ಕೊಲ್ಲೂರು: ಪ್ರೇಮ ವೈಫಲ್ಯದಿಂದ ಪೊಲೀಸ್ ಪೇದೆ ಆತ್ಮಹತ್ಯೆ

0
1017

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಕೊಲ್ಲೂರು : ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್‌ ಕಾನ್‌ಸ್ಟೆಬಲ್‌ ಪ್ರೇಮ ವೈಫಲ್ಯದಿಂದ ಕೊಲ್ಲೂರಿನ ವಸತಿಗೃಹದಲ್ಲಿ ನೇಣು ಬಿಗಿದುಕೊಂಡು ಶನಿವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದಾವಣಗೆರೆ ಮೂಲದ ಪೊಲೀಸ್‌ ಕಾನ್‌ಸ್ಟೆಬಲ್‌ ನಾಗರಾಜ (23) ಆತ್ಮಹತ್ಯೆಗೆ ಶರಣಾದವರು. ಅವರ ಆತ್ಮಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆಯೆ ಅವರ ಪ್ರೇಯಸಿ, ಅದೇ ಠಾಣೆಯ ಮಹಿಳಾ ಕಾನ್‌ಸ್ಟೆಬಲ್‌ ಕೂಡ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಅಪಾಯದಿಂದ ಪಾರಾಗಿದ್ದಾರೆ.

ಶನಿವಾರ ಬೆಳಗ್ಗೆ ಕರ್ತವ್ಯ ಮುಗಿಸಿ ಕೊಲ್ಲೂರಿನ ಸೌಪರ್ಣಿಕಾ ಗೆಸ್ಟ್‌ ಹೌಸ್‌ನಲ್ಲಿ ತಂಗಿದ್ದ ನಾಗರಾಜ್‌ ರಾತ್ರಿಯ ವೇಳೆ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಅವರ ಕೊಠಡಿಯಲ್ಲಿದ್ದ ಇನ್ನೊಬ್ಬ ಕಾನ್‌ಸ್ಟೆಬಲ್‌ ರಾತ್ರಿ ಪಾಳಿ ಮುಗಿಸಿ ಭಾನುವಾರ ಬೆಳಗ್ಗೆ ಕೊಠಡಿಗೆ ಆಗಮಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ದಾವಣಗೆರೆಯ ಮಲೆಬೆನ್ನೂರಿನವರಾದ ನಾಗರಾಜ್‌ 2004ರಲ್ಲಿ ಪೊಲೀಸ್‌ ಕಾನ್‌ಸ್ಟೆಬಲ್‌ ಆಗಿ ನೇಮಕಗೊಂಡು ಕೊಲ್ಲೂರು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ನಡುವೆ ಅದೇ ಠಾಣೆಯ ಮಹಿಳಾ ಕಾನ್‌ಸ್ಟೆಬಲ್‌ ಜತೆ ಪ್ರೇಮಾಂಕುರವಾಗಿತ್ತು, ಇಬ್ಬರ ಪ್ರೀತಿಯ ವಿಚಾರ ಅವರ ಕುಟುಂಬಿಕರಿಗೂ ತಿಳಿದು ಎರಡು ಕುಟುಂಬದವರು ಮದುವೆಗೆ ಸಮ್ಮತಿ ಸೂಚಿಸಿದ್ದರು ಎನ್ನಲಾಗಿದೆ. ಆದರೆ ಈ ಮಧ್ಯೆ ಪ್ರೇಮಿಗಳಿಬ್ಬರ ನಡುವೆ ಉಂಟಾದ ಬಿರುಕು ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

ಡೆತ್‌ನೋಟ್‌ ಪತ್ತೆ: ನಾಗರಾಜ್‌ ಬರೆದಿಟ್ಟ ಡೆತ್‌ನೋಟ್‌ನಲ್ಲಿ ಪತ್ತೆಯಾಗಿದ್ದು ಅದರಲ್ಲಿ ನನ್ನ ಸಾವಿಗೆ ನಾನೇ ಕಾರಣ ಎಂದು ಹೇಳಿಕೊಂಡಿದ್ದಾರೆ. ಅಪ್ಪ ಅಮ್ಮ ಕ್ಷ ಮಿಸಿ, ತನ್ನ ಪ್ರೇಯಸಿ ಚೆನ್ನಾಗಿರಬೇಕು ಎಂದು ಬರೆದಿದ್ದರು.

ಪ್ರೇಯಸಿ ಆತ್ಮಹತ್ಯೆಗೆ ಯತ್ನ: ನಾಗರಾಜ ಅವರ ಆತ್ಮಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆ ಅದೇ ಠಾಣೆಯ ಮಹಿಳಾ ಸಿಬ್ಬಂದಿ ಪ್ರೇಯಸಿಯೂ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಸ್ಥಳೀಯರು ಹಾಗೂ ಇತರ ಸಿಬ್ಬಂದಿಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್‌ ಅಧೀಕ್ಷ ಕ ಕುಮಾರ ಚಂದ್ರ,ಕುಂದಾಪುರ ಡಿವೈಎಸ್‌ಪಿ ಪ್ರವೀಣ್‌ ನಾಯ್ಕ್‌, ಕೊಲ್ಲೂರು ಠಾಣಾಧಿ ಕಾರಿ ಸುದರ್ಶನ್‌ ಭೇಟಿ ನೀಡಿದರು.ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಡಕುಟುಂಬ: ಕೃಷಿ ಕೂಲಿ ಕಾರ್ಮಿಕ ಕುಟುಂಬದವರಾದ ಮಂಜಪ್ಪ ಅವರಿಗೆ ಮೂವರು ಮಕ್ಕಳು. ಹಿರಿಯ ಮಗಳು ಸುಮಿತ್ರಾ, ನಾಗರಾಜ್‌ ಹಾಗೂ ಕೊನೆಯವರು ಅರುಣ್‌. ಸುದ್ದಿ ತಿಳಿದು ಮಧ್ಯಾಹ್ನ ವೇಳೆ ಮೃತರ ತಂದೆ ಮಂಜಪ್ಪ ಹಾಗೂ ಸಹೋದರ ಅರುಣ್‌ ಕೊಲ್ಲೂರಿಗೆ ಆಗಮಿಸಿದ್ದು, ಸಂಜೆ ಮಣಿಪಾಲ ಆಸ್ಪತ್ರೆಯ ಶವಾಗಾರಕ್ಕೆ ಮೃತದೇಹವನ್ನು ತಂದಿದ್ದಾರೆ. ಅಲ್ಲಿ ಶವ ಪರೀಕ್ಷೆ ನಡೆಸಿ ರಾತ್ರಿ ಮೃತದೇಹವನ್ನು ಊರಿಗೆ ಕೊಂಡು ಹೋಗಿದ್ದಾರೆ.ಶವಾಗಾರಕ್ಕೆ ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ ್ಮಣ್‌ ಬ. ನಿಂಬರಗಿ ಭೇಟಿ ನೀಡಿದರು.

5 ತಿಂಗಳ ಹಿಂದೆ ಮನೆಗೆ ಹೋಗಿದ್ದರು: 5 ತಿಂಗಳ ಹಿಂದಷ್ಟೇ ಅಣ್ಣ ಬಂದು ಹೋಗಿದ್ದ. ಆಗ ಹುಡುಗಿ ನೋಡುವ ವಿಚಾರದ ಕುರಿತು ಮಾತುಕತೆ ನಡೆದಿತ್ತು. ಆದರೆ ಯಾವುದೇ ನಿಶ್ಚಿತಾರ್ಥ ಆಗಿರಲಿಲ್ಲ. ಅಣ್ಣ ನನಗೆ ಬೇರೊಂದು ಹುಡುಗಿಯೊಂದಿಗೆ ಪ್ರೀತಿ ಇರುವ ಬಗ್ಗೆ ಮನೆಯಲ್ಲಿ ಹೇಳಿಕೊಂಡಿದ್ದ. ಅದಕ್ಕೆ ನಮ್ಮ ಮನೆಯಲ್ಲಿ ಯಾರು ವಿರೋಧ ವ್ಯಕ್ತಪಡಿಸಿರಲಿಲ್ಲ. ಅಲ್ಲದೇ ಅವನಿಗೆ ಯಾವುದೇ ವೈಯಕ್ತಿಕ ಸಮಸ್ಯೆಯೂ ಇರಲಿಲ್ಲ. ಒಮ್ಮೆಲೆ ಈ ರೀತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದಾಗ ಆತಂಕವಾಗಿದೆ ಎಂದು ಮೃತರ ಸಹೋದರ ಅರುಣ್‌ ಅಳಲು ತೋಡಿಕೊಂಡರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)