ವಾರದ ವಿಶೇಷ ಲೇಖನ : ಎನ್ನೆಸ್ಸೆಸ್ ಶಿಬಿರದಲ್ಲಿ ರಂಜಿಸಿದ ಯಕ್ಷಗಾಯನ ಮತ್ತು ಯಕ್ಷನಾಟ್ಯ

0
322
dinetmedia

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ವಿಶೇಷ ವರದಿ ಅ.29 : ಅದು ಕುಂದಾಪುರದ ಹಕ್ಲಾಡಿಯ ಕೆ.ಎಸ್ ಎಸ್ ಸರಕಾರಿ ಪ್ರೌಢ ಶಾಲೆ.ಅಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳ ಒಂದು ವಾರದ ವಾರ್ಷಿಕ ವಿಶೇಷ ಶಿಬಿರ ನಡೆಯುತಿತ್ತು. ಶಿಬಿರದ ಸಮಾರೋಪದ ಮೊದಲಿನ ದಿನದ ಸಂಜೆ ಐದು ಗಂಟೆಯ ಹೊತ್ತಿಗೆ ಅಲ್ಲಿನ ಸಾಂಸ್ಕøತಿಕ ವೇದಿಕೆಯಲ್ಲಿ ಚಂಡೆಯ ನಾದ ಕೇಳಿಬರಲಾರಂಬಿಸಿತು. ಅದರ ಹಿನ್ನಲೆಯಲ್ಲಿ ಭಾಗವತರ ಮನಸೆಳೆಯುವ ಧ್ವನಿ, ಮೃದಂಗದ ನಿನಾದ, ಯಕ್ಷ ನಾಟ್ಯಗಳೆಲ್ಲವೂ ಸೇರಿ ಹೊಸದೊಂದು ಸಂಭ್ರಮದ ವಾತಾವರಣ ಅಲ್ಲಿ ಸೃಷ್ಟಿಯಾಗಿತ್ತು.

ನಿಜ. ಆ ದಿನ ಹಕ್ಲಾಡಿಯ ಊರ ಪರವೂರ ಹತ್ತು ಗಣ್ಯರ, ಎಸ್‍ಡಿಎಮ್‍ಸಿ ಸದಸ್ಯರ ಸಹಕಾರದೊಂದಿಗೆ ಶಾಲೆಯಲ್ಲಿ ನಗರ ಯಕ್ಷ ಬಳಗ ಕೆಳಾರ್ಕಳ ಬೆಟ್ಟು ಉಡುಪಿ ಇವರಿಂದ ನಡುಮನೆ ಯಕ್ಷಗಾನ ಗಾಯನ ಮತ್ತು ಯಕ್ಷನಾಟ್ಯ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳಲ್ಲಿ ನಮ್ಮ ಮಹೋನ್ನತ ಸಾಂಸ್ಕøತಿಕ ಕಲೆಯ ಬಗೆಗೆ ಆಸಕ್ತಿ ಮತ್ತು ಅರಿವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಯಕ್ಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ರಾಮಾಯಣ ಮತ್ತು ಮಹಾಭಾರತದಲ್ಲಿ ಬರುವ ಬೇರೆ ಬೇರೆ ಪ್ರಸಂಗಗಳ ಪದ್ಯಗಳನ್ನು ಹಾಡುವ ನಡುಮನೆ ಯಕ್ಷಗಾಯನ ಎನ್ನುವ ಪ್ರಕಾರಕ್ಕೆ ನಾಟ್ಯ ಭಾಗವನ್ನು ಆಳವಡಿಸಿ ಕಳೆದ ಐದು ವರುಷಗಳಿಂದ ಹಲವಾರು ಕಡೆಗಳಲ್ಲಿ ಪ್ರದರ್ಶನವನ್ನು ನೀಡುತ್ತಾ ಬಂದಿರುವ ನಗರ ಯಕ್ಷ ಬಳಗದ 613ನೇ ಪ್ರದರ್ಶನ ಅದಾಗಿತ್ತು.

ಕಾರ್ಯಕ್ರಮದ ಮೊದಲಲ್ಲಿ ಶ್ರೀರಾಮ ಪಟಾಭಿಷೇಕ ಸಂದರ್ಭದ ಪನ್ನೀರ ಅಭಿಷೇಕ ಮತ್ತು ಮಾಯಾ ಮೃಗವತಿ ಸನ್ನಿವೇಶದ ನಾನು ಮೋಸ ನೀನು ಮೋಸ ಜಗವೇ ಮೋಸ ಎನ್ನುವ ಗಾಯನವನ್ನು ಪ್ರಸ್ತುತ ಪಡಿಸಲಾಯಿತು. ಚೆಂದದ ಭಾಗವತಿಕೆಯ ಜೊತೆಯಲ್ಲಿ ಮದ್ದಲೆ ಮತ್ತು ಚಂಡೆಯ ಜುಗಲ್ ಬಂದಿ ಗಾಯನಕ್ಕೆ ಮತ್ತಷ್ಟು ಮೆರುಗು ನೀಡಿತ್ತು. ಆ ಬಳಿಕ ಸಾಲ್ವ ಶೃಂಗಾರದ ಸಾಲ್ವ ಮತ್ತು ಅಂಬೆಯ ಸ್ವಯಂವರ ಸಂದರ್ಭವನ್ನು ಯಕ್ಷನಾಟ್ಯದ ಮೂಲಕ ತೆರೆದಿಡಲಾಯಿತು.

ಕಾಶಿಯ ರಾಜ ವಿಶ್ವನಾಥನ ಮಗಳಾದ ಅಂಬೆ ತನ್ನ ಗೆಳತಿಯರೊಂದಿಗೆ ವಿಹಾರದಲ್ಲಿ ತೊಡಗಿದ್ದ ಸಂದರ್ಭ ಅವಳನ್ನು ನೋಡಿದ ಸಾಲ್ವರಾಜನು ಮನ ಸೋತು ಅವಳನ್ನು ವಿಚಾರಿಸಿ ಮದುವೆಯಾಗುವಂತೆ ಕೇಳಿಕೊಳ್ಳುತ್ತಾನೆ. ಆದರೆ ಅಂಬೆಗೆ ಅವನ ಮೇಲೆ ಮನಸಾದರೂ ಕೂಡ ತನ್ನ ತಂದೆ ಈಗಾಗಲೇ ಸ್ವಯಂವರವನ್ನು ಏರ್ಪಡಿಸಿರುವ ಸುದ್ದಿಯನ್ನು ತಿಳಿಸಿ ತನಗೆ ಇಬ್ಬರು ತಂಗಿಯರೂ ಕೂಡ ಇರುವ ವಿಚಾರವನ್ನು ಅರುಹಿ ಜೊತೆಗೆ ತನ್ನ ಮನದಾಳವನ್ನು ಕೂಡ ತೆರೆದಿಡುತ್ತಾಳೆ. ಆಗ ಅಂಬೆಯನ್ನು ಮನವೊಲಿಸುವ ಮಾತನಾಡುವ ಸಾಲ್ವ ತಾನು ಸ್ವಯಂವರಕ್ಕೆ ಆಗಮಿಸಿ ಅಲ್ಲಿ ಗೆದ್ದು ಅಂಬೆಯನ್ನು ಖಂಡಿತ ಮದುವೆಯಾಗುತ್ತೇನೆ ಎಂದು ಸಿದ್ಧನಾಗಿ ಸ್ವಯಂವರಕ್ಕೆ ಹೋಗುವಲ್ಲಿಗೆ ಕತೆ ಮುಕ್ತಾಯಗೊಳ್ಳುತ್ತದೆ.

ಸಾಲ್ವನಾಗಿ ಸುರೇಂದ್ರ ಗಾಣಿಗ ಬಾರ್ಕೂರು ಗಮನ ಸೆಳೆದರೆ ಯಕ್ಷ ಮೇನಕೆ ಪ್ರಶಸ್ತಿ ವಿಜೇತ ತೆಂಕು ಹಾಗು ಬಡಗಿನ ಖ್ಯಾತಿಯ ಕಲಾವಿದ ಸಂತೋಷ್ ಕುಲಶೇಖರ್ ಅವರು ಅಂಬೆಯಾಗಿ ತನ್ನ ನೃತ್ಯ ಮಾತುಗಳಿಂದ ಆಕರ್ಷಣೆ ಹೆಚ್ಚಿಸಿದ್ದರು.ಈ ನಗರ ಯಕ್ಷ ಬಳಗದ ಮುಖ್ಯಸ್ಥರು ಮತ್ತು ಮಂದಾರ್ತಿ ಶ್ರೀ ದುರ್ಗಾ ಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳದ ಭಾಗವತರೂ ಆಗಿರುವ ನಗರ ಸುಬ್ರಮಣ್ಯ ಆಚಾರ್ ಅವರ ಭಾಗವತಿಕೆ ,ಮದ್ದಳೆಯಲ್ಲಿ ಯಲ್ಲಾಪುರದ ರಾಘವೇಂದ್ರ ಹೆಗ್ಗಡೆ ಮತ್ತು ಚಂಡೆಯಲ್ಲಿ ಬಸವ ಮುಂಡಾಡಿ ಇಡೀ ಯಕ್ಷ ಗಾಯನ ಮತ್ತು ನಾಟ್ಯಕ್ಕೊಂದು ಸಮರ್ಥ ಹಿನ್ನಲೆಯನ್ನು ನೀಡಿ ಕಳೆ ಹೆಚ್ಚಿಸಿದ್ದರು.

ಇಡೀ ಪ್ರದರ್ಶನ ಬಹಳ ದೊಡ್ಡದೆನ್ನಿಸುವ ಯಾವ ಗತ್ತು ಗೈರತ್ತುಗಳಿಲ್ಲದೆ ಸರಳ ಮತ್ತು ಸುಂದರವಾಗಿ ಯಕ್ಷಗಾನದ ಸವಿರುಚಿಯನ್ನು ಎನ್ನೆಸ್ಸೆಸ್ ಶಿಬಿರಾರ್ಥಿಗಳಿಗೆ ಸುಂದರವಾಗಿ ಉಣಬಡಿಸುವಲ್ಲಿ ಯಶಸ್ವಿಯಾಯಿತು. ಜೋರು ಮಳೆಯ ನಡುವೆಯೂ ಊರ ಪರವೂರಿನ ಹಲವಷ್ಟು ಯಕ್ಷಾಭಿಮಾನಿಗಳು ಈ ಪ್ರದರ್ಶನವನ್ನು ನೋಡಲು ಆಗಮಸಿದ್ದರು. ಇರುವ ಸಮಯದ ಅವಧಿಯಲ್ಲಿ ಇನ್ನೊಂದು ಪ್ರಸಂಗವನ್ನು ಅಭಿನಯಿಸಬಹುದಿತ್ತೇನೋ ಎನ್ನಿಸಿದ್ದು ಸುಳ್ಳಲ್ಲ.

ಒಟ್ಟಿನಲ್ಲಿ ಜೀವನ ಮೌಲ್ಯಗಳನ್ನು ಕಲಿಸುವ ಎನ್ನೆಸ್ಸೆಸ್ ಶಿಬಿರವೊಂದರಲ್ಲಿ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷಗಾನದಂತಹ ಕಲೆಯನ್ನು ಪ್ರದರ್ಶಿಸಲು ಅನುವು ಮಾಡಿಕೊಟ್ಟು ಅದಕ್ಕೆ ತಗಲುವ ವೆಚ್ಚವನ್ನು ಭರಿಸಿದ ಮತ್ತು ಪ್ರೋತ್ಸಾಹಿಸಿದ ಎಲ್ಲರೂ ಕೂಡ ಅಭಿನಂದನಾರ್ಹರು. ಒಟ್ಟಾರೆ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಎಂಜಾಯ್ ಮಾಡಿದರು.

   ವಿಶೇಷ ಲೇಖನ : ನರೇಂದ್ರ ಎಸ್ ಗಂಗೊಳ್ಳಿ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)