಿ.ಎಸ್. ಯಡಿಯೂರಪ್ಪನವರ ಶಿಫಾರಸ್ಸಿನ ಮೇರೆಗೆ ಕೇಂದ್ರ ರಸ್ತೆ ಅಭಿವೃದ್ಧಿ ನಿಯಿಂದ ತಾರಪತಿ ಅಳ್ವೆಕೋಡಿ ಸೇತುವೆ ನಿರ್ಮಾಣಕ್ಕೆ 20 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದ ಅವರು ಮುಂದಿನ ದಿನಗಳಲ್ಲಿ ಮೀನುಗಾರರ ಎಲ್ಲಾ ಸಮಸ್ಯೆಗಳ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೂಲಕ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಜೀವ ರಕ್ಷಕ ಪ್ರಶಸ್ತಿ ವಿತರಿಸಿದ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಸಾಂಪ್ರದಾಯಿಕ ನಾಡದೋಣಿಗಳಿಗೆ ಈ ವರ್ಷದ ಮಾರ್ಚ್ ತನಕ ಸಬ್ಸಿಡಿ ದರದಲ್ಲಿ ಸೀಮೆ ಎಣ್ಣೆ ವಿತರಿಸಲು ರಾಜ್ಯ ಸರ್ಕಾರ ಆದೇಶ ನೀಡಿದ್ದು, ಅದನ್ನು ಮೇ ವರೆಗೆ ವಿಸ್ತರಿಸುವಂತೆ ಮನವಿ ಮಾಡಲಾಗುವುದು. ಸರ್ಕಾರ ಮೀನುಗಾರ ಮಹಿಳೆಯರಿಗೆ ಶೇ. 2 ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲು 6 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದು, ಮುಂದಿನ ದಿನಗಳಲ್ಲಿ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುವಂತೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಅವರು ಬಜೆಟ್‍ನಲ್ಲಿ ಅದಕ್ಕೆ ಅನುಮೋದನೆ ನೀಡುವ ವಿಶ್ವಾಸವಿದೆ ಎಂದರು.

ಮಡಿಕಲ್‍ನಲ್ಲಿ ಬಂದರು: ಉಪ್ಪುಂದ ಮಡಿಕಲ್‍ನಲ್ಲಿ ಹೊರಬಂದರು ನಿರ್ಮಾಣಕ್ಕೆ ಈಗಾಗಲೇ ಮಂಜೂರಾಗಿದ್ದು, ಸುಮಾರು 107ಕೋಟಿ ರೂ. ಅಂದಾಜುಪಟ್ಟಿ ಸಿದ್ದಪಡಿಸಲಾಗಿದೆ, ಆದರೆ ಆ ಕಾಮಗಾರಿ ಕೆಲವೊಂದು ತಾಂತ್ರಿಕ ಸಮಸ್ಯೆಗಳಿಂದ ವಿಳಂಬವಾಗಿದ್ದು, ಅದು ಪೂರ್ಣಗೊಂಡ ಬಳಿಕ ಕ್ಯಾಬಿನೆಟ್‍ಗೆ ಬರಲಿದೆ ಎಂದರು. ಈ ಬಾರಿ ಮತ್ಸಾಶ್ರಯ ಯೋಜನೆಯಡಿ ಕ್ಷೇತ್ರ ವ್ಯಾಪ್ತಿಗೆ 500 ಮೀನುಗಾರಿಕಾ ಮನೆಗಳನ್ನು ಮಂಜೂರಾಗಿದೆ ಎಂದ ಅವರು ಕರಾವಳಿ ಸಿಆರ್‍ಜಡ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ವಲಯ 3ರಿಂದ 2ಕ್ಕೆ ಸೇರ್ಪಡೆ ಮಾಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜ್ಯದಲ್ಲಿರುವ ಮೀನುಗಾರರನ್ನು ಅಸಂಘಟಿತ ಕಾರ್ಮಿಕರ ಪಟ್ಟಿಗೆ ಸೇರ್ಪಡೆ ಮಾಡುವಂತೆ ಒತ್ತಾಯಿಸಲಾಗುವುದು ಎಂದರು.

ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಸೋಮಶೇಖರ ಕೆ.ಎಂ. ಅಧ್ಯಕ್ಷತೆ ವಹಿಸಿದ್ದರು. ಉಪ್ಪುಂದ ಗ್ರಾ.ಪಂ. ಅಧ್ಯಕ್ಷೆ ದುರ್ಗಮ್ಮ ಪರಿಹಾರ ನಿಯೋಜನೆಯನ್ನು, ಕಿರಿಮಂಜೇಶ್ವರ ಗ್ರಾ.ಪಂ. ಅಧ್ಯಕ್ಷೆ ಲಲಿತಾ ಕಾರ್ವಿ ಕೊಡೇರಿ ಮೀನುಗಾರಿಕಾ ಕೇಂದ್ರವನ್ನು ಹಾಗೂ ಉತ್ತರ ಕನ್ನಡ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಸದಾನಂದ ಜಟ್ಟಿ ಹರಿಕಾಂತ ಸಂಘದ ಸದಸ್ಯರ ವೆಬ್‍ಸೈಟ್ ಅನಾವರಣಗೊಳಿಸಿದರು.

ಗಂಗೊಳ್ಳಿ ವಲಯ ನಾದಡೋಣಿ ಮೀನುಗಾರರ ಸಂಘದ ಅಧ್ಯಕ್ಷ ಮಂಜು ಬಿಲ್ಲವ, ಶಿರೂರು ಅಲ್ಪಸಂಖ್ಯಾತರ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಅಬ್ದುಲ್ ಅಜೀದ್, ಉಡುಪಿ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಚಂದ್ರಕಾಂತ ಕರ್ಕೆರ, ಸಂಘದ ನಿಕಟಪೂರ್ವಾಧ್ಯಕ್ಷರಾದ ಡಿ. ರಾಮಚಂದ್ರ ಖಾರ್ವಿ, ಬಿ. ಕುಮಾರ ಖಾರ್ವಿ, ಸಂಘದ ಕಾರ್ಯದರ್ಶಿ ನರೇಶ ಕೊಡೇರಿ, ಉಪಸ್ಥಿತರಿದ್ದರು.
ಸಂಘದ ಗೌರವಾಧ್ಯಕ್ಷ ನವೀನಚಂದ್ರ ಉಪ್ಪುಂದ ಸ್ವಾಗತಿಸಿದರು, ಸ್ಥಾಪಕಾಧ್ಯಕ್ಷ ಮದನಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು, ಪತ್ರಕರ್ತ ಅರುಣಕುಮಾರ ನಿರೂಪಿಸಿ, ಕೋಶಾಕಾರಿ ಅಣ್ಣಯ್ಯ ಖಾರ್ವಿ ವಂದಿಸಿದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (4) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)