ಚಾರಣಪ್ರಿಯರ ಸ್ವರ್ಗ ಕೊಸಳ್ಳಿ ಜಲಪಾತ

0
2459

ಬೈಂದೂರು : ದೀಪದ ಸುತ್ತಲೂ ಕತ್ತಲಿರುವಂತೆ ಕೆಲವೊಮ್ಮೆ ನಮ್ಮನ್ನು ನಾವು ಅರಿಯುವುದರಲ್ಲಿ ಎಡವಿರುತ್ತೇವೆ. ಕರ್ನಾಟಕ ರಾಜ್ಯದ ಅಭಿವೃದ್ದಿಯ ಬಗ್ಗೆ ಒಮ್ಮೆ ಕಣ್ಣಾಯಿಸಿದರೆ ಈ ಮಾತು ಅಕ್ಷರಶಃ ನಿಜವೆನ್ನಿಸುತ್ತದೆ. ನಮ್ಮ ರಾಜ್ಯದಲ್ಲಿರುವ ಪ್ರಾಕೃತಿಕ ಸಂಪತ್ತನ್ನು ರಾಜ್ಯದ ಅಭಿವೃದ್ದಿಯಲ್ಲಿ ಎಷ್ಟು ಉಪಯೋಗಿಸಿಕೊಂಡಿದ್ದೇವೆಂದು ಎಂದು ಪ್ರಶ್ನಿಸಿಕೊಂಡರೆ ಒಮ್ಮೆ ತಲೆ ಕೆರೆದುಕೊಳ್ಳಬೇಕಾಗುತ್ತದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಮಲೆನಾಡಿನ ಭಾಗಗಳಲ್ಲಿ ಪ್ರಾಕೃತಿಕವಾಗಿ ಹುಟ್ಟಿಕೊಂಡಿರುವ ಜಲಪಾತಗಳದೆಷ್ಟು ಆದರೆ ಅವುಗಳನ್ನು ಅಭಿವೃದ್ದಿ ಪಡಿಸಿ ಪ್ರವಾಸೋದ್ಯಮದ ಮೂಲಕ ಎಷ್ಟು ಪ್ರವಾಸಿಗರನ್ನು ಸೆಳೆಯಲಾಗುತ್ತಿದೆಯೆಂದು ಕೇಳಿದರೆ ಉತ್ತರ ಸೊನ್ನೆಯೆ. ನಮ್ಮವರಿಗೆ ವಿದೇಶವೆಂದರೆ ಅದೇನೋ ಒಂದು ರೀತಿಯ ಸೆಳೆತ.

ಸಿಂಗಾಪುರ ಪ್ರವಾಸ ಹೋದವರೊಬ್ಬರು ಭಾರತೀಯ ಮೌಲ್ಯದ ಪ್ರಕಾರ ಸುಮಾರು ಐದು ಸಾವಿರದಷ್ಟು ಪ್ರವೇಶ ಶುಲ್ಕ ನೀಡಿ ಅಲ್ಲಿ ಕೃತಕವಾಗಿ ನಿರ್ಮಿಸಲಾದ ಜಲಪಾತವನ್ನು ನೋಡಿಕೊಂಡು ಬಂದು ಬೀಗುತ್ತಿದ್ದರಂತೆ ಆದರೆ ಅವರ ಊರಿನ ಪಕ್ಕದಲ್ಲಿಯೇ ಇರುವ ಪ್ರಾಕೃತಿಕವಾಗಿ ಹರಿಯುತ್ತಿರುವ ಸಮೃದ್ದ ಜಲದ ಮೂಲದತ್ತ ಅವರ ದೃಷ್ಟಿ ಹರಿದಿರಲೇ ಇಲ್ಲ ಎಷ್ಟೆಂದರೂ ದೂರದ ಬೆಟ್ಟ ನುಣ್ಣಗೆ ಕಾಣಿಸುವುದಲ್ಲವೇನು.

ಸರಕಾರವೆಂದರೆ ಅದಕ್ಕೂ ನಮಗೂ ಸಂಬಂಧವೇ ಇಲ್ಲ ಎನ್ನುವ ಮನೋಭಾವ ನಮ್ಮ ಜನರದ್ದು. ಸರ್ಕಾರ ಮಾಡಬೇಕಾದ ಕೆಲಸ ನಾವೇನಾದರೂ ಮಾಡಿಬಿಟ್ಟರೆ ದೊಡ್ಡ ಅಪರಾಧ ಮಾಡಿದಂತೆ ಕಾಣುವವರು ನಾವು. ಆದರೆ ಇತ್ತೀಚೆಗೆ ಯುವಜನತೆ ಕೊಂಚ ಮಟ್ಟಿಗೆ ಜಾಗೃತರಾಗುತ್ತಿದ್ದಾರೆ. ಸರಕಾರಕ್ಕೆ ಸಂಬಂಧ ಪಟ್ಟ ಆಸ್ತಿ, ವಸ್ತುಗಳ ಮೇಲೆ ಸಾರ್ವಜನಿಕರ ಜವಾಬ್ದಾರಿಯೂ ಸರ್ಕಾರದಷ್ಟೇ ಇರುತ್ತದೆಂಬುದನ್ನು ಅರಿಯುತ್ತಿದ್ದಾರೆ. ಸ್ವಚ್ಚತೆಯ ಕಲ್ಪನೆಯೂ ಮೂಡುತ್ತಿದೆ ಎಂಬುದು ಖುಷಿಯ ವಿಚಾರ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಶಿರೂರು ಸಮೀಪದ ಕೊಸಳ್ಳಿ ಜಲಪಾತ ಚಾರಣಕ್ಕೆ ಹೇಳಿ ಮಾಡಿಸಿದ ಪ್ರದೇಶ. ಕಣ್ಣು ಹಾಯಿಸಿದಷ್ಟೂ ದೂರ ಕಾಣುವ ಹಚ್ಚ ಹಸಿರು ಕಣ್ಮನ ಸೆಳೆಯುವುದರಲ್ಲಿ ಎರಡು ಮಾತಿಲ್ಲ. ಜಲಪಾತಕ್ಕೆ ಹೋಗುವಾಗ ದಾರಿಯುದ್ದಕ್ಕೂ ಸಿಗುವ ತೊರೆಗಳು ಮನಕ್ಕೆ ಮುದ ನೀಡುತ್ತವೆ. ಉಡುಪಿಯಿಂದ 80 ಕಿ. ಮೀ. ದೂರದ ಶಿರೂರು ತೂದಳ್ಳಿ ರಸ್ತೆಯಿಂದ 8 ಕಿ. ಮೀ. ಪೂರ್ವಾಭಿಮುಖವಾಗಿ ಸಾಗಿ ಬಳಿಕ 4 ಕಿ. ಮೀ. ಕಾಲ್ನಡಿಗೆಯಲ್ಲಿ ಕಾಡುದಾರಿಯಲ್ಲಿ ಸಾಗಿದಾಗ ಕೊಸಳ್ಳಿ ಜಲಪಾತ ಕಾಣ ಸಿಗುತ್ತದೆ.
ನೂರಾರು ಅಡಿ ಎತ್ತರದಿಂದ ಭೋರ್ಗರೆಯುತ್ತ ಧುಮ್ಮಿಕ್ಕಿವ ಜಲಪಾತ ನೋಡುಗರ ಕಣ್ಣಿಗೆ ಹಬ್ಬವೆ ಸರಿ. ತಾನು ಹರಿಯುವ ಬಗೆಯಿಂದ “ಮಿನಿ ಜೋಗ” ಎಂದೇ ಕರೆಸಿಕೊಳ್ಳುವ ಕೊಸಳ್ಳಿ ಜಲಪಾತಕ್ಕೆ ಅಬ್ಬಿ ಜಲಪಾತವೆಂದೂ ಕರೆಯುವರು.

ಕೊಸಳ್ಳಿ ಜಲಪಾತದಿಂದ ಹರಿಯುವ ನದಿ ಸಾವಿರಾರು ಎಕರೆ ಕೃಷಿಭೂಮಿಗೆ ನೀರಾವರಿ ಸೌಲಭ್ಯವನ್ನೊದಗಿಸಿ ಸಂಕದಗುಂಡಿ ಮೂಲಕ ಅರಬ್ಬಿ ಸಮುದ್ರವನ್ನು ಸೇರುತ್ತದೆ. ವರ್ಷದ 365 ದಿನವೂ ತನ್ನ ಸೊಬಗಿನಿಂದ ಜನರನ್ನು ಸೆಳೆಯುವ ಜಲಪಾತ ಮಳೆಗಾಲದಲ್ಲಂತೂ ಅತ್ಯಾಕರ್ಷಕವಾಗಿರುತ್ತದೆ. ನಡೆದು ಸಾಗುವಾಗ ಆಗಾಗ ಕಾಡು ಪ್ರಾಣಿಗಳ ದರ್ಶನ ಭಾಗ್ಯವೂ ಲಭ್ಯ. ಈ ಬಗೆಯ ಮನಸೆಳೆಯುವ ಜಲಪಾತವೊಂದು ನಮ್ಮೂರಿಗೆ ಸಮೀಪದಲ್ಲಿದೆಯೆಂಬ ಬಗ್ಗೆ ಹೆಮ್ಮೆಯಾದರೂ ಕೂಡಾ ಈ ಜಲಪಾತದ ಸೊಬಗನ್ನು ಅಭಿವೃದ್ದಿ ಪಡಿಸಿ ಜನರನ್ನು ಸೆಳೆಯುವಲ್ಲಿ ಪ್ರವಾಸೋದ್ಯಮ ಸಮರ್ಪಕವಾಗಿ ಉಪಯೋಗಿಸಿಕೊಂಡಿಲ್ಲ ಎಂಬ ವಿಚಾರದಲ್ಲಿ ಖೇದವಿದೆ.