ಅನಂತಾಸನ, ವ್ಯಾಸಪೀಠಾಸನ, ಸಿಎಂ ಕರಾಟೆ ಪಂಚಾಸನ….

0
767

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)


*ಅತೃಪ್ತ ಆತ್ಮಗಳಿಗೆ “ಸತ್ಯ” ಬೇಕಿಲ್ಲ, ವಿವಾದಕ್ಕೆ ಕೊನೆ ಇಲ್ಲ *

ಮಂಗಳೂರಲ್ಲಿ ಸಿಎಂ ಸಿದ್ದರಾಮಯ್ಯ ಅವರ ಕರಾಟೆ ಪಂಚ್, ಉಡುಪಿಯಲ್ಲಿ ಅನಂತಾಸನ ನಾಮಫಲಕ ವಿವಾದ, ರಾಜಾಂಗಣದಲ್ಲಿ ಸ್ವಾಮೀಜಿಗಳು ಕುಳಿತ ಭಂಗಿ ಅಗತ್ಯಕ್ಕಿಂತ ಹೆಚ್ಚೇ ವಿವಾದಕ್ಕೀಡಾಗಿದೆ.

ಸಾಮಾಜಿಕ ಸ್ವಾಸ್ಥ್ಯಕ್ಕೆ ಅಗತ್ಯ ಇಲ್ಲದ ವಿಚಾರಗಳು ಜಾಲತಾಣಗಳಲ್ಲಿ ಅತಿ ಹೆಚ್ಚೇ ಚರ್ಚೆಯಾಗುತ್ತಿದೆ. ಬೆಂಬಲಿಗರ ಕುರುಡು ಪ್ರೇಮ, ಅಂಧಾಭಿಮಾನದಿಂದ ನಾಯಕರು ಮುಜುಗರ ಪಟ್ಟುಕೊಳ್ಳಬೇಕಾದ ಪರಿಸ್ಥಿತಿ ಪದೇ ಪದೇ ಮರುಕಳಿಸುತ್ತಿದೆ.

ಸಿಎಂ ಸಿದ್ದರಾಮಯ್ಯ ಮಂಗಳೂರಿಗೆ ಬಂದು ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಮೇಯರ್ ಕವಿತಾ ಸನಿಲ್‌ಗೆ ಕರಾಟೆ ಪಂಚ್ ಕೊಟ್ಟರು. ಸಮಾರಂಭದಲ್ಲಿದ್ದ ಜನ ಖುಷಿಯಿಂದ ಚಪ್ಪಾಾಳೆ ತಟ್ಟಿ ಹೋ ಹೋ ಎಂದು ಕುಣಿದಿದ್ದರು. ಈ ಫೋಟೊ ಕನ್ನಡ ಪತ್ರಿಕೆಗಳಲ್ಲಿ ಬಿಡಿ, ದುಬೈ ಖಲಿಜಾ ಟೈಮ್ಸ್‌‌ನಲ್ಲಿಯೂ ಪ್ರಕಟವಾಯಿತು. ಟೈಮ್ಸ್‌ ಆಫ್ ಇಂಡಿಯಾದ ಮುಂಬಯಿ, ದಿಲ್ಲಿ ಆವೃತ್ತಿಗಳಲ್ಲಿಯೂ, ಮುಖಪುಟದಲ್ಲಿಯೂ ಪ್ರಕಟವಾಯಿತು ಫೋಟೋ ಕ್ಲಿಕ್‌ನಲ್ಲೂ ಅಂಥಹ ಒಂದು ಕಿಕ್ ಇತ್ತು. ಹೀಗಾಗಿ ಪ್ರಾಧಾನ್ಯತೆ ಪಡೆಯಿತು.

ಆದರೆ ಈ ಫೋಟೊ ನೋಡಿ ಜಾಲತಾಣದಲ್ಲಿ ಕೆಟ್ಟ ಚರ್ಚೆ, ಅಶ್ಲೀಲ ಬೈಗುಳ, ರಾಜಕೀಯ ಆರೋಪ, ಪ್ರತ್ಯಾಾರೋಪಗಳು ನಡೆದು, ಮಹಿಳಾ ಮೇಯರ್‌ಗೆ ಮಾನಹಾನಿಯಾಗುವ ಕಮೆಂಟ್‌ಗಳು ಬಂದವು.

ಇದೇ ಜಾಲತಾಣಗಳಲ್ಲಿ ಕರಾಟೆಯಲ್ಲಿ ಗೆದ್ದವರ ಫೋಟೊ ಬಂದು ಅಭಿನಂದನೆ ಮಾಡಿದ್ದು ಕಂಡಿಲ್ಲ. ಮಾಧ್ಯಮದಲ್ಲೂ ಗೆದ್ದವರ ಫೋಟೊ ಬಂದಿಲ್ಲ. ಬಂದರೂ ಮೂಲೆಯಲ್ಲಿ. ಶಾಲೆಯಲ್ಲಿ ಎಲ್ಲರು ಕರಾಟೆ ಕಲಿಯಬೇಕು, ಹೆಣ್ಣುಮಕ್ಕಳು ಮುಖ್ಯವಾಗಿ ದೌರ್ಜನ್ಯ ತಡೆಯಲು ಕರಾಟೆ ಕಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದು ಕೂಡಾ ಸ್ಥಳೀಯ ಆವೃತ್ತಿಯ ಒಳಪುಟಗಳಲ್ಲಷ್ಟೇ ಬಂತು.

ಈಗ ಚುನಾವಣೆ ವರ್ಷ, ಆರೋಪಗಳ ವರ್ಷ. ಬಿಜೆಪಿಯವರು ಏನೂ ಮಾಡಿದರೂ ಕಾಂಗ್ರೆಸ್ ಬೆಂಬಲಿಗರಿಗೆ ತಪ್ಪು. ಕಾಂಗ್ರೆಸ್ ನವರು ಏನು ಮಾಡಿದರೂ ಬಿಜೆಪಿ ಬೆಂಬಲಿಗರಿಗೆ ತಪ್ಪು.

ತಪ್ಪನ್ನು ತಪ್ಪು, ಸರಿಯನ್ನು ಸರಿ ಎಂದು ಆತ್ಮಸಾಕ್ಷಿಗೆ ಅನುಗುಣವಾಗಿ ಹೇಳಲು ಹೋದರೆ ಒಂದೋ ಬುದ್ಧಿ ಜೀವಿ, ಇಲ್ಲವೇ ಕೋಮುವಾದಿ, ಪ್ರಶಸ್ತಿಗೆ ಬಕೆಟ್ ಹಿಡಿಯುವವ ಎಂಬ ಆರೋಪ ಹೊರಿಸಿ ಕುರುಡು ಬೆಂಬಲಿಗರು ಸತ್ಯದ ಉಸಿರು ಒತ್ತುವ ಕೆಲಸ ಮಾಡುತ್ತಾಾರೆ

ನಿಜವಾಗಿಯೂ ಅಲ್ಲೇನಾಯಿತು ? ಮೇಯರ್ ಕವಿತಾ ಸನಿಲ್, ಸಿಎಂ ಸಿದ್ದರಾಮಯ್ಯ ಅವರಿಗೆ ಪಂಚ ಕೊಡುವ ಮೂಲಕ ಕರಾಟೆ ಕೂಟಕ್ಕೆ ಚಾಲನೆ ನೀಡಿದರು. ಮೊದಲಿಗೆ ಕವಿತಾ ಸನಿಲ್ ಸಿಎಂ ಹೊಟ್ಟೆಗೆ ಪಂಚ್ ನೀಡಿದರೆ ಬಳಿಕ ಕವಿತಾ ಸನಿಲ್ ಹೊಟ್ಟೆಗೆ ಸಿಎಂ ಪ್ರತಿ ಏಟು ನೀಡಿದರು. ಗಟ್ಟಿಯಾಗಿ ಹೊಡೆದರೋ ಅದೂ ಅಲ್ಲ, ಕೇವಲ ಟಿವಿ ಕ್ಯಾಮೆರಾ ಮತ್ತು ಛಾಯಾಚಿತ್ರಗ್ರಾಹಕರಿಗೆ ಒಂದು ಫೋಸ್ ಅಷ್ಟೇ. ಇದರಲ್ಲಿ ಅಶ್ಲೀಲತೆಯ ಲವಲೇಶವೂ ಇರಲಿಲ್ಲ. ಕಾರ್ಯಕ್ರಮದ ಕೇಂದ್ರ ಬಿಂದು ಕರಾಟೆ ಚಾಂಪಿಯನ್, ರಾಜ್ಯೋತ್ಸವ ಪ್ರಶಸ್ತಿ ಕೂಡಾ ಪಡೆದಿರುವ ಕವಿತಾ ಸನಿಲ್ ಕುರಿತು ಸಿಎಂ ಸಹಜವಾಗಿಯೇ ಹೆಚ್ಚೇ ಹೊಗಳಿದರು, ಆತ್ಮೀಯತೆ ತೋರಿದರು. ಇದು ಪ್ರತಿಪಕ್ಷದವರ ಜತೆಯಲ್ಲಿ ಪಕ್ಷದೊಳಗಿನವರಿಗೂ ಕಣ್ಣು ಕೆಂಪಗಾಗಿಸಿದೆ. ಹೀಗಾಗಿ ಪುಂಖಾನುಪುಂಖವಾಗಿ ಟೀಕೆಗಳು.

ಸಿಎಂ ಮಂಗಳೂರಿಗೆ ಮೊನ್ನೆ ಬಂದಾಗ ಮೀನು ಮಾಂಸ, ದೇಗುಲ ಪ್ರವೇಶ ಕುರಿತು ಎಲ್ಲೆಡೆ ವ್ಯರ್ಥ ಚರ್ಚೆಗಳು ನಡೆದಿತ್ತು. ನಿನ್ನೆ ಹಂಪೆಗೆ ಹೋದ ಸಿಎಂ, ವಿರೂಪಾಕ್ಷನ ದರ್ಶನ ಮಾಡದರೆ ಹಿಂದಿರುಗಿದರು. ವಿರೂಪಾಕ್ಷ ದೇವಸ್ಥಾನಕ್ಕೆ ಹೋದರೆ ಸೋಲುತ್ತಾರೆ ಎಂಬ ಮೂಢನಂಭಿಕೆ ಈಗಾಗಲೇ ಜನರಲ್ಲಿ ಬಿತ್ತಿಯಾಗಿದೆ. ಹೋದರೂ ಕಷ್ಟ, ಹೋಗದಿದ್ದರೂ ಕಷ್ಟ ಎಂಬ ಪರಿಸ್ಥಿತಿ ಈಗ ಸಿಎಂಗೆ ಬಂದಿದೆ. ಮಂಗಳೂರಿನ ಕರಾಟೆ ಕಿಕ್ ಕೂಡಾ ವಿರೋಧಿಗಳಿಗೆ ಆಹಾರವಾಗಿದೆ.

ಚರ್ಚೆಗೆ ಕಾರಣವಾಯ್ತಾ ಸ್ವಾಮೀಜಿ ವ್ಯಾಸಪೀಠ ಭಂಗಿ ? : ಸಕಾರಾತ್ಮಕ ವಿಚಾರಗಳಿಗಿಂತ ನಕಾರಾತ್ಮಕ ವಿಚಾರಗಳಿಗೆ ಹೆಚ್ಚೇ ಪ್ರಾಾಧಾನ್ಯತೆ ಸಿಗುತ್ತಿದೆ. ಉಡುಪಿ ಶ್ರೀಕೃಷ್ಣ ಮಠದಲ್ಲಿ ಸುಧಾಮಂಗಲ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಉತ್ತರಾದಿ ಮಠದ ಸತ್ಯಾತ್ಮ ತೀರ್ಥರು ವ್ಯಾಾಸಪೀಠ ಭಂಗಿಯಲ್ಲಿ (ಆಸನದ ಮೇಲೆ vಶೇಪ್) ಕುಳಿತಿದ್ದರು.

ಪಕ್ಕದಲ್ಲಿ ಆಶ್ರಮ ಜೇಷ್ಠರಾದ ಪೇಜಾವರ ಶ್ರೀಗಳು ಕುಳಿತಿದ್ದರು. ಹಿರಿಯ ಯತಿ ಪಕ್ಕ ಕಿರಿಯ ಯತಿಗಳೂ ಈ ರೀತಿ ಕುಳಿತದ್ದು ತಪ್ಪು, ಮಾಧ್ವ ಸಂಪ್ರದಾಯದ, ಭಾರತೀಯ ಸಂಸ್ಕೃತಿ ಪಾಲನೆ ಮಾಡುವವರು ಈ ರೀತಿ ಶಾಸ್ತ್ರಕ್ಕೆ:ವಿಮುಖರಾಗಿದ್ದು ತಪ್ಪು ಎಂದ ಮಾಧ್ವ ಪಂಡಿತರ ಒಂದು ಕಿಡಿ ಕಾರುತ್ತಿದೆ. ಈ ಪಂಡಿತರ ವರ್ಗ ವಾಟ್ಸಪ್‌ನಲ್ಲಿ ವಿದ್ವತ್ ಪೂರ್ಣವಾದ ವಾದ ಮಂಡಿಸುತ್ತಾ ವಾಯ್ಸ್‌ ಕ್ಲಿಪ್‌ಗಳನ್ನ ಹಾಕುತ್ತಾ ಏನೋ ಉತ್ಪಾಾತಗಳಾಗಿವೆ ಎಂಬಂತೆ ಚರ್ಚಿಸತೊಡಗಿದ್ದಾಾರೆ. ಕೆಲವರಂತೂ ನಿಂದನೆಯ ಮಟ್ಟಕ್ಕೂ ಇಳಿದಿದ್ದಾಾರೆ.

ಇಲ್ಲಿ ಪೇಜಾವರ ಶ್ರೀಗಳಿಗೆ ಈ ಕುರಿತು ಯಾವುದೇ ತಕರಾರಿಲ್ಲ. ಆದರೆ ಕುರುಡಾಗಿ ಬೆಂಬಲಿಸುವ ಶಿಷ್ಯವರ್ಗದವರ ಅಭಿಮಾನದ ಪರಾಕಾಷ್ಠೆ, ಅನ್ಯರ ಕುರಿತ ಅಸಡ್ಡೆ ಯೇ ಇಂಥ ವ್ಯರ್ಥ ಚರ್ಚೆಗಳಿಗೆ ಕಾರಣವಾಗುತ್ತಿದೆ.

ಕಳೆದ ವರ್ಷ ಬನ್ನಂಜೆ ಗೋವಿಂದಾಚಾರ್ಯರ ವಿರುದ್ಧವೂ ಉತ್ತರಾದಿ ಮಠದ ಶಿಷ್ಯರೊಬ್ಬರು ತೀರಾ ಕೆಟ್ಟದಾಗಿ ನಿಂದಿಸಿದರು. “ಮಧ್ವಾಚಾರ್ಯರನ್ನು ಕೇವಲ “ಆಚಾರ್ಯ ಮಧ್ವರು” ಎಂದು ಗೋವಿಂದಾಚಾರ್ಯರು ಕರೆಯುತ್ತಾಾರೆ. ಶ್ರೀಮನ್ಮಧ್ವಾಚಾರ್ಯರು ಎಂಬುದಾಗಿ ಕರೆಯಬೇಕು. ಇದು ಗೊತ್ತಿಲ್ಲವೇ ?ಇವರ್ಯಾಾವ ಸೀಮೆ ವಿದ್ವಾಂಸರು” ಎಂದು ನಿಂದಿಸಿದ್ದರು. ವಾದಕ್ಕೆ ನಾನು ಸಿದ್ಧ ಎಂದು ಗೋವಿಂದಾಚಾರ್ಯರು ಸವಾಲು ಸ್ವೀಕರಿಸಿದ್ದರು. ಇದರ ವಾಯ್‌ಸ್‌ ಕ್ಲಿಪ್‌ಗಳು ಕಾಡ್ಗಿಚ್ಚಿನಂತೆ ಹಬ್ಬಿ ವಿದ್ವಾಂಸರ ತೇಜೋವಧೆಗೆ ಕಾರಣವಾಗಿತ್ತು.

ಕೊನೆಗೆ ಶ್ರೀಸತ್ಯಾತ್ಮ ತೀರ್ಥರೇ ಉಡುಪಿಗೆ ಬಂದಾಗ ಶಿಷ್ಯರಿಗೆ ಬುದ್ಧಿ ಮಾತು ಹೇಳಿ, ವಿದ್ವಾಂಸರಿಗೆ ನಿಂದಿಸಿ ಮಾತನಾಡಬಾರದು, ಗೋವಿಂದಾಚಾರ್ಯರು ಶ್ರೇಷ್ಠ ವಿದ್ವಾಾಂಸರು, ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ಸುದ್ದಿಗಾರರ ಮುಂದೆ ವಿಶಾಲ ಮನೋಭಾವ ಪ್ರದರ್ಶಿಸಿದ್ದರು. ಈ ಶಿಷ್ಯರು ಮಾಡುವ ಬಾನಗಡಿಗೆ ಗುರುಗಳು ಮುಜುಗರಕ್ಕೆ ಒಳಗಾಗುವುದು ತಪ್ಪುತ್ತಿಲ್ಲ.

ಅನಂತಾಸನ ಫಲಕ ಔಟ್ : ಕೊನೆಯದಾಗಿ ಶೈವ, ವೈಷ್ಣವರ ಮೈತ್ರಿಗೆ ನಾಮ ಇಟ್ಟಿದ್ದ ಉಡುಪಿಯ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿದ್ದ “ಅನಂತಾಸನ” ಫಲಕ ಎತ್ತಂಗಡಿಯಾಗಿದೆ. ಫಲಕದಿಂದಾಗಿ ಹುಟ್ಟಿದ್ದ ಶೈವ, ವೈಷ್ಣವರ ವಾದ, ಪ್ರತಿವಾದಕ್ಕೆ ಸದ್ಯಕ್ಕೆ ವಿರಾಮ ಬಿದ್ದಿದೆ. ಆದರೆ ಹಿಂದುತ್ವ, ಹಿಂದು ಸಂಸ್ಕೃತಿಯ ರಕ್ಷಣೆಗಾಗಿ ಜಾಗತಿಕ ದೃಷ್ಟಿಕೋನದಲ್ಲಿ ಪ್ರಭಾವ ಬೀರಬೇಕಿದ್ದ ಪಂಡಿತರು, ವಿದ್ವಾಾಂಸರು ಮೊಬೈಲ್ ಯುಗದಲ್ಲಿ, ಕೆಲಸಕ್ಕೆ ಬಾರದ ಶೈವ ಮೇಲೋ, ವೈಷ್ಣವ ಮೇಲೋ ಎಂದು ಹಳೆಯ ಗ್ರಂಥಗಳನ್ನು ಕೆದಕಿ ಮೊಬೈಲ್‌ನಲ್ಲಿ ವಾದ ಮಾಡುತ್ತಿರುವುದು ಸೋಜಿಗ ಮತ್ತು ಶೋಚನೀಯ,

ಲೇಖನ- ಜಿತೇಂದ್ರ ಕುಂದೇಶ್ವರ ವಿಶ್ವವಾಣಿ ಮಂಗಳೂರು

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)