ಎಲ್ಲರ ಬದುಕಲ್ಲೂ ಬೆಳಕು ಚೆಲ್ಲುವ ಹಣತೆಗಳು ನಾವಾಗೋಣ.

1
435
dinetmedia

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ವಿಶೇಷ ವರದಿ : ದೀಪಾವಳಿ ಎಂದರೆ ಭಾರತೀಯರ ಪಾಲಿಗಂತೂ ಅದೊಂದು ಬಹಳ ದೊಡ್ಡ ಸಂಭ್ರಮ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋದಂತೆ ಪೂಜೆ ಪುರಸ್ಕಾರ ಸಂಪ್ರದಾಯ ಆಚರಣೆ ಮತ್ತು ಹಿನ್ನಲೆಗಳಲ್ಲಿ ಅಲ್ಪ ಸ್ವಲ್ಪ ವೈವಿಧ್ಯತೆಗಳಿದ್ದರೂ ಆಚರಣೆಯ ಮೂಲ ಆಶಯವಾದ ಕೆಟ್ಟದ್ದೆಲ್ಲವೂ ಪರಿಹಾರವಾಗಿ ಅಸುರ ಶಕ್ತಿಯ ನಾಶವಾಗಿ ಒಳ್ಳೆಯತನ ಉಳಿದುಕೊಳ್ಳಲಿ ಎಲ್ಲರ ಬದುಕು ಧರ್ಮ ಮತ್ತು ಸಂತೋಷದ ಬೆಳಕಿನಲ್ಲಿ ಸಾಗುತ್ತಿರಲಿ ಎನ್ನುವ ಆಶಯ ಮಾತ್ರ ಒಂದೇ ಆಗಿದೆ. ಹಿಂದೂ ಧರ್ಮದ ತಳಹದಿಯಲ್ಲೇ ಬೆಳೆದುಬಂದ ಸಿಖ್ ಬೌದ್ಧ ಮತ್ತು ಜೈನ ಧರ್ಮಿಯರಿಗೂ ಕೂಡ ದೀಪಾವಳಿ ಹಬ್ಬ ಪ್ರಮುಖವೇ ಆಗಿದೆ.

ಹಿಂದೂಗಳಲ್ಲಿ ಶ್ರೀಕೃಷ್ಣ ನರಕಾಸುರನನ್ನು ಸಂಹರಿಸಿದ ದಿನವೆಂದು ನರಕ ಚತುದರ್ಶಿ ಆಚರಿಸಿದರೆ. ಮತ್ತೊಂದೆಡೆ ಇದೇ ದಿನ ಶ್ರೀರಾಮ ರಾವಣನನ್ನು ಗೆದ್ದು ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಹಿಂತಿರುಗಿದ ಸಂಭ್ರಮದ ಹಿನ್ನೆಲೆಯಲ್ಲಿಯೂ ದೀಪಾವಳಿಯನ್ನು ಆಚರಿಸಲಾಗುತ್ತದೆ. ಬಲಿಪಾಡ್ಯಮಿಯ ಬಲಿ ವಾಮನರ ಕತೆ ತ್ಯಾಗಕ್ಕೆ ಪ್ರೇರಣೆ ನೀಡುವಂತಾದ್ದು..ಸಿಖ್ಖರಲ್ಲಿ ಅವರ ಆರನೆಯ ಧರ್ಮ ಗುರು ಹರಗೋವಿಂದಸಿಂಗ್ ಗ್ವಾಲಿಯಾರ್ ಕೋಟೆಯಲ್ಲಿ ಬಂಧಿತರಾಗಿದ್ದ 52 ರಾಜರನ್ನು ಬಿಡಿಸಿ ತಂದ ಸಂತೋಷದ ದಿನವಾಗಿ ದೀಪಾವಳಿ ಮಹತ್ವ ಪಡೆದಿದೆ. ಜೈನರಲ್ಲಿ ಕೊನೆಯ ತೀರ್ಥಂಕರ ಮಹಾವೀರ ಪಾವಾಪುರಿಯಲ್ಲಿ ಮೋಕ್ಷ ಹೊಂದಿದ ಕಾರಣಕ್ಕಾಗಿ ಕಾರ್ತಿಕ ಚತುದರ್ಶಿ ದಿನವಾಗಿ ಆಚರಿಸಲ್ಪಡುತ್ತದೆ. ಅವರಿಗೆ ಇದು ವರುಷದ ಆರಂಭವೂ ಹೌದು.

ದೀಪಾವಳಿಯಲ್ಲಿನ ಒಂದೊಂದು ಆಚರಣೆಗಳಿಗೂ ಒಂದೊಂದು ಅರ್ಥವಿದೆ.ಗ್ರಾಮೀಣ ಭಾಗಗಳಲ್ಲಂತೂ ಇದರ ಸೊಗಡೇ ಬೇರೆ. ಹಿಂದಿನ ದಿನ ಮನೆಯ ಹರಿ (ನೀರು ತುಂಬುವ ದೊಡ್ಡ ಹಂಡೆ)ಸೇರಿದಂತೆ ಇನ್ನಿತರ ನೀರು ತುಂಬಿಡುವ ಪರಿಕರಗಳನ್ನು ನೀಟಾಗಿ ಉಜ್ಜಿ ತೊಳೆದು ಹರಿಯ ಮೈಮೇಲೆ ಚಿತ್ತಾರಗಳನ್ನು ಬಿಡಿಸಿ ಅದಕ್ಕೆ ಹೂವಿನ ಮಾಲೆಯನ್ನು ಹಾಕಿ ಭಕ್ತಿ ಭಾವದೊಂದಿಗೆ ನೀರು ತುಂಬುವಲ್ಲಿ ವರುಷವಿಡೀ ನಮ್ಮೊಂದಿಗೆ ಇರುವ ನಮ್ಮ ನಿತ್ಯ ಜೀವನಕ್ಕೆ ಸಹಕರಿಸುವ ನಿರ್ಜೀವ ವಸ್ತುಗಳನ್ನೂ ನಮಿಸುವ ಒಳ್ಳೆಯತನ, ಸ್ವಚ್ಛತೆಯ ಶಿಸ್ತು ಎಲ್ಲವೂ ಗಮನಾರ್ಹವಾದುದು.

ಮರುದಿನ ನಸುಕಿನಲ್ಲಿಯೇ ಎದ್ದು ಇಡೀ ಮೈಗೆ ತೆಂಗಿನ ಎಣ್ಣೆಯನ್ನು ಪೂಸಿಕೊಂಡು ಸ್ವಲ್ಪ ಸಮಯ ಬಿಟ್ಟು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವ ಕ್ರಮ ದೇಹಾರೋಗ್ಯ ರಕ್ಷಣೆಯಲ್ಲಿ ಮಹತ್ತರವಾದದ್ದು. ಆ ಬಳಿಕದ ಪೂಜೆ, ಸಿಹಿತಿಂಡಿಯ ಉಪಹಾರ, ಹೊಸ ಬಟ್ಟೆಯ ಸಂಭ್ರಮ, ಕೌಟುಂಬಿಕ ಹರಟೆ, ಮಧ್ಯಾಹ್ನದ ಭೋಜನ, ರಾತ್ರಿಯಲ್ಲಿ ಪಟಾಕಿಗಳನ್ನು ಹಚ್ಚಿ ಸಂಭ್ರಮಿಸುವುದು ಎಲ್ಲವೂ ಕೂಡ ಮನಸ್ಸಿಗೆ ಮುದ ನೀಡುವ ಚಟುವಟಿಕೆಗಳೇ ಆಗಿವೆ.ದಿನದ ಬಳಿಕ ಗೋವನ್ನು ಸ್ನಾನ ಮಾಡಿಸಿ ಅವುಗಳನ್ನು ಶೃಂಗರಿಸಿ ಅವುಗಳಿಗೆ ಭೋಜನವನ್ನು ನೀಡುವ ಸಂಪ್ರದಾಯವಂತೂ ಅತ್ಯಂತ ಮನನೀಯವಾದದ್ದು. ನಮ್ಮೊಂದಿಗಿದ್ದು ನಮ್ಮ ಜೀವನದ ಅವಿಭಾಜ್ಯ ಅಂಗವೇ ಆಗಿ ಹೋಗಿರುವ ಮೂಕ ಪ್ರಾಣಿಗಳನ್ನು ಗೌರವಿಸುವ ಪ್ರೀತಿಸುವ ಕಾಳಜಿಯಿಂದ ಅವುಗಳ ಲಾಲನೆ ಪಾಲನೆ ಮಾಡುವ ಅದ್ಭುತವಾದ ಮಾನವೀಯತೆಯನ್ನು ಸ್ಫುರಿಸುವ ಈ ತೆರನಾದ ಆಚರಣೆಗಳು ನಿಜಕ್ಕೂ ಮನುಷ್ಯನಿಗೆ ಒಳ್ಳೆಯತನವನ್ನು ವಿನಯತೆಯನ್ನು ಭೋಧಿಸಿ ಆತನಲ್ಲಿ ಸಂಸ್ಕøತಿಯನ್ನು ಬೆಳೆಸುವಲ್ಲಿ ನೆರವಾಗುವುದಂತೂ ದಿಟ.

ಒಟ್ಟಿನಲ್ಲಿ ದೀಪಾವಳಿ ಎನ್ನುವುದು ಬರಿಯ ಬೆಳಕಿನ ಹಬ್ಬ ಮಾತ್ರವಲ್ಲ ಅದು ಮನುಷ್ಯ ಸಂಬಂಧಗಳನ್ನು ಬೆಸೆಯುವ ಹಬ್ಬ. ಮಾನವೀಯ ಮೌಲ್ಯಗಳನ್ನು ಭೋಧಿಸುವ ಹಬ್ಬ. ಬದುಕಿನ ಸಾರ್ಥಕತೆಯನ್ನು ಪ್ರೀತಿ ವಿಶ್ವಾಸ ಮಾತುಕತೆಗಳ ಮೂಲಕ ಮತ್ತಷ್ಟು ಹೆಚ್ಚಿಸಲು ಕಾರಣವಾಗುವ ಹಬ್ಬ. ಇದು ಮನೆಮನಗಳ ಸಂಭ್ರಮದ ಹಬ್ಬ. ಇಂತಹ ಹಬ್ಬ ನಮ್ಮದೆಂದು ಹೇಳಲು ಹೆಮ್ಮೆಪಡಬೇಕಿದೆ.

ಬಹಳಷ್ಟು ಸಲ ಯಾಂತ್ರೀಕೃತವೆನ್ನಿಸುವ ಈ ಬದುಕಿನ ಜಂಜಾಟಗಳ ನಡುವೆ ತಂಗಾಳಿಯಂತೆ ಬರುವ ದೀಪಾವಳಿಯ ಸಡಗರದಲ್ಲಿ ನಾವು ಯೋಚಿಸಲೇ ಬೇಕಾದ ಹಲವಾರು ಸಂಗತಿಗಳನ್ನು ಈ ಸಂದರ್ಭದಲ್ಲಿ ಒಮ್ಮೆ ಮೆಲುಕು ಹಾಕುವುದೊಳ್ಳೆಯದು ಎನ್ನಿಸುತ್ತದೆ.


ಮೊದಲನೆಯದಾಗಿ ದೀಪಾವಳಿಯ ಶುಭಾಶಯಗಳನ್ನು ಕೋರುವಾಗ ದಿವಾಲಿ ಅಥವಾ ದಿವಾಳಿ ಎಂದು ದಯವಿಟ್ಟು ಬಳಸಬೇಡಿ. ದೀಪಗಳ ಆವಳಿ (ಸಾಲು) ಎಂದರೆ ದೀಪಾವಳಿ.ಅದರ ಅರ್ಥವನ್ನು ಮನಗಂಡು ಸರಿಯಾಗಿ ಬಳಸಿ.


ದೀಪಾವಳಿಯ ಸಂದರ್ಭಗಳಲ್ಲಿ ಪಟಾಕಿ ಬಳಸುವುದು ಮಾಮೂಲಿ. ಆದರೆ ಬಳಸುವಾಗ ಸ್ವಲ್ಪ ಎಚ್ಚರಿಕೆ ಇರಲಿ ಮತ್ತು ಬಳಕೆಯಲ್ಲಿಯೂ ಮಿತಿ ಇರಲಿ. ಪಟಾಕಿ ಹಚ್ಚುವುದು ಎರಡು ಮನೆಗಳ ಅಥವಾ ಮತ ಧರ್ಮಗಳ ನಡುವಿನ ಪ್ರತಿಷ್ಠೆಯ ಪ್ರಶ್ನೆ ಎಂದಿಗೂ ಆಗಬಾರದು. ನಿಮಗೆ ಗೊತ್ತಿರಲಿ. ಬಹಳ ದೊಡ್ಡ ಶಬ್ದಗಳನ್ನು ಉಂಟು ಮಾಡುವ ಪಟಾಕಿಗಳ ಬಳಕೆ ನಮ್ಮ ಮನೆಗಳಲ್ಲಿನ ಸಾಕು ಪ್ರಾಣಿಗಳ ಜೊತೆಜೊತೆಗೆ ಸುತ್ತಲಿನ ಪರಿಸರದಲ್ಲಿನ ಇತರ ಪ್ರಾಣಿಗಳನ್ನು ಬಹಳಷ್ಟು ಬೆಚ್ಚಿ ಭಯಬೀಳಿಸುತ್ತದೆ. ಅವುಗಳ ಶಬ್ದ ಗ್ರಹಿಕೆಯ ಸಾಮಥ್ರ್ಯ ಮನುಷ್ಯರಿಗಿಂತ ಬಹಳ ಉನ್ನತಮಟ್ಟದಲ್ಲಿರುವುದರಿಂದ ಪಟಾಕಿ ಸಿಡಿದಾಗ ನಮಗೆ ಕೇಳುವ ಶಬ್ದದ ಹತ್ತಿಪ್ಪತ್ತು ಪಟ್ಟು ಹೆಚ್ಚು ಅವುಗಳಿಗೆ ಕೇಳುತ್ತದೆ. ಹಲವು ಬಾರಿ ನಾವುಗಳೇ ಶಬ್ದವನ್ನು ಕೇಳಲಾಗದೆ ಕಿವಿಮುಚ್ಚಿಕೊಳ್ಳುವಾಗ ಹಾಗೆ ಮಾಡಲಾಗದ ಅಸಹಾಯಕ ಮೂಕ ಪ್ರಾಣಿಗಳ ಪರಿಸ್ಥಿತಿ ಹೇಗಿದ್ದಿರಬಹುದು ಆಲೋಚಿಸಿ.


ಪಟಾಕಿ ಹಚ್ಚುವ ಮುನ್ನ ವಹಿಸಬೇಕಾದ ಮುಂಜಾಗರೂಕತೆಯ ಕ್ರಮಗಳ ಬಗೆಗೆ ಗಮನವಿರಲಿ. ಅಕ್ಕಪಕ್ಕದವರೆದುರು ಬಾರೀ ಧೈರ್ಯವಂತನೆಂಬ ಫೋಸು ಕೊಡಲು ಹೋಗಿ ಅನಾಹುತಗಳನ್ನು ಮಾಡಿಕೊಳ್ಳಬೇಡಿ. ಯಾಕೆಂದರೆ ನೀವು ಧೈರ್ಯವಂತರೆಂದು ನಿಮಗೆ ಗೊತ್ತು ಆದರೆ ಪಟಾಕಿಗಳಿಗೆ ಗೊತ್ತಿಲ್ಲ.


ರಸ್ತೆ ಬದಿಗಳಲ್ಲಿನ ವ್ಯಾಪಾರಿಗಳಿಂದ ವಸ್ತುಗಳನ್ನು ಖರೀದಿಸುವಾಗ ಅನವಶ್ಯಕ ಎನ್ನಿಸುವಂತಹ ಚೌಕಾಶಿಗಳನ್ನು ಖಂಡಿತಾ ಮಾಡಬೇಡಿ. ಯಾಕೆಂದರೆ ಆ ಬಡ ವ್ಯಾಪಾರಿಗಳಿಗೂ ಮನೆಯಲ್ಲಿ ಹೆಂಡತಿ ಮಕ್ಕಳು ನೆಂಟರು ಇರುತ್ತಾರೆ. ಆ ದಿನದ ದೀಪಾವಳಿಯನ್ನು ಅವರೂ ಕೂಡ ಭರ್ಜರಿಯಗಿ ಅಚರಿಸಬೇಕೆಂದುಕೊಂಡಿರುತ್ತಾರೆ. ನಿಮ್ಮ ಜಿಪುಣತನ ಅವರ ಸಂಭ್ರಮಕ್ಕೆ ಭಂಗ ತಾರದಿರಲಿ.


ನಾವು ಎಷ್ಟು ಕ್ಯಾಂಡಲ್ ಅಥವಾ ಹಣತೆಗಳನ್ನು ಹಚ್ಚಿ ರಾತ್ರಿಯನ್ನು ಬೆಳಗಿನ ಹಾಗೆ ಮಾಡಿದೆವು ಎನ್ನುವುದಕ್ಕಿಂತ ಈ ಹಬ್ಬದ ದಿನ ನಮ್ಮಿಂದಾಗಿ ಎಷ್ಟು ಜನರ ಮನಸ್ಸುಗಳಲ್ಲಿ ಸಂತೋಷದ ಬೆಳಕು ಹರಿಯಿತು ಎನ್ನುವುದೇ ಮುಖ್ಯ. ಹಾಗಾಗಿ ನಮ್ಮ ನಡವಳಿಕೆಗಳು ಎಲ್ಲರ ಮನಸ್ಸಿನಲ್ಲೂ ಸಂತೋಷ ಉಂಟು ಮಾಡುವಂತಿರಬೇಕು. ಹಬ್ಬದ ಹೆಸರಿನಲ್ಲಿ ನಡೆಸುವ ಕುಡಿತ, ಜೂಜು,ಅಶ್ಲೀಲ ನೃತ್ಯ, ಅಸಂಬದ್ಧ ಆಟಗಳು, ಸ್ಪರ್ಧೆಗಳು ಎಲ್ಲವೂ ಕೂಡ ನಾವು ಹಬ್ಬಕ್ಕೆ ಮಾಡುವ ಅಪಚಾರವೇ ಆಗಿದೆ.


• ಪಕ್ಕದಲ್ಲಿ ಬಡವರನ್ನಿಟ್ಟುಕೊಂಡು ಅವರನ್ನು ಕಡೆಗಣಿಸಿ ತಮ್ಮ ಶ್ರೀಮಂತಿಕೆಯನ್ನು ಮೆರೆಸುವ ಅದ್ದೂರಿತನದ ಆಚರಣೆಗಳು ಖಂಡಿತಾ ಖಂಡನೀಯ. ಅವರನ್ನೆಲ್ಲಾ ಒಳಗೊಂಡೇ ಹಬ್ಬಗಳನ್ನು ಆಚರಿಸಿ ಅವರ ಮುಖದಲ್ಲೂ ನಗುವಿನ ಗೆರೆಗಳು ಮೂಡುವಂತಾದರೆ ಆಗ ದೀಪಾವಳಿಯ ನಿಜವಾದ ಆಶಯ ಈಡೇರಿದಂತೆ.

ಹಬ್ಬ ಎನ್ನುವುದು ಅಹಮಿಕೆ, ಆಡಂಬರ, ಅದ್ದೂರಿತನ ಅಥವಾ ಸ್ವಪ್ರತಿಷ್ಠೆಯ ಪ್ರದರ್ಶನಗಳಲ್ಲವೇ ಅಲ್ಲ. ನಮ್ಮಲ್ಲಿನ ಎಲ್ಲಾ ಅಂತಹ ಅಸುರೀ ಗುಣಗಳನ್ನು ತೊರೆದು ಮಾನವೀಯತೆಯ ಕಂಪನ್ನು ಆಳವಡಿಸಿಕೊಂಡು ಎಲ್ಲರ ಬದುಕಲ್ಲೂ ಬೆಳಕು ಚೆಲ್ಲುವ ಹಣತೆಗಳು ನಾವಾಗೋಣ ಎನ್ನುವುದು ಆಶಯ.


      ಬರಹ : ನರೇಂದ್ರ ಎಸ್ ಗಂಗೊಳ್ಳಿ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)