ವೈದ್ಯನ ಯಡವಟ್ಟಿನಿಂದ ವಿದ್ಯಾರ್ಥಿನಿ ಸಾವು – ಕ್ಲಿನಿಕ್ ಬೋರ್ಡ್ ತೆಗೆದು ವೈದ್ಯ ಎಸ್ಕೇಪ್

0
142
dinetmedia

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಮೈಸೂರು: ನಗರದಲ್ಲಿ ವೈದ್ಯನೊಬ್ಬನ ಚುಚ್ಚುಮದ್ದು ಸೋಂಕಿನಿಂದ ಬಿ.ಎಸ್‍ಸಿ ಪದವೀಧರೆಯೊಬ್ಬಳು ದಾರುಣವಾಗಿ ಮೃತಪಟ್ಟ ಘಟನೆ ಮೈಸೂರಿನ ಹೆಚ್‍ಡಿ ಕೋಟೆ ತಾಲೂಕಿನ ಕಾಳಿಹುಂಡಿ ಬಳಿ ನಡೆದಿದೆ.

ಮೃತ ದುರ್ದೈವಿ ವಿದ್ಯಾರ್ಥಿನಿಯನ್ನು 21 ವರ್ಷದ ಅಂಕುಶ ಎಂದು ಗುರುತಿಸಲಾಗಿದೆ. ವಿದ್ಯಾರ್ಥಿನಿ ಅಂಕುಶಳಿಗೆ ವಾರದ ಹಿಂದೆ ಜ್ವರ ಬಂದಿತ್ತು. ಹೀಗಾಗಿ ಈಕೆ ತಾಲೂಕಿನಲ್ಲಿರೋ ಕ್ಲಿನಿಕ್‍ವೊಂದರಲ್ಲಿ ಚಿಕಿತ್ಸೆ ಪಡೆದಿದ್ದರು. ಅಂತೆಯೇ ಅಲ್ಲಿನ ವೈದ್ಯ ರಾಜು ಎಂಬಾತ ಅಂಕುಶಳಿಗೆ ಇಂಜೆಕ್ಷನ್ ನೀಡಿ ಚಿಕಿತ್ಸೆ ಕೊಟ್ಟಿದ್ದನು. ಮರುದಿನವೇ ಇಂಜೆಕ್ಷನ್ ನೀಡಿದ್ದ ಜಾಗದಲ್ಲಿ ಊತ ಆರಂಭವಾಗಿ ನೋವು ಕಾಣಿಸಿಕೊಂಡಿತ್ತು. ಅಲ್ಲದೇ ಆ ಜಾಗ ಗಂಟಾಗಿ ಕೀವು ತುಂಬಲು ಪ್ರಾರಂಭವಾಗಿತ್ತು.

ಈ ಹಿನ್ನೆಲೆಯಲ್ಲಿ 2 ದಿನಗಳ ನಂತರ ರಾಜು ಬಳಿ ತೆರಳಿದಾಗ ವೈದ್ಯ ತಾನೇ ಮೈಸೂರಿನ ಖಾಸಗಿ ವೈದ್ಯರ ಬಳಿ ಕರೆದ್ಯೊಯ್ದು ಚಿಕಿತ್ಸೆ ಕೊಡಿಸಿದ್ದನು. ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಸೋಮವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ವೈದ್ಯ ಎಸ್ಕೇಪ್: ಇತ್ತ ಯುವತಿಯ ಸಾವಿನ ಮಾಹಿತಿ ತಿಳಿಯುತ್ತಿದ್ದಂತೆ ವೈದ್ಯ ರಾಜು ಕ್ಲಿನಿಕ್ ಬೋರ್ಡ್ ತೆಗೆದು ತಲೆಮರೆಸಿಕೊಂಡಿದ್ದಾನೆ. ಅಲ್ಲದೇ ಈ ಕುರಿತು ಅಂಕುಶ ಕುಟುಂಬಸ್ಥರು ಕೂಡ ಯಾವುದೇ ದೂರು ನೀಡದೆ ಅಂತ್ಯಕ್ರಿಯೆ ನಡೆಸಿದ್ದಾರೆ.

ಆದ್ರೆ ಸ್ಥಳೀಯರು ಮಾತ್ರ ಡಾ ರಾಜು ಅಸಲಿ ವೈದ್ಯನೇ ಅಲ್ಲ ಅಂತ ಆರೋಪಿಸಿದ್ದು, ನಕಲಿ ವೈದ್ಯನ ಯಡವಟ್ಟಿನಿಂದ ಯುವತಿ ಬಲಿಯಾಗಿದ್ದಾಳೆ ಅನ್ನೋ ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)