ಕರಾವಳಿಯಲ್ಲಿ ರಾಜಕೀಯ ರಕ್ತಕಣ್ಣೀರು: “ವರ್ಷ” ಧಾರೆ!

0
892

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಆರದ ಅವಮಾನ, ಉರಿಯುತ್ತಿದೆ ಸೇಡು :ಪೂಜಾರಿ, ರೈ ಕಣ್ಣೀರು 

ಕರಾವಳಿ ತೀರದದಲ್ಲಿ ಈ ಬಾರಿ ರಾಜಕೀಯ, ಧಾರ್ಮಿಕ ಸಂಚಿಗೆ  ಅನೇಕ ಹೆಣಗಳು ಬಿದ್ದವು. ಕೊಲೆಯಾದಾಗ ಕಣ್ಣೀರು ಮಿಡಿಯುವ ಜನರು ಮತ್ತೆ  ಕಣ್ಣೀರು ಬರುವುದು ಮತ್ತೊಂದು ಹೆಣ ಬಿದ್ದಾಗಲೇ.

ಇನ್ನು ಎತ್ತಿನಹೊಳೆ ಜಾರಿಯಾದರೆ ಕರಾವಳಿ ಜನರಿಗೆ ಕುಡಿಯಲು ನೀರು ಸಿಗುವುದಿಲ್ಲ. ಬಡವರ ಹೊಟ್ಟೆಗೆ ತಣ್ಣೀರ ಬಟ್ಟೆಯೂ ಸಿಗುವುದಿಲ್ಲ ಎನ್ನುವ ಕಾರಣಕ್ಕೆ  ಎತ್ತಿನಹೊಳೆ ಯೋಜನೆ ವಿರೋಧಿಸಿ ಉಗ್ರ ಪ್ರತಿಭಟನೆ ನಡೆಯಿತು. ಪ್ರತ್ಯೇಕ ತುಳು ರಾಜ್ಯಕ್ಕೆ ಒತ್ತಡ ಹಾಕುವುದಾಗಿಯೂ ಎಚ್ಚರಿಕೆ ನೀಡಿದರೂ ಪರಿಸರ ಪ್ರೇಮಿಗಳ ಕಣ್ಣೀರಿಗೆ ಬೆಲೆಯೇ ಸಿಗಲಿಲ್ಲ.

ಒಂದು ವರ್ಷದಲ್ಲಿ ನೇತ್ರಾವತಿ ನದಿಯಲ್ಲಿ ಅದೆಷ್ಟೋ ನೀರು ಹರಿದು ಹೋಗಿವೆ. ಎತ್ತಿನಹೊಳೆ ಯೋಜನೆಯಲ್ಲಿಯೂ ಕೋಟಿಗಟ್ಟಲೆ ಹಣ ಹರಿದು ಹೋಗಿದೆ. ಗುತ್ತಿಗೆದಾರನ ಜೇಬಿಗೋ, ರಾಜಕಾರಣಿಯ ಜೇಬಿಗೋ ಗೊತ್ತಿಲ್ಲ. “ಮುಂದೆಯೂ ನೇತ್ರಾವತಿಯಲ್ಲಿ ನೀರು ಹರಿಯಲಿದೆ. ಕೋಲಾರ, ಚಿಕ್ಕಬಳ್ಳಾಪುರಕ್ಕೆ ನೀರು ಹೋಗುವುದಿಲ್ಲ. ಇದು ಹಣ ಲೂಟಿಗೆ ಮಾಡಿದ ಯೋಜನೆ” ಎಂದು ಜೆಡಿಎಸ್‍ನ ಕುಮಾರಸ್ವಾಮಿ ವಿಶ್ಲೇಷಿಸಿದ್ದಾರೆ. ಕಡೇ ಪಕ್ಷ ಹೀಗಾದರೂ ಆಗಲಿ, *ನೇತ್ರಾವತಿ ನದಿ ಉಳಿಯಲಿ. ಕರಾವಳಿಯಲ್ಲಿ ಬರಗಾಲ ಬಾರದಿರಲಿ. ನೇತ್ರಾವತಿ ಬತ್ತದಿರಲಿ, ಉತ್ತರಕರ್ನಾಟಕ, ಕೋಲಾರ, ಚಿಕ್ಕಬಳ್ಳಾಪುರ ಜನರಂತೆ ಕರಾವಳಿ ಜನರ ಕಣ್ಣೀರ ಕೋಡಿ ಮುಂದೆ ಹರಿಯದಿರಲಿ. *

ಈ ಕಣ್ಣೀರಿಗಿಂತ ಹೆಚ್ಚು ಚರ್ಚೆಯಾಗಿರುವುದು ರಾಜಕೀಯ ನಾಯಕರ ಕಣ್ಣೀರು. ವರ್ಷಾಂತ್ಯದಲ್ಲಿ ಒಂದು ಕಾಲದ ದೇಶದ ಪ್ರಭಾವಿ ನಾಯಕ ಜನಾರ್ದನ ಪೂಜಾರಿ ನಿಸ್ಸಹಾಕರಂತೆ ವೇದಿಕೆಯಲ್ಲಿ ಕಣ್ಣೀರು ಹಾಕಿದ್ದಾರೆ. ಇದಕ್ಕೆ ಪ್ರತಿಯಾಗಿ ಬಂಟ್ವಾಳದಲ್ಲಿ ರಮಾನಾಥ ರೈ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ನಾನು ಪೂಜಾರಿಗೆ ನಿಂದಿಸಿಲ್ಲ, ದೇವರು ನೋಡಿಕೊಳ್ಳುತ್ತಾನೆ ಎಂದು ಕಣ್ಣೀರು ಹಾಕಿದ್ದಾರೆ. ಈ ಕಣ್ಣೀರಿನ ಕತೆ ಮುಂದೆ ನಡೆಯುವ ರಾಜಕೀಯ ಅನಾಹುತಕ್ಕೆ ಮುನ್ಸೂಚನೆಯೇ ಎಂಬ ಆತಂಕ ಕರಾವಳಿಯಲ್ಲಿ ಕಾಣುತ್ತಿದೆ.

ಜನಾರ್ದನ ಪೂಜಾರಿ ಕಣ್ಣೀರು ರಾಜಕೀಯ ಪ್ರವಾಹವಾಗಿ ಪರಿವರ್ತನೆಯಾದರೆ ಕಣ್ಣೀರಲ್ಲಿ ಕರಾವಳಿಯ ಕಾಂಗ್ರೆಸ್ ನಾಯಕರು ಕೊಚ್ಚಿ ಹೋಗಲಿದ್ದಾರೆಯೇ ? ಎಂಬ ಸಂಶಯ ಕಾಡತೊಡಗಿದೆ.

ಒಂದು ಕಾಲದಲ್ಲಿ ಕರಾವಳಿಯಲ್ಲಿ ಜನಾರ್ದನ ಪೂಜಾರಿ ಕೈ ತೋರಿಸಿದಲ್ಲಿಗೆ ಕಣ್ಣು ಮುಚ್ಚಿ ಹೋಗುವ ಬೆಂಬಲಿಗರಿದ್ದರು. ಪೂಜಾರಿ ಹೇಳಿದ್ದೇ ವೇದವಾಕ್ಯವಾಗಿತ್ತು. ಬಿಲ್ಲವರಂತೂ ಪೂಜಾರಿಯನ್ನು ದೇವರಂತೆ ಆರಾಧಿಸುತ್ತಿದ್ದರು.

ಆದರೆ ಇಂದಿನ ಇಂಟರ್ನೆಟ್ ಯುಗದಲ್ಲಿ ಪೂಜಾರಿಯ ಪ್ರಭಾವ ಇಳಿಮುಖವಾಗುತ್ತಿದೆಯೇ ? ಅಥವಾ ಪೂಜಾರಿಯವರು ನಿಜವಾಗಿಯೂ ದುರ್ಬಲರಾಗಿದ್ದಾರೆಯೇ ? ಅವರ ಜತೆಗಿದ್ದವರೆಲ್ಲ ಅಧಿಕಾರ ಇಲ್ಲದೆ, ಪ್ರಭಾವ ಹೀನರಾಗಿದ್ದಾರೆಯೇ ? ಎಂಬ ಸಂಶಯ ಎದ್ದಿರುವುದೂ ಸುಳ್ಳಲ್ಲ.

ಅಂದ ಹಾಗೆ ಪೂಜಾರಿ ಅವರ ಕಣ್ಣೀರಿಗೆ ಕಾರಣ ಆಗಿರುವುದು ಉಸ್ತುವಾರಿ ಸಚಿವ, ಬಂಟ್ವಾಳದ ಶಾಸಕ ಬಿ. ರಮಾನಾಥ ರೈ ಅವರು ಹಿಂದೊಮ್ಮೆ ಮದುವೆ ಕಾರ್ಯಕ್ರಮದಲ್ಲಿ ಆಡಿದ ಮಾತುಗಳು.

ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಅವರ ಆಪ್ತರಾಗಿರುವ ಸುರತ್ಕಲ್ ಮೂಲದ ಗುತ್ತಿಗೆದಾರರೊಬ್ಬರ ಮಗಳ ಮದುವೆಯಲ್ಲಿ  ಸಚಿವ ರೈ ಅವರು ಒಲ್ಲೆಂಬೆ ನಿನ್ನ ಪೂಜಾರಿ ಎಂದು ಬೈದು, ಬಳಿಕ ಸೂ… ಮಗ ಎಂದು ನಿಂದಿಸಿದ್ದಾರೆ. ಅಲ್ಲಿ ಇದ್ದದ್ದು ತೇಜಸ್ವಿರಾಜ್ ಮತ್ತು ಅರುಣ್ ಕುವೆಲ್ಲೊ. ಅವರು ಈ ವಿಚಾರವನ್ನು ಹರಿಕೃಷ್ಣ ಬಂಟ್ವಾಳ ಅವರಲ್ಲಿ ಹೇಳಿದ್ದರು. ಅವರು ಪೂಜಾರಿ ಅವರಿಗೆ ಮಾಹಿತಿ ನೀಡಿದರು.

ರೈ ಹೇಳಿದ   ” ಒಲ್ಲೆಂಬೆ ನಿನ್ನ ಪೂಜಾರಿ” ಮಾತುಗಳು ಪೂಜಾರಿ ಕುರಿತೇ ಇರಬಹುದು. ಬಳಿಕ ಅಶ್ಲೀಲವಾಗಿ ನಿಂದಿಸಿರುವುದು  ಪೂಜಾರಿಯವರಿಗಲ್ಲ, ಅಲ್ಲಿದ್ದ ಇಬ್ಬರನ್ನು ಉದ್ದೇಶಿಸಿರುವುದು ಎನ್ನುವ ವಾದವೂ ಇದೆ. ಈ ಸಂಶಯ ಇನ್ನೂ ನಿವಾರಣೆಯಾಗಿಲ್ಲ.

ಸಚಿವ ರೈಗಳಿಗೂ ಪೂಜಾರಿ ಅವರ ಅನೇಕ ಮಾತುಗಳು ನೋವು ತಂದಿರಬಹುದು. ಪದೇ ಪದೇ ಪೂಜಾರಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು, ಸಚಿವ ರಮಾನಾಥ ರೈ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಎಲ್ಲಿಯವರೆಗೆ ಅಂದರೆ ಪೂಜಾರಿ ಅವರಿಗೆ ಎಐಸಿಸಿಯಿಂದ ನೋಟಿಸ್ ಬಂದಿದೆ ಎನ್ನುವಷ್ಟರ ಮಟ್ಟಿಗೆ ಇದರಿಂದ ರೈಗಳು ಕೂಡಾ ವಿಚಲಿತರಾಗಿದ್ದರು.

ಸಚಿವ ರೈಗಳು ಸಿಟ್ಟು ಬಂದಾಗ ಮಾತನಾಡುವ ಶೈಲಿ ಬಹುತೇಕರಿಗೆ ಗೊತ್ತೇ ಇದೆ. ಕಲ್ಲಡ್ಕ ಪ್ರಭಾಕರ ಭಟ್ಟರ ಬಂಧನಕ್ಕೆ ಸೂಚಿಸುವ ವೀಡಿಯೊ ಕ್ಲಿಪ್ಪಿಂಗ್ ಕೂಡಾ ಅವರ ನೇರ ಮಾತಿಗೆ ಅತ್ಯುತ್ತಮ ಉದಾಹರಣೆ ಎನ್ನಬಹುದು.

ವಿಶೇಷ ಎಂದರೆ ರಮಾನಾಥ ರೈ ಅವರ ಪಾಲಿಗೆ ವೀರಪ್ಪ ಮೊಯ್ಲಿಯಂತೆ  ಪೂಜಾರಿ ಕೂಡಾ ರಾಜಕೀಯ ಗುರು. ಈಗ ಅವರು ಮುಸ್ಲಿಮರ ಕೃಪೆಯಿಂದ ಈ ಮಟ್ಟಕ್ಕೆ ಬಂದಿದ್ದೇನೆ ಎನ್ನಬಹುದು. ಅದರಲ್ಲೂ ತಪ್ಪಿಲ್ಲ ಬಿಡಿ. ಅವರ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರೇ ಬಹುಸಂಖ್ಯಾತರು, ಹೀಗಾಗಿ ಅವರು ಓಟು ಹಾಕದಿದ್ದರೆ ರೈಗಳು ಗೆಲ್ಲುವುದಿಲ್ಲ. ಸಚಿವ ರೈ ದೂರವಾಣಿ ಕರೆ ಮಾಡಿ ಕ್ಷಮೆ ಕೇಳಿದ್ದು ಹೌದು. ನನ್ನ ತಾಯಿಗೆ ಹೀಗೆ ಹೇಳಿದವರನ್ನು ನಾನು ಹೇಗೆ ಕ್ಷಮಿಸಲಿ. ದೇವರೇ ಎಲ್ಲವನ್ನು ನೋಡಲಿ ಎಂದು ಪೂಜಾರಿ ತನ್ನ ಆಪ್ತರಲ್ಲಿ ಹೇಳಿಕೊಂಡಿದ್ದರು. ಇದಾಗಿ ಅರ್ಧವರ್ಷ ಸಂದಿದೆ. ಈಗ ಚುನಾವಣೆ ಸಂದರ್ಭದಲ್ಲಿ ಗಾಯ ಮತ್ತೆ ಕೆದಕಲಾಗುತ್ತಿದೆ.

ಬಿಲ್ಲವ ಸಮಾಜಕ್ಕೆ ಸೇರಿದ ಕಂಕನಾಡಿಯ ಗರೋಡಿಯ  ಬ್ರಹ್ಮಕಲಶೋತ್ಸವದಲ್ಲಿ. ಆ ಸಂದರ್ಭ ಕಾಂಗ್ರೆಸ್‍ನ ಮುಖಂಡರೂ ತಲೆಕೆಳಗೆ ಹಾಕಿಕೊಂಡು ವೇದಿಕೆಯಲ್ಲಿದ್ದರು.

ಪೂಜಾರಿಯ ಬಲಗೈ ಬಂಟ ಹರಿಕೃಷ್ಣ ಬಂಟ್ವಾಳ ಇದೇ ವಿಚಾರ ಇತ್ತೀಚೆಗೆ ಬಹಿರಂಗ ಸಭೆಯಲ್ಲಿ ಹೇಳಿದಾಗ ಪೂಜಾರಿ ಕುಳಿತುಕೊಂಡೇ ಕಣ್ಣೀರು ಸುರಿಸಿದ್ದರು. ಬಿಜೆಪಿ ಸೇರಿದ ಹರಿಕೃಷ್ಣ ಬಂಟ್ವಾಳ್ ಅವರು ವಿಧಾನಪರಿಷತ್ ಚುನಾವಣೆಯಲ್ಲಿ ಟಿಕೆಟ್ ನೀಡದೆ ಕಾಂಗ್ರೆಸ್ ಮಾಡಿದ ಅವಮಾನಕ್ಕೆ ಈಗಲೂ ಕೊತ, ಕೊತ ಕುದಿಯುತ್ತಿದ್ದಾರೆ. ಸೇಡು ತೀರಿಸಲು ಕಾಯುತ್ತಿದ್ದಾರೆ.

ಇತ್ತ ಮಾನಸಿಕವಾಗಿ ಸದೃಢವಾಗಿ ರಾಜನಂತೆ ಮೆರೆಯುತ್ತಿದ್ದ ಪೂಜಾರಿ ಸ್ವಪಕ್ಷೀಯರಿಂದಲೇ ಆಗುತ್ತಿರುವ ದಾಳಿಯಿಂದ ಜರ್ಝರಿತರಾದ್ದಾರೆ. ಆರೋಗ್ಯವೂ ಕೈಕೊಡುತ್ತಿದೆ. ಇಂದಿರಾ ಕುಟುಂಬಕ್ಕೆ ನಿಷ್ಠನಾಗಿರುವ ಪೂಜಾರಿ ಅವರು, ಏನೇ ಆದರೆ ಕೈ ಬಿಟ್ಟು ಕಮಲ ಹಿಡಿಯಲಾರೆ ಎನ್ನುವುದು ಹಠ. ಭ್ರಷ್ಟಾಚಾರ ರಹಿತ, ಸರಳತೆಯ ಸಾಕಾರಮೂರ್ತಿ ಪೂಜಾರಿ ಅವರ ಮಾತುಗಳು ಅವರ ವರ್ಚಸ್ಸನ್ನು ಕಡಿಮೆ ಮಾಡಿದರೂ ಹೃದಯ ಮಾತ್ರ ಶುಭ್ರ.

ರಾಜಕೀಯ ಜೀವನದ ಮುಸ್ಸಂಜೆಯಲ್ಲಿರುವ ಪೂಜಾರಿ ತಮ್ಮ ಆತ್ಮಚರಿತ್ರೆಯನ್ನು ಬರೆಯುತ್ತಿದ್ದಾರೆ. ಜ.26ರಂದು ಬಿಡುಗಡೆಯೂ ಆಗಲಿದೆ. ಅಂದೂ ಕಣ್ಣೀರ ಕಟ್ಟೆ ಒಡೆಯುವ ಸಾಧ್ಯತೆಯೂ ಇದೆ.

*ಈ ಕಣ್ಣೀರು ಕಾಂಗ್ರೆಸಿಗೆ ಹಿನ್ನಡೆಯಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. *

ವಿಚೇತನ ಮಕ್ಕಳ ಕಣ್ಣೀರು : ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದಿಂದ ಪ್ರಸಾದ ರೂಪದಲ್ಲಿ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಮದ್ಯಾಹ್ನದ ಅನ್ನಕ್ಕಾಗಿ ಬರುತ್ತಿದ್ದ ಧನ ಸಹಾಯವನ್ನು ಸಚಿವ ರಮಾನಾಥ ರೈಗಳ ಒತ್ತಾಸೆಯಂತೆ ಈಗಿನ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ ನಿಲ್ಲಿಸಿತು.

ಇಲ್ಲಿ ಮಕ್ಕಳು ಮಾತ್ರ ಕಣ್ಣೀರು ಹಾಕದರೆ ಸಿಡಿದು ತಟ್ಟೆ ತಟ್ಟಿ ಪ್ರತಿಭಟಿಸಿದರು. ಬಿಜೆಪಿಯ ಮುಖಂಡರು ರಾಜಕೀಯದ ಭಿಕ್ಷೆ ಎತ್ತಲು ಮುಂದಾದರು. ಮಕ್ಕಳು ಮಾತ್ರ ಕೃಷಿ ಮಾಡಿ ಚಿನ್ನದ ಬೆಳೆ ತೆಗೆದರು, ಇನ್ನೊಂದೆಡೆ ದೇಣಿಗೆಯೂ ಹರಿದು ಬಂತು.

ಆದರೆ ಇದಕ್ಕೆ ಪೂರಕಾಗಿ ರಾಜ್ಯದ 80ಕ್ಕೂ ಹೆಚ್ಚು ಶಾಲೆ, ವಿಚೇತನ ಮಕ್ಕಳ, ದೇವದಾಸಿ ಕೇಂದ್ರದ ಅನ್ನವನ್ನು ಕಸಿದಿದ್ದಾರೆ. ಪಾಪ ಅವರಿಗೆ ಯಾರ ಬೆಂಬಲವೂ ಇಲ್ಲ. ಅವರ ಕಣ್ಣೀರಿಗೆ ರಾಜಕೀಯದಲ್ಲೂ ಬೆಲೆ ಇಲ್ಲ.

ಮೇಯರ್ ಕಣ್ಣೀರು : ಕರಾಟೆ ಸ್ಪರ್ಧೆ ಉದ್ಘಾಟನೆ ಸಂದರ್ಭ ಸಿಎಂಗೆ ಪಂಚ್ ನೀಡಿ, ಸಿಎಂ ವಾಪಸ್ ಪಂಚ್ ನೀಡುವ ಮೂಲಕ ದೊಡ್ಡ ಮಟ್ಟದಲ್ಲಿ ಸುದ್ದಿಯಾದ ಮಂಗಳೂರು ಮೇಯರ್ ಕವಿತಾ ಸನಿಲ್ ಎರಡು ಬಾರಿ ಬಹಿರಂಗವಾಗಿ ಕಣ್ಣೀರು ಹಾಕಿಯೂ ಸುದ್ದಿಯಾದರು.

ತನ್ನ ಅಪಾರ್ಟ್ ಮೆಂಟಿನ ಕಾವಲುಗಾರನ ಮಗು ಹಾಗೂ ಪತ್ನಿಗೆ ಹೊಡೆದಿರುವುದಾಗಿ ಆರೋಪ ಬಂದಾಗ ಮೇಯರ್ ಕವಿತಾ ಸನಿಲ್ ಮಹಾನಗರಪಾಲಿಕೆ ಸಭೆಯಲ್ಲಿ ಕಟೀಲು ದುರ್ಗಾ ಪರಮೇಶ್ವರಿ ಮೇಲೆ ಆಣೆ ಇಟ್ಟು ಕಣ್ಣೀರು ಹಾಕಿದರು. ಈ ಕಣ್ಣೀರನ್ನು ಪ್ರತಿಪಕ್ಷ ಬಿಜೆಪಿ ಮಾತ್ರ ಪರಿಗಣಿಸಲೇ ಇಲ್ಲ.ಇನ್ನೊಂದು ಬಾರಿ ಮೇಯರ್ ಕಣ್ಣೀರು ಹಾಕಿದ್ದು, ತನ್ನ ಮೊದಲ ರಾಜಕೀಯ ಗುರು ಜನಾರ್ದನ ಪೂಜಾರಿ ಕಂಕನಾಡಿ ಗರೋಡಿಯಲ್ಲಿ ಕಣ್ಣೀರು ಹಾಕಿದಾಗ.

ಬಡವರ ಕಣ್ಣೀರು : ತೊಗರಿಬೇಳೆ ಬೆಲೆ 200 ರು ಏರಿಕೆಯಾಗಿ ಕಣ್ಣಿರು ತರಿಸಿದರೆ ತರಕಾರಿ ಬೆಲೆಗಳು ಚೆನ್ನೈ ಮಳೆಯ ಕಾರಣಕ್ಕೆ ಏಳಿದ್ದು ಇಳಿಯಲೇ ಇಲ್ಲ. ಈರುಳ್ಳಿ ಬೆಲೆ ಏರಿಕೆ ಗ್ರಾಹಕರಿಗೆ ಕಣ್ಣೀರು ತರಿಸಿದ್ದು ಸುಳ್ಳಲ್ಲ.

ವಿಶ್ವಸುಂದರಿಯ ಕಣ್ಣೀರು : ಬಡವರಿಗೆ ದಿನಬಳಕೆ ವಸ್ತುಗಳ ದರ ಏರಿಕೆ, ವರ್ತಕರಿಗೆ ಜಿಎಸ್‍ಟಿ ಏರಿಕೆ, ಜನಸಾಮಾನ್ಯರಿಗೆ ತೆರಿಗೆ ಬರೆ ಕಣ್ಣೀರು ತರಿಸಿದರೆ ನಮ್ಮ ಕರಾವಳಿಯ ಕರಾವಳಿಯ ಹೆಣ್ಣುಮಗಳು ಐಶ್ವರ್ಯ ರೈಗೂ ಈ ಬಾರಿ ಕಣ್ಣೀರು ಬಂದಿದೆ. ಆದರೆ ಇದು ಪತ್ರಕರ್ತರಿಂದಾಗಿ !

ತನ್ನ ತಂದೆಯ ಹುಟ್ಟುಹಬ್ಬದ ನಿಮಿತ್ತ 100 ಮಕ್ಕಳಿಗೆ ಉಚಿತ ಸೀಳು ತುಟಿಯ ಶಸ್ತ್ರಚಿಕಿತ್ಸೆ ಮಾಡಿಸಲು ಮಗಳು ಆರಾಧ್ಯಳ ಜೊತೆಗೆ ಆಸ್ಪತ್ರೆಗೆ ಬಂದಿದ್ದರು. ಕಾರ್ಯಕ್ರಮದಲ್ಲಿ ಪತ್ರಕರ್ತರು ಬಂದು ಫೋಟೊ ತೆಗೆದದ್ದೇ  ಐಶ್ವರ್ಯ ರೈ ಕಣ್ಣೀರಿಗೆ ಕಾರಣವಾಗಿತ್ತು.

ಯಕ್ಷ ಕಣ್ಣೀರು : ಯಕ್ಷಗಾನಕ್ಷೇತ್ರದಲ್ಲೂ ಈ ವರ್ಷ ದುಃಖ ತಂದವು. ಯಕ್ಷಗಾನದ ಮೇರು ಕಲಾವಿದ ಗೇರುಕಟ್ಟೆ ಗಂಗಯ್ಯ ಶೆಟ್ಟಿ ಪಾತ್ರ ನಿರ್ವಹಿಸುತ್ತಲೇ ಇಹಲೋಕ ತ್ಯಜಿಸಿದರು. ಅನೇಕ ಮಂದಿ ಕಲಾವಿದರು ಇಹಲೋಕ ತ್ಯಜಿಸಿದರು.

ವರ್ಗಾವಣೆ ವಿರೋಧಿಸಲು ರಾಜೀನಾಮೆ ನೀಡುವ ಮೂಲಕ ಮಾಡಿದ ಸಣ್ಣ ಎಡವಟ್ಟಿನಿಂದ ಕಟೀಲು ಮೇಳದ ಕೆಲವು ಕಲಾವಿದರು ಕಣ್ಣೀರು ಹಾಕುವಂತಾಯಿತು.

ಲೇಖನ: ಜಿತೇಂದ್ರ ಕುಂದೇಶ್ವರ ವಿಶ್ವವಾಣಿ ಮಂಗಳೂರು 

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)