ಅಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಟಿಡಿಪಿ ಆಗ್ರಹ, ಲೋಕಸಭಾ ಕಲಾಪ ಮಾರ್ಚ್ 5ಕ್ಕೆ ಮುಂದೂಡಿಕೆ

0
231

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ನವದೆಹಲಿ: ವಿಭಜಿತ ಆಂಧ್ರ ಪ್ರದೇಶ ರಾಜ್ಯಕ್ಕೆ ಕೇಂದ್ರ ಸರ್ಕಾರ ವಿಶೇಷ ಸ್ಥಾನಮಾನ ಕಲ್ಪಿಸಬೇಕು ಎಂದು ಆಗ್ರಹಿಸಿ ಕಳೆದ ಮೂರು ದಿನಗಳಿಂದ ತೆಲುಗು ದೇಶಂ ಪಕ್ಷದ ಸಂಸದರು ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದ್ದು, ಶುಕ್ರವಾರ ಲೋಕಸಭಾ ಕಲಾಪವನ್ನು ಮಾರ್ಚ್ 5ಕ್ಕೆ ಮುಂದೂಡಿಕೆ ಮಾಡಲಾಯಿತು.

ಶುಕ್ರವಾರ ಕಲಾಪ ಆರಂಭವಾಗಿ, ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಪ್ರಕ್ರಿಯೆ ಆರಂಭಿಸುತ್ತಿದ್ದಂತೆಯೇ ಟಿಡಿಪಿ ಸಂಸದರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದರು. ಅಂತೆಯೇ ಕೆಲವೇ ನಿಮಿಷಗಳಲ್ಲಿ ಸದನದ ಬಾವಿಗಿಳಿದ ಸಂಸದರು ಆಂಧ್ರ ಪ್ರದೇಶಕ್ಕೆ ಕೇಂದ್ರ ಸರ್ಕಾರ ವಿಶೇಷ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದರು. ಅಲ್ಲದೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ವಿರುದ್ಧ ಘೋಷಣೆ ಕೂಗಿದ ಸಂಸದರು, ಜೇಟ್ಲಿ ತಮ್ಮ ಬಜೆಟ್ ನಲ್ಲಿ ಆಂಧ್ರ ಪ್ರದೇಶ ರಾಜ್ಯ ಪುನಶ್ಚೇತನಕ್ಕೆ ಯಾವುದೇ ರೀತಿಯ ಪ್ಯಾಕೇಜ್ ಘೋಷಣೆ ಮಾಡಿಲ್ಲ. ಕನಿಷ್ಟ ಪಕ್ಷ ಆಂಧ್ರ ಪ್ರದೇಶಕ್ಕಾಗಿ ಯಾವುದೇ ರೀತಿಯ ನಿಧಿಯನ್ನೂ ಮೀಸಲಿಟ್ಟಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಟಿಡಿಪಿ ಸಂಸದರ ಸಂತೈಸುವ ಕಾರ್ಯಕ್ಕೆ ಮುಂದಾದರು. ಪ್ರತೀ ದಿನ ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದು ಹೇಳಿದರು. ಇದಕ್ಕೆ ಕಿವಿಗೊಡದ ಸಂಸದರು ನಿರಂತರವಾಗಿ ಘೋಷಣೆಗಳನ್ನು ಕೂಗುತ್ತ ಕಲಾಪಕ್ಕೆ ಅಡ್ಡಿಪಡಿಸಿದರು. ಅಂತಿಮವಾಗಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಕಲಾಪವನ್ನು ಮಧ್ಯಾಹ್ನೆಕ್ಕೆ ಮುಂದೂಡಿದರು. ಬಳಿಕ ಮಧ್ಯಾಹ್ನ 12ಕ್ಕೆ ಕಲಾಪ ಆರಂಭವಾಯಿತಾದರೂ, ಟಿಡಿಪಿ ಸಂಸದರು ಮಾತ್ರ ಪ್ರತಿಭಟನೆ ಕೈಬಿಟ್ಟಿರಲಿಲ್ಲ. ಅಲ್ಲದೆ ವೈಎಸ್ ಆರ್ ಪಿ ಪಕ್ಷದ ಸಂಸದರೂ ಕೂಡ ಆಂಧ್ರ ಪ್ರದೇಶ ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿದ್ದರಿಂದ ಕಲಾಪವನ್ನು ಮಾರ್ಚ್ 5ಕ್ಕೆ ಮುಂದೂಡಿಕೆ ಮಾಡಲಾಯಿತು.

ನಿನ್ನೆಯಷ್ಟೇ ಈ ಬಗೆ ಸಂಸತ್ ನ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಟಿಡಿಪಿ ಸಂಸದರು, ಕೇಂದ್ರ ಸರ್ಕಾರದ ಮೇಲಿದ್ದ ನಮ್ಮ ನಂಬಿಕೆ ಮುರಿದಿದೆ. ವಿಭಜಿತ ಆಂಧ್ರ ಪ್ರದೇಶಕ್ಕೆ ಕೇಂದ್ರ ಸರ್ಕಾರ ತನ್ನ ಬಜೆಟ್ ನಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ನಿರೀಕ್ಷೆ ಇತ್ತು. ಆದರೆ ಈ ಬಗ್ಗೆ ಬಜೆಟ್ ನಲ್ಲಿ ಯಾವುದೇ ರೀತಿಯ ಪ್ರಸ್ತಾವನೆಯೇ ಇಲ್ಲ. ಹೀಗಾಗಿ ನಾವು ಪ್ರತಿಭಟನೆ ನಡೆಸುತ್ತಿದ್ದು, ಕೇಂದ್ರ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳದ್ದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತೇವೆ.

ಇದರ ಬೆನ್ನಲ್ಲೇ ಪ್ರತಿಭಟನಾ ನಿರತ ಟಿಡಿಪಿ ಸಂಸದರ ಉದ್ದೇಶಿಸಿ ಮಾತನಾಡಿದ್ದ ವಿತ್ತ ಸಚಿವ ಅರುಣ್ ಜೇಟ್ಲಿ, ಆಂಧ್ರ ಪ್ರದೇಶ ಸಂಸದರ ಆಗ್ರಹವನ್ನು ಕೇಂದ್ರ ಸರ್ಕಾರ ಆಲಿಸಲಿದೆ. ಮುಂದಿನ ದಿನಗಳಲ್ಲಿ ಆಂಧ್ರ ಪ್ರದೇಶದ ಆದಾಯವನ್ನು ಪರಿಗಣಿಸಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಕುರಿತು ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)