ಮಂಗಳೂರು ಮಹಿಳೆಯ ಮೊಬೈಲ್ ಕ್ಯಾಂಟೀನ್‍ಗೆ, ಮಹೀಂದ್ರ ಸಂಸ್ಥೆ ಮಾಲೀಕರ ಹೂಡಿಕೆ!

0
984

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಸುಂದರ ಬದುಕಲ್ಲಿ ಸಂಕಷ್ಟದ ಸುಂಟರಗಾಳಿ ಬಂದರೂ ಎದುರಿಸಿ ಸ್ವಾವಲಂಬನೆಗಾಗಿ ಮೊಬೈಲ್ ಕ್ಯಾಂಟೀನ್ ಮಾಡಿದ ಮಹಿಳೆಯ ಸಾಧನೆ ಮೆಚ್ಚಿದ ಮಹೀಂದ್ರ ಎಂಡ್ ಮಹೀಂದ್ರ ಸಂಸ್ಥೆ ಮಾಲೀಕರು ಸಣ್ಣ ಉದ್ಯಮದಲ್ಲಿ ಹೂಡಿಕೆ ಘೋಷಣೆ ಮಾಡಿದ್ದಾರೆ.

ಮಂಗಳೂರಿನ ಮಣ್ಣುಗುಡ್ಡೆಯಲ್ಲಿ ಪಿಕಪ್ ವಾಹನದಲ್ಲಿ ಹಳ್ಳಿಮನೆ ರೊಟ್ಟೀಸ್ ಎಂಬ ಮೊಬೈಲ್ ಕ್ಯಾಂಟೀನ್ ಮಾಡಿ ಉತ್ತರಕರ್ನಾಟಕದ ತಿನಿಸುಗಳನ್ನು ಮಾಡಿ ಜನಪ್ರಿಯವಾಗಿರುವ ಶಿಲ್ಪಾ ಅವರೇ ಮಹೀಂದ್ರಾ ಸಂಸ್ಥೆಯ ಮಾಲೀಕರ ಮೆಚ್ಚುಗೆ ಪಾತ್ರರಾದ ಸಾಧಕಿ.

ಎಸ್ಸೆಸ್ಸೆಲ್ಸಿಯೂ ಪಾಸಾಗದ ಹಾಸನದ ಶಿಲ್ಪಾ, ರಾಜಶೇಖರ್ ಎಂಬುವರ ಜತೆ ಮದುವೆಯಾಗಿ 2015ರಲ್ಲಿ ಮಂಗಳೂರಿನ ಗಂಡನ ಮನೆಗೆ ಬಂದಿದ್ದರು. ಗಂಡ ಏಕಾಏಕಿ ಕೈಬಿಟ್ಟು ಬೇರೆಡೆ ತೆರಳಿದಾಗ ದಾರಿ ಕಾಣದೆ ಬದುಕು ಸಾಗಿಸಲು ಅಂತಿಮವಾಗಿ  ಮೊಬೈಲ್ ಕ್ಯಾಂಟೀನ್ ಶುರು ಮಾಡಿದ್ದರು. ಮಣ್ಣಗುಡ್ಡೆಯಲ್ಲಿ  ಈಗ ಶಿಲ್ಪಾರ ಹಳ್ಳಿ ಮನೆ ರೊಟ್ಟಿಸ್’ ಈಗ ಬಹಳ ಫೇಮಸ್.

1 ಲಕ್ಷ ರು.ಠೇವಣಿ ಮತ್ತೆ ರೆಡಿ : ಗಂಡ ಬಿಟ್ಟು ಹೋದರು. ಆಗ ನಾನು ಒಬ್ಬಂಟಿಯಾಗಿದ್ದೆ. ಕಷ್ಟಕಾಲದಲ್ಲಿ ನನ್ನ ಸಹೋದರ ಜತೆಗಿದ್ದ. ವಯೋವೃದ್ಧ ತಂದೆ ತಾಯಿ ಇದ್ದಾರೆ. ಒಂದು ಹಂತದಲ್ಲಿ ಒಂದು ಹೊತ್ತಿಗೆ ಊಟ ಕೂಡಾ ಇರಲಿಲ್ಲ. ಆಗ ನಾನು ಕ್ಯಾಂಟೀನ್ ಮಾಡುವ ಮನಸ್ಸು ಮಾಡಿದೆ. ನನ್ನ ಮಗನ ಭವಿಷ್ಯಕ್ಕೆ ಅಂಥ ಉಳಿತಾಯ ಮಾಡಿ ಠೇವಣಿ ಇಟ್ಟ  1 ಲಕ್ಷ ರು. ಮೊಬಲ್ ಕ್ಯಾಂಟೀನ್ ಆರಂಭಿಸಲು ತೆಗೆದೆ.

ಈಗ 7 ನೇತರಗತಿ ಓದುತ್ತಿದ್ದಾನೆ. ಎರಡುವರೆ ವರ್ಷದಲ್ಲಿ ನಾನು ಮಗನ ಹೆಸರಲ್ಲಿ 1 ಲಕ್ಷ ರು. ಠೇವಣಿ ಮತ್ತೆ ಇಟ್ಟಿದ್ದೇನೆ ಎನ್ನುತ್ತಾರೆ ಶಿಲ್ಪಾ.ಇವರ ಯಶೋಗಾಥೆ ಸುದ್ದಿ ಅಂತರ್ಜಾಲದ ಮೂಲಕ ತಿಳಿದ  ಮಹೀಂದ್ರಾ ಕಂಪನಿಯ ಮಾಲಕ ಆನಂದ್ ಮಹೀಂದ್ರಾ ಕೊಡುಗೆ ಘೋಷಣೆ” ಮಾಡಿದ್ದಾರೆ.

“ಉದ್ಯಮ ರಂಗದ ಅದ್ಭುತ ಕಥೆಯಿದು. ಬೊಲೆರೊ ಕೂಡ ಈ ಕಥೆಯಲ್ಲಿ ಸಣ್ಣ ಪಾತ್ರ ವಹಿಸಿದ್ದರಿಂದ ನಾನು ಸಂತೋಷಗೊಂಡಿದ್ದೇನೆ. ಅವರು ಇನ್ನೊಂದು ಮೊಬೈಲ್ ಕ್ಯಾಂಟೀನ್ ತೆರೆಯಲು ಆಲೋಚಿಸುತ್ತಿದ್ದರೆ ಬೊಲೆರೂ ವಾಹನವೊಂದನ್ನು ನೀಡುವ ಮೂಲಕ ನಾನು ವೈಯಕ್ತಿಕವಾಗಿ ಅವರ ಉದ್ದಿಮೆಯಲ್ಲಿ ಹೂಡಿಕೆ ಮಾಡುತ್ತೇನೆ” ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ. ಆನಂದ್ ಮಹೀಂದ್ರಾರ ಪ್ರತಿಕ್ರಿಯೆಗೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ.

ಅಷ್ಟು ದೊಡ್ಡ ಉದ್ಯಮಿ ಸಿಕ್ಕಾಪಟ್ಟೆ ಬ್ಯುಸಿ ಇದ್ದರೂ ನಮ್ಮಂತಹ ಸಾಮಾನ್ಯರ ಸುದ್ದಿ ಕೇಳಿ ಅದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು ಮಾತ್ರವಲ್ಲ, ಬೊಲೆರೋ ವಾಹನ ಕೂಡಾ ನೀಡುವುದಾಗಿ ಟ್ವಿಟ್ ಮಾಡಿರುವುದು ತಿಳಿಯಿತು. ಆದರೆ ಅವರ ಕಡೆಯಿಂದ ಕರೆ ಬಂದಿಲ್ಲ. ಟ್ವೀಟ್ ಮಾಡಿರೋದು ಜನರಿಂದ ಗೊತ್ತಾಯಿತು. ಅವರು ಬೊಲೆರೋ ವಾಹನ ನೀಡಿದರೆ ಇನ್ನೊಂದು ಕಡೆಯೂ ಬೇರೆ ತಿಂಡಿಗಳನ್ನು ಮಾಡಿ ಕ್ಯಾಂಟೀನ್ ನಡೆಸುತ್ತೇನೆ” ಎಂದು ಶಿಲ್ಪಾವಿಶ್ವವಾಣಿಗೆ ಪ್ರತಿಕ್ರಿಯಿಸಿದ್ದಾರೆ.

ಲೇಖನ- ಜಿತೇಂದ್ರ ಕುಂದೇಶ್ವರ

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)