ಕೃಷ್ಣನೂರಿನಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ…ಇಂದು ಅರ್ಘ್ಯ ಪ್ರಧಾನ

0
110

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಉಡುಪಿ: ನಾಡಿನೆಲ್ಲೆಡೆ ಕಳೆದ ತಿಂಗಳು ಶ್ರೀಕೃಷ್ಣನ ಜನ್ಮಾಷ್ಟಮಿಯನ್ನು ಆಚರಿಸಲಾಗಿದೆ. ಆದರೆ ಕೃಷ್ಣನೂರು ಉಡುಪಿಯಲ್ಲಿ ಮಾತ್ರ ಇಂದು ಮತ್ತು ನಾಳೆ ಶ್ರೀಕೃಷ್ಮಜನ್ಮಾಷ್ಟಮಿ ಆಚರಿಸಲಾಗುತ್ತಿದೆ.

ಕಡೆಗೋಲು ಕೃಷ್ಣನ ಆರಾಧನೆಗೆ ರಥಬೀದಿ ಸಿದ್ಧವಾಗಿದೆ. 13ರಂದು ಕೃಷ್ಣ ಜಯಂತಿ ಉತ್ಸವ ನಡೆದರೆ, ನಾಳೆ ಶ್ರೀ ಕೃಷ್ಣ ಲೀಲೋತ್ಸವ ನಡೆಯಲಿದೆ. ಭಕ್ತರಿಗೆ ಪ್ರಸಾದವಾಗಿ ಹಂಚುವುದಕ್ಕಾಗಿ ಉಂಡೆ-ಚಕ್ಕುಲಿ ಸಿದ್ಧಗೊಂಡಿದ್ದು, ಇಂದು ರಾತ್ರಿ 12.34 ಕ್ಕೆ ಶ್ರೀ ಕೃಷ್ಣನಿಗೆ ಅರ್ಘ್ಯ ಪ್ರಧಾನ ನಡೆಯಲಿದೆ.

ಅಷ್ಟ ಮಠಗಳ ರಥಬೀದಿಯಲ್ಲಿ ಕೃಷ್ಣನ ಪುಜಾ ಸಂಭ್ರಮಕ್ಕೆ ಸಿದ್ಧತೆ ಆರಂಭವಾಗಿದೆ. ರಥಬೀದಿಯಲ್ಲಿ ಮರದ ಗುರ್ಜಿಗಳನ್ನು ಹಾಕಿ ಮೊಸರು ಕುಡಿಕೆಗೆ ಸಿದ್ಧತೆಯಾಗಿದೆ. ಇನ್ನು ಎರಡು ದಿನ ಉಡುಪಿ ನಂದಗೋಕುಲವಾಗಿ ಕಂಗೊಳಿಸಲಿದ್ದು, ಹರಿ ಭಕ್ತಿಯಲ್ಲಿ ಭಕ್ತಜನ ಮಿಂದೇಳಲಿದ್ದಾರೆ.

ಹೌದು, ಆಚಾರ್ಯ ಮಧ್ವರಿಂದ ಸ್ಥಾಪಿತ ಕೃಷ್ಣನಿಗೆ ಎಂಟು ಶತಮಾನಗಳ ಇತಿಹಾಸವಿದೆ. ಕೃಷ್ಣ ದೇವರ ಮಠದಲ್ಲಿ ಪರಂಪರಾಗತವಾಗಿ ಕೃಷ್ಣಜನ್ಮಾಷ್ಟಮಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಹೀಗಾಗಿ ಇತರೆ ಕಡೆ ಕಳೆದ ತಿಂಗಳು ಶ್ರಾವಣ ಮಾಸದ ಅಷ್ಟಮಿಯನ್ನೇ ಕೃಷ್ಣಾಷ್ಟಮಿ ಎಂದು ಆಚರಿಸಲಾಗಿದೆ. ಉಡುಪಿಯಲ್ಲಿ ಸೌರಮಾನದ ಸಿಂಹ ಮಾಸದ ಅಷ್ಟಮಿಯಂದೇ ಕೃಷ್ಣ ಜಯಂತಿಯನ್ನು ಆಚರಿಸುವ ಪದ್ಧತಿ ಇದೆ. ಹೀಗಾಗಿ ಸಿಂಹ ಮಾಸದ ಕೃಷ್ಣ ಪಕ್ಷದ 13ನೇ ತಾರೀಖು ಕೃಷ್ಣ ಜಯಂತಿ ಆಚರಿಸುವುದಕ್ಕೆ ಸಿದ್ಧತೆ ನಡೆಯುತ್ತಿದೆ. ನಾಳೆ ಕೃಷ್ಣ ಜನನದ ಸಂಭ್ರಮಾಚರಣೆ ಅಂಗವಾಗಿ ವಿಟ್ಲಪಿಂಡಿ ಉತ್ಸವ ಜರುಗಲಿದೆ.

ವಿಟ್ಲಪಿಂಡಿ ದಿನ ಬರುವ ಭಕ್ತರಿಗೆ ಹಂಚುವುದಕ್ಕಾಗಿ ಮಠದ ಪಾಕ ಶಾಲೆಯಲ್ಲಿ 1ಲಕ್ಷದ 50ಸಾವಿರ ಚಕ್ಕುಲಿ ಸಿದ್ಧವಾಗುತ್ತಿವೆ. ನಾಲ್ಕೈದು ಬಗೆಯ 75ಸಾವಿರ ಉಂಡೆಗಳು ಸಿದ್ಧಗೊಂಡಿವೆ. ಕೃಷ್ಣನಿಗೂ ಅರ್ಪಣೆ ಮಾಡಲು ಬಗೆಬಗೆಯ ಉಂಡೆ ಚಕ್ಕುಲಿಗಳನ್ನು ತಯಾರಿಸಲಾಗಿದೆ. 32 ಸಾವಿರ ಶಾಲಾ ಮಕ್ಕಳಿಗೆ ಉಂಡೆ ಚಕ್ಕುಲಿ ಕೃಷ್ಣನ ಪ್ರಸಾದ ರೂಪದಲ್ಲಿ ವಿತರಣೆಯಾಗಲಿವೆ.

ಇಂದು ಮಧ್ಯರಾತ್ರಿ ಪರ್ಯಾಯ ಶ್ರೀಗಳು ಅರ್ಘ್ಯ ಪ್ರಧಾನ ಮಾಡುವ ಮೂಲಕ ಶ್ರೀಕೃಷ್ಣನನ್ನು ಬರಮಾಡಿಕೊಂಡರೆ, ವಿಟ್ಲಪಿಂಡಿಯ ದಿನ ಭಕ್ತಜನ ಗೊಲ್ಲರ ವೇಷ ಧರಿಸಿ ಮೊಸರು ಕುಡಿಕೆ ಒಡೆಯುವುದರೊಂದಿಗೆ ಶ್ರೀ ಕೃಷ್ಣನ ಜನನದ ಸಂಭ್ರಮಾಚರಣೆ ನಡೆಯುತ್ತದೆ.

ಉಡುಪಿ ಅಷ್ಟಮಿ ಧಾರ್ಮಿಕ ಆಚರಣೆಗೆ ಮಾತ್ರ ಸೀಮಿತವಾಗಿರದೇ ಕಲಾರಾಧನೆಯ ಮೂಲಕವೂ ಕೃಷ್ಣನನ್ನು ಪೂಜಿಸಲಾಗುತ್ತೆ. ದೇಶದ ನಾನಾ ಭಾಗದಿಂದ ಕೃಷ್ಣನ ಭಕ್ತರು ಸಾಗರೋಪಾದಿಯಲ್ಲಿ ಉಡುಪಿಗೆ ಹರಿದು ಬರುತ್ತಿದ್ದಾರೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

dinetmedia