ರಾಷ್ಟ್ರ ರಕ್ಷಣೆಯ ಮಂಚೂಣಿಯಲ್ಲಿರುವ ಪರಾಕ್ರಮೀ ಸಿಖ್ಖರು : ಬೈಂದೂರು ಚಂದ್ರಶೇಖರ ನಾವಡ

0
1793

ಹೆಚ್ಚಿನ ಓದುಗರು ಈ ಸುದ್ದಿಯನ್ನು ಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (2) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಏಕ್ ಖಾಲ್ಸಾ ಸವಾ ಲಾಖ್ ಬರಾಬರ್ – ಅರ್ಥಾತ್ ಓರ್ವ ಸಿಖ್ ಯೋಧ ಒಂದೂವರೆ ಲಕ್ಷ ಸಿಪಾಹಿಗಳಿಗೆ ಸಮಾನ ಎನ್ನುವ ಮಾತನ್ನು ವೀರ ಸಿಖ್ಖರು ಅನೇಕ ಬಾರಿ ದಿಟವಾಗಿ ತೋರಿಸಿದ್ದಾರೆ. ಗೂರ್ಖಾಗಳಂತೆ ರಣರಂಗದಲ್ಲಿ ಕೆಚ್ಚೆದೆಯ ಕಲಿಗಳಾಗಿ ಹೋರಾಡುವಲ್ಲಿ ಹೆಸರುವಾಸಿಯಾಗಿರುವ ಸಿಖ್ಖರು ಭಾರತೀಯ ಸೇನೆಯ ಗೌರವಶಾಲಿ ಇತಿಹಾಸದಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದಿದ್ದಾರೆ.  1897 ರಲ್ಲಿ ಅಫಘಾನಿಸ್ಥಾನದ ಸಾರಾಗಢಿಯಲ್ಲಿ ನಡೆದ ಕದನದಲ್ಲಿ ಬ್ರಿಟಿಷ ಸೇನೆಯ ಸಿಖ್ ರೆಜಿಮೆಂಟಿನ ನಾಲ್ಕನೇ ಬಟಾಲಿಯನ್ನಿನ 21 ಪರಾಕ್ರಮಿ ಸಿಖ್ ಯೋಧರು 10,000 ಸಾವಿರ ಅಪ್ಘನ್ ಸೈನಿಕರನ್ನು ಎದುರಿಸಿ ವೀರಗತಿ ಪಡೆದಿದ್ದರು. ವಿಶ್ವ ಯುದ್ದ ಇತಿಹಾಸದಲ್ಲೇ ಅಪರೂಪವೆನಿಸುವ ಸಾರಾಗಢಿ ಯುದ್ದದ ಧೀರ ಸಿಖ್ ಯೋಧರ ಸಾಹಸಗಾಥೆಯನ್ನು ಜಗತ್ತಿನಾದ್ಯಂತ ಸೈನ್ಯ ತರಬೇತಿಯಲ್ಲಿರುವ ಕ್ಯಾಡೆಟ್ ಗಳಿಗೆ ಓದಲು ಹೇಳಲಾಗುತ್ತದೆ. ಸಾರಾಗಡಿ ಯುದ್ದದಲ್ಲಿ ಕೊನೆಯವರೆಗೆ ಹೋರಾಡಿದ 19 ವರ್ಷದ   ಗುರಮುಖ್ ಸಿಂಗ್ ತನ್ನ ಅಂತಿಮ ಉಸಿರಿರುವವರೆಗೆ ಹೋರಾಡುತ್ತಾ ‘ಜೋ ಬೋಲೆ ಸೋನಿಹಾಲ್, ಸತ್ ಶ್ರೀ ಅಕಾಲ್’ ಎಂದು ವೀರಮರಣವನ್ನಪ್ಪುವ ಮೊದಲು 20 ಶತ್ರುಗಳನ್ನು ಧರೆಗುರುಳಿಸಿ ಮೆರೆದ ವೀರಾವೇಶ ಇಂದಿಗೂ ಸಿಖ್ ಯೋಧರಿಗೆ ಸ್ಪೂರ್ತಿ ನೀಡುತ್ತದೆ.

ಸನಾತನ ಧರ್ಮದ ರೀತಿ ನೀತಿಗಳಲ್ಲಿ ಸುಧಾರಣೆಯ ಅಗತ್ಯದ ದೃಷ್ಟಿಯನ್ನಿಟ್ಟುಕೊಂಡು ಗುರು ನಾನಕರು ಶಾಂತಿ ಸಹಬಾಳ್ವೆಯ ಆಧಾರಿತ ಸ್ಥಾಪಿತ ಪಂಥಕ್ಕೂ 10ನೇ ಧರ್ಮಗುರು ಗುರುಗೋವಿಂದ ಸಿಂಗ್ ಅವರ ನಂತರ ಸಿಖ್ ಧರ್ಮ ಪಡೆದುಕೊಂಡ ಸ್ವರೂಪಕ್ಕೂ ಅಜಗಜಾಂತರವಿದೆ. ಮೊಘಲರ ದಬ್ಬಾಳಿಕೆ ಮತ್ತು ಅತ್ಯಾಚಾರಗಳಿಂದ ನೊಂದಿದ್ದ ಜನತೆಗೆ ಮಾರ್ಗದರ್ಶನ ನೀಡುವ ಸಲುವಾಗಿ ಗುರು ಗೋವಿಂದ ಸಿಂಗ್ ಅವರು ಖಾಲ್ಸಾ ಪಂಥವನ್ನು ಸ್ಥಾಪಿಸಿದರು. ತಮ್ಮ ಅನುಯಾಯಿಗಳಿಗೆ ಮೊಘಲ್ ಶಾಸಕರ ಅನ್ಯಾಯ-ಅತ್ಯಾಚಾರದ ವಿರುದ್ದ ಹೋರಾಢಲು ಬೇಕಾದ ಧೀ ಶಕ್ತಿ ನೀಡುವ ಕೆಲಸ ಮಾಡಿದರು. ಸಿಖ್ಖರನ್ನುಅತ್ಯಂತ ಸಾಹಸೀ, ಆತ್ಮ ವಿಶ್ವಾಸೀ ಪಂಥವಾಗಿಸಿ ಸೈನ್ಯ ಶಕ್ತಿಯಾಗಿಸುವಲ್ಲಿ ಗುರುಗೋವಿಂದ್ ಸಿಂಗ್ ಅವರ ಪಾತ್ರ ಪ್ರಮುಖವಾದದ್ದು. ಅವರು ಸಿಖ್ ಪಂಥವನ್ನು ಮಿಲಿಟರೀಕರಣಗೊಳಿಸಿದರು ಎಂದರೆ ತಪ್ಪಾಗದು.  ಸಿಖ್ಖರಿಗೆ ಪ್ರತ್ಯೇಕ ಅಸ್ತಿತ್ವ ನೀಡಲು ಕೇಶ, ಗಡ್ದ ಬೆಳೆಸುವಂತೆ, ಪಗಡಿ(ಪೇಟಾ) ಧರಿಸುವಂತೆ, ಖಡ್ಗ (ಕೃಪಾಣ)ಮತ್ತು ಕೈಯ್ಯಲ್ಲಿ ಖಡಾ ಧರಿಸುವಂತೆ ಆದೇಶಿಸಿದರು. ಎಲ್ಲಾ ತರಹದ ಜಾತಿ-ಮತಗಳ ಭೇಧ ಬಾವವನ್ನು ತೊಡೆದು ಹಾಕುವಂತೆ ಹೇಳಿದರು. ಪ್ರತಿಯೊಬ್ಬರೂ ತಮ್ಮ ಹೆಸರ ಜತೆಯಲ್ಲಿ ಶೌರ್ಯಕ್ಕೆ ಹೆಸರಾದ ಸಿಂಹ (ಸಿಂಗ್) ಸೇರಿಸಿಕೊಳ್ಳುವಂತೆ ಆದೇಶಿಸಿದರು. ಗುರುಗೋವಿಂದ್ ಸಿಂಗ್ ಅವರ ನೇತ್ರತ್ವದಲ್ಲಿ ಸಿಖ್ ಧರ್ಮ ಹೊಸ ಸ್ವರೂಪವನ್ನೇ ಪಡೆದುಕೊಂಡಿತು.

          ಮೊಘಲರ ಬಲವಂತದ ಮತಾಂತರ ಸಹಿತ ಎಲ್ಲಾ ತರದ ಅತ್ಯಾಚಾರಗಳ ವಿರುದ್ಧ ಸಿಡಿದೇಳುತ್ತಾ ಹೋರಾಡುತ್ತಾ ಬಂದ ಸಿಕ್ಖರ ಧರ್ಮಗುರುಗಳು ಸಹಾ  ತ್ಯಾಗ ಬಲಿದಾನಗಳನ್ನು ಮಾಡಿ ಧರ್ಮಾನುಯಾಯಿಗಳಿಗೆ ಸ್ಫೂರ್ತಿಯನ್ನು ನೀಡುತ್ತಲೇ ಬಂದರು. ಔರಂಗಜೇಬನಂತೂ ಸಂಪೂರ್ಣ ಹಿಂದುಸ್ಥಾನವನ್ನೇ ಇಸ್ಲಾಂ ಗೆ ಮತಾಂತರ ಮಾಡುವ ಪಣ ತೊಟ್ಟಿದ್ದ. ಮೊಘಲರಿಂದ ದೌರ್ಜನ್ಯಕ್ಕೊಳಗಾದ ಕಾಶ್ಮೀರದ ಹಿಂದೂ ಪಂಡಿತರು ಸಿಖ್ಖರ 9ನೇ  ಗುರುವಾದ ಗುರು ತೇಗಬಹಾದುರ್ ಅವರ ಮುಂದೆ ತಮ್ಮ ದು:ಖ ತೋಡಿಕೊಂಡರು. ಗುರು ತೇಗ ಬಹಾದೂರ್ ಅವರು ಮೊಘಲ್ ಬಾದಶಹರಿಗೆ ತಾನು ದಿಲ್ಲಿಗೆ ಬರುವುದಾಗಿಯೂ ಸಾದ್ಯವಾದರೆ ತನ್ನನ್ನು ಮತಾಂತರಗೊಳಿಸು,   ವಿಫಲವಾದಲ್ಲಿ ಇನ್ನು ಮುಂದೆ ಬಲವಂತದ ಮತಾಂತರವನ್ನು ನಿಲ್ಲಿಸುವಂತೆ ಮನವಿ ಮಾಡಿದರು. ಗುರು ತೇಗ ಬಹಾದುರರನ್ನು ನಿರಂತರ 5 ದಿನಗಳವರೆಗೆ ಕಾದ ಬಾಣಲೆಯ ಮೇಲೆ ಕೂರಿಸುವ, ಬಿಸಿ ಎಣ್ಣೆ ಮೈಮೇಲೆ ಸುರಿವ, ಕೊತಕೊತ ಕುದಿಯುವ ಬಿಸಿ ನೀರಿಗೆ ನೂಕುವುದೇ ಮುಂತಾದ ಚಿತ್ರ ಹಿಂಸೆಯನ್ನು ಮೊಘಲರು ನೀಡಿದರು. ಇದ್ಯಾವುದರಿಂದಲೂ ಕೊಂಚವೂ ವಿಚಲಿತರಾಗದ, ನೋವಿನಿಂದ ನರಳದ ಗುರುವಿನ ಧೃಢ ಇಚ್ಚಾಶಕ್ತಿಯೆದುರು ಸೋತ ಔರಂಗಜೇಬ ಅವರ ಶಿರಚ್ಚೇದನ ಮಾಡಲು ಆದೇಶಿಸುತ್ತಾನೆ. ಈ ರೀತಿಯಲ್ಲಿ ಹಿಂದುಗಳ ರಕ್ಷಣೆಗಾಗಿ ಗುರು ತೇಗಬಹಾದುರರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು.

ಈ ಘಟನೆಯು ಸಿಖ್ಖರ ಧಾರ್ಮಿಕ ಸ್ವರೂಪವನ್ನೇ ಬದಲಾಯಿಸಿತು. ಮುಂದೆ ಬಂದ 10ನೇ ಗುರು ಗುರು ಗೋವಿಂದ ಸಿಂಗರು ಖಾಲ್ಸಾ ಪಂಥವನ್ನು ಸ್ಥಾಪಿಸಿ ಸಿಕ್ಖರನ್ನು ಮಹಾನ್ ಯೋಧರನ್ನಾಗಿಸಿ ಸ್ವತಹ ಅನೇಕ ಯುದ್ದಗಳಲ್ಲಿ ಭಾಗವಹಿಸಿ ಧರ್ಮ ರಕ್ಷಣೆಯ ಮತ್ತು ಧಾರ್ಮಿಕ ಸ್ವಾತಂತ್ರ್ಯ ರಕ್ಷಣೆಗಾಗಿ ಹೋರಾಡಿದರು. ನಿಜಾರ್ಥದಲ್ಲಿ ಅವರು ಮಾನವ ಹಕ್ಕುಗಳ ಹೋರಾಟಗಾರರಾಗಿದ್ದರು. ಅವರು ರಾಜ್ಯಕ್ಕಾಗಿ, ಧನಕ್ಕಾಗಿ ಹೋರಾಡಲಿಲ್ಲ, ಬದಲಾಗಿ ಮೊಹಮದ ಘಜನಿ ಯಿಂದ ಮೊದಲ್ಗೊಂಡು  ಶತಮಾನಗಳಿಂದ ಭಾರತೀಯರ ಮೇಲೆ ವಿದೇಶೀ ಆಕ್ರಮಣಕಾರರ ನಿರಂತರ ಆಕ್ರಮಣವನ್ನು ಧಾರ್ಮಿಕ, ತಪೋಶಕ್ತಿಯ ಜತೆ ಖಡ್ಗ ಹಿಡಿದು ಹೋರಾಡುವ ನೇತ್ರತ್ವ ನೀಡಿ ಜನರಲ್ಲಿ ಅನ್ಯಾಯದ, ಅತ್ಯಾಚಾರದ ವಿರುದ್ದ ಹೋರಾಡುವ ಕೆಚ್ಚು ಮೂಡಿಸಿದರು. ಆತ್ಮ ವಿಶ್ವಾಸ ಹೆಚ್ಚಿಸಿದರು, ಎಗ್ಗಿಲ್ಲದೇ ನಡೆಯುತ್ತಿದ್ದ ಮೊಘಲರ ಅತ್ಯಾಚಾರಕ್ಕೆ ಅಂಕುಶ ಹಾಕಿದರು. ಸಿಖ್ಖರನ್ನು ಹೆದರಿಕೆಯಿಲ್ಲದೇ ಹೋರಾಡುವ ಸಾಹಸೀ ಯೋಧರಾಗಿಸಿದರು.

ಅಪ್ಘಾನಿಸ್ಥಾನದಿಂದ ಭಾರತದ ಮೇಲೆ ನಿರಂತರ ದಂಡೆತ್ತಿ ಬಂದ ನಾದಿರ ಶಾಹ ಮತ್ತು ಅಹ್ಮದ್ ಶಾ ಅಬ್ದಾಲಿಯಂತಹ ಆಕ್ರಮಣ ಕಾರರನ್ನು ಎದುರಿಸುವ ಮೂಲಕ ಭಾರತವನ್ನು ಈ ಧಾಳಿಕೋರರಿಂದ ರಕ್ಷಿಸುವಲ್ಲಿ ಸಿಖ್ಖರ ಪಾತ್ರ ಪ್ರಶಂಸನೀಯವಾದದ್ದು. 1748 ಮತ್ತು 1765 ರ ನಡುವೆ ಅಹ್ಮದ್ ಶಾ ಅಬ್ದಾಲಿ ಭಾರತದ ಮೆಲೆ 9 ಬಾರಿ ಆಕ್ರಮಣ ಮಾಡಿದ. ಈ ದಾಳಿಕೋರರ ವಿರುದ್ದ ಸಂಘಟಿತರಾದ ಸಿಕ್ಖರು ಮಧ್ಯಾಹ್ನದ ಬಿರು ಬಿಸಿಲಿನ ಝಳದಲ್ಲಿ ಮತ್ತು 12 ಗಂಟೆ ನಡು ರಾತ್ರಿಯ ಹೊತ್ತಿನಲ್ಲಿ ಅಚಾನಕ್ ಆಕ್ರಮಣಕಾರರ ಮೇಲೆ ದಾಳಿ ನಡೆಸಿ ಅವರ ವಶದಲ್ಲಿದ್ದ ಗುಲಾಮರನ್ನು, ಹೆಂಗಸರನ್ನು ,ಭಾರತೀಯ ಸಂಪತ್ತನ್ನು    ವಶ ಮಾಡಿಕೊಳ್ಳುತ್ತಿದ್ದರು. ಹೆಂಗಸರನ್ನು ಪುನಹ ಸುರಕ್ಷಿತವಾಗಿ ದೆಹಲಿ ತಲುಪಿಸುತ್ತಿದ್ದರು. ಸಣ್ಣ ಗಾತ್ರದ ಗುಂಪುಗಳಲ್ಲಿ ಇಂತಹ ಹಠಾತ್ ಗೆರಿಲ್ಲಾ ಧಾಳಿ ಮಾಡಿ ಜನರನ್ನು ರಕ್ಷಿಸುತ್ತಿದ್ದ ಸಿಕ್ಖರಿಗೆ ವಿದೇಶೀ ಆಕ್ರಮಣ ಕಾರರು ನಡುಗುವಂತಾಗಿತ್ತು. ಮಧ್ಯಾಹ್ನ ಮತ್ತು ರಾತ್ರಿ 12 ಗಂಟೆಯ ವೇಳೆ ನಡೆಯುತ್ತಿದ್ದ ಈ ಧಾಳಿಗಳಿಂದಾಗಿ ಸಿಖ್ಖರು ಈ ಹೊತ್ತಿನಲ್ಲಿ ಆವೇಶಕ್ಕೊಳಗಾಗುತ್ತಾರೆ ಎನ್ನುವ ಅರ್ಥದಲ್ಲಿ ಇಂದಿಗೂ  ‘ಸರ್ದಾರಜೀ ಕಾ 12 ಬಜ್ ಗಯಾ ’ ಎಂದು ಸಿಕ್ಖರನ್ನು ಕಿಚಾಯಿಸಲಾಗುತ್ತದೆ.

ಬ್ರಿಟಿಶರ ವಿರುದ್ದ ಪ್ರಪ್ರಥಮವಾಗಿ ತೊಡೆ ತಟ್ಟಿದ ಮತ್ತು ಅಂತಿಮವಾಗಿ ಬ್ರಿಟಿಷ ಸಾಮ್ರಾಜ್ಯಕ್ಕೆ ಶರಣಾದ ಹೆಗ್ಗಳಿಕೆಯ ಸ್ವಾಭಿಮಾನಿ ಸಿಕ್ಖರು ಮಹಾತ್ಮಾ ಗಾಂಧಿಯವರು ವಿದೇಶೀ ವಸ್ತು ಬಹಿಷ್ಕಾರಕ್ಕೆ ಕರೆ ನೀಡುವ ಮೊದಲೇ 1863 ರಲ್ಲಿ ವಿದೇಶೀ ಸಾಮಾಗ್ರಿಗಳನ್ನು ಬಹಿಷ್ಕರಿಸಿದ್ದರು.  ದೇಶದ 2% ಜನಸಂಖ್ಯೆಯ ಸಿಕ್ಖರು  ಸುಭಾಶಚಂದ್ರ ಬೋಸರ ಆಜಾದ್ ಹಿಂದ್ ಫೌಜ್ ನ 42000 ಸೈನಿಕರಲ್ಲಿ ಸುಮಾರು 28000 ದಷ್ಟಿದ್ದರು (67%). ಸ್ವಾತಂತ್ರ್ಯೋತ್ತರ ಭಾರತದ ಚೀನಾ ಮತ್ತು ಪಾಕಿಸ್ಥಾನದೊಂದಿಗಿನ ಯುದ್ದದಲ್ಲಿ ಸಿಕ್ಖರ ಕೊಡುಗೆಯನ್ನು ಮರೆಯುವಂತಿಲ್ಲ. ಇತ್ತೀಚೆಗೆ ಭಾರತೀಯ ಸೇನೆ ಸೇರಲು  ಸಿಕ್ಖರ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರುತ್ತಿಲ್ಲ ಎನ್ನುವುದು ವಾಸ್ತವವಾಗಿಯೂ ಕಳವಳಕಾರಿ ಸಂಗತಿ. ಸೇನೆಯಲ್ಲಿ ಎಲ್ಲಾ ಪ್ರಾಂತ್ಯಗಳ ಸಮಾನ ಪ್ರಾತಿನಿಧ್ಯ ಇರಬೇಕು ಎನ್ನುವ ವಾದ ಸರಿಯಾದದ್ದೇ ಆದರೂ ಸಿಖ್ಖರ ಅಸಾಧಾರಣ ಸೈನ್ಯ ಪರಂಪರೆಯ ಹಿನ್ನೆಲೆಯಲ್ಲಿ ಅವರಿಗೆ ವಿಶೇಷ ಪ್ರಾತಿನಿಧ್ಯ ದೇಶ ಹಿತದೃಷ್ಟಿಯಿಂದ ಅಗತ್ಯ. ಸಿಖ್ಖರ ಯುದ್ದ ಘರ್ಜನೆ ‘ಜೋ ಬೋಲೆ ಸೋನಿಹಾಲ್, ಸತ್ ಶ್ರೀ ಅಕಾಲ್’ ಶತ್ರುಗಳ ಎದೆ ನಡುಗಿಸುತ್ತದೆ. ಇಂದಿಗೂ ಗಡಿಯಲ್ಲಿ ಸಿಖ್ ರೆಜಿಮೆಂಟ್ ಗಳು ಬರುತ್ತಿವೆ ಎನ್ನುವ ಸುಳಿವು ಸಿಕ್ಕೊಡನೆ ಪಾಕಿಸ್ಥಾನೀಯರ ಎದೆ ನಡುಗುತ್ತದೆ. ಭಾರತ ಮಾತೆಯ ಹೆಮ್ಮೆಯ ಸಿಖ್ ಯೋಧರಿಗಿರಲಿ ನಿಮ್ಮ ಸೆಲ್ಯೂಟ್.

ಬೈಂದೂರು ಚಂದ್ರಶೇಖರ ನಾವಡ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (2) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)