ರಸ್ತೆ ದುರಸ್ತಿಗೊಳಿಸುವ ಕುರಿತು ವಿನೂತನ ಪ್ರತಿಭಟನೆ

1
160

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

ಕೋಟ: ಇಲ್ಲಿನ ಸಮೀಪದ ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಗಿಳಿಯಾರು ಪ್ರಮುಖ ಸಂಪರ್ಕ ರಸ್ತೆಯಲ್ಲಿ ಬೃಹತ್ ಹೊಂಡಗಳು ಉಂಟಾಗಿದ್ದು, ಈ ಹೊಂಡಗಳನ್ನು ಮುಚ್ಚುವ ಅಥವಾ ದುರಸ್ತಿಗೊಳಿಸುವ ಕುರಿತು ಯಾವುದೇ ಕ್ರಮವನ್ನು ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಇಲಾಖೆಗಳು ಗಮನಹರಿಸದೇ ಇರುವುದನ್ನು ವಿರೋಧಿಸಿ ಗಿಳಿಯಾರು ಗ್ರಾಮಸ್ಥರು ರಸ್ತೆ ಮೇಲೆ ಬಾಳೆಗಿಡ ನೆಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

ಕೋಟದಿಂದ ಬೇಳೂರಿಗೆ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು, ಈ ರಸ್ತೆಯ ಅಲ್ಲಲ್ಲಿ ಬೃಹತ್ ಹೊಂಡಗಳು ಸೃಷ್ಟಿಯಾಗಿ ವಾಹನ ಸಂಚಾರವೆನ್ನುವುದು ದುಸ್ತರವಾಗಿದೆ. ಇಲ್ಲಿನ ಸಮಸ್ಯೆ ಕುರಿತು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯ ರಾಘವೇಂದ್ರ ಕಾಂಚನ್ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದ್ದರೂ ಅವರು ಈ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ಸಾರ್ವಜನಿಕರ ಆಕ್ರೋಶ ಕೋಟ ಗ್ರಾಮ ಪಂಚಾಯತ್ ವಿರುದ್ಧ ಪ್ರತಿಭಟನಾ ಘೋಷಣೆ ಕೂಗಿದ ಸಾರ್ವಜನಿಕರು ತಕ್ಷಣ ಈ ರಸ್ತೆಗೆ ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಿ, ಇಲ್ಲಿನ ಅವ್ಯವಸ್ಥೆಯನ್ನು ದುರಸ್ಥಿಗೊಳಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭ ಮಾತನಾಡಿದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ತ್ರಿಶೂಲ್ ಬಳಗದ ಅಶೋಕ್ ಶೆಟ್ಟಿ ಮಾತನಾಡಿ, ನಾವು ಈ ರಸ್ತೆಯ ಬಗ್ಗೆ ಸಾಕಷ್ಟು ಬಾರಿ ಲಿಖಿತವಾಗಿ ಮತ್ತು ಮೌಖಿಕವಾಗಿ ಮನವಿಯನ್ನು ಮಾಡಿದ್ದೇವೆ. ಆದರೆ ಇಲ್ಲಿಯವರೆಗೂ ಯಾರೂ ಕೂಡ ಈ ಬಗ್ಗೆ ಗಮನಹರಿಸಿಲ್ಲ. ಇವತ್ತು ನಾವು ಪ್ರತಿಭಟನೆ ಮೂಲಕ ಜನಪ್ರತಿನಿಧಿಗಳನ್ನು ಎಚ್ಚರಿಸುವ ಕೆಲಸವನ್ನ ಮಾಡುತ್ತಿದ್ದೇವೆ. ಈ ಎಚ್ಚರಿಕೆಗೂ ಬಗ್ಗದಿದ್ದಲ್ಲಿ ನಾವು ಉಗ್ರಪ್ರತಿಭಟನೆಯನ್ನು ಮಾಡುತ್ತೇವೆ. ಅದು ಹೇಗೆಂದರೆ ನಾವು ಕರಸೇವೆ ಮೂಲಕ ಈ ರಸ್ತೆಯನ್ನ ದುರಸ್ತಿ ಮಾಡುತ್ತೇವೆ. ಸಾರ್ವಜನಿಕರು ರಸ್ತೆಯನ್ನ ದುರಸ್ತಿಗೊಳಿಸಿದ್ದೇ ಆದ್ದಲ್ಲಿ ಅದು ಜನಪ್ರತಿನಿಧಿಗಳಿಗೆ ನಾಚಿಕೇಗೇಡಿನ ಸಂಗತಿ. ಸಾರ್ವಜನಿಕರಿಂದ ಕೆಲಸ ಮಾಡುತ್ತೇನೆಂದು ಓಟು ಪಡೆದು ಗೆದ್ದು ಕನಿಷ್ಟ ರಸ್ತೆ ಮಣ್ಣನ್ನು ಹಾಕುವ ಕೆಲಸವನ್ನೂ ಮಾಡಲು ಸಾಧ್ಯವಿಲ್ಲವೆಂದಾದಲ್ಲಿ ಜನಪ್ರತಿನಿಧಿಗಳಿಗೆ ನಾಚಿಕೆಗೇಡಿನ ಸಂಗತಿಯಾಗಿದೆ. ಇನ್ನಾದರೂ ಈ ರಸ್ತೆಗೆ ತಾತ್ಕಾಲಿಕ ವ್ಯವಸ್ಥೆಯನ್ನಾದರೂ ಮಾಡಬೇಕಾಗಿ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಸ್ ಸಿಬ್ಬಂದಿಯೋರ್ವರು ಮಾತನಾಡಿ, ಈ ರಸ್ತೆಯೆನ್ನುವುದು ಕುಲಗೆಟ್ಟುಹೋಗಿದೆ. ವಯಸ್ಸಾದವರು ಬಸ್ಸಿನಲ್ಲಿ ಬರುವಾಗ ಬಹಳಷ್ಟು ಸಮಸ್ಯೆಗಳಾಗುತ್ತದೆ. ಘನವಾಹನಗಳು ಬರುವ ಸಂದರ್ಭ ಬೈಕ್ ಸವಾರರು ಬದಿಗೆ ಹೋಗಲು ಸಾಧ್ಯವಿಲ್ಲ. ಮತ್ತು ತುಂಬಾ ಬದಿಗೆ ಹೋದಲ್ಲಿ ಅವರು ರಸ್ತೆ ಮೇಲಿನ ಹೊಂಡಕ್ಕೆ ಬೀಳುವ ಸಾಧ್ಯತೆಗಳಿದೆ. ಈ ರಸ್ತೆಯಲ್ಲಿ ಸಂಚರಿಸುವುದು ಬಹಳಷ್ಟು ದುಸ್ತರವಾಗಿದೆ. ಮಳೆಗಾಲದಲ್ಲಿ ನೀರು ತುಂಬಿಕೊಂಡ ಸಂದರ್ಭ ಎಲ್ಲಿ ಬೃಹತ್ ಹೊಂಡಗಳಿವೆ ಎನ್ನುವುದು ಗೊತ್ತಾಗುವುದಿಲ್ಲ. ಆದ್ದರಿಂದ ತಕ್ಷಣ ಈ ರಸ್ತೆಯ ಹೊಂಡವನ್ನು ಮುಚ್ಚಲು ತುರ್ತು ಕ್ರಮವನ್ನು ಕೈಗೊಳ್ಳಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ಸಾಮಾಜಿಕ ಹೋರಾಟಗಾರ ಗಿರೀಶ್ ನಾಯಕ್, ವಿಜಯ್ ಶೆಟ್ಟಿ, ಅರುಣ್ ಶೆಟ್ಟಿ ಪಡುಮನೆ, ಕಿರಣ್ ಆಚಾರ್ಯ, ವಿನಯ್ ಪುತ್ರನ್, ಶಶಿಧರ್, ಸಂದೇಶ್ ಮನಿಷ್, ವಿಕಾಸ್ ಶರತ್ ಆಚಾರ್ಯ, ವಸಂತ್ ಗಿಳಿಯಾರ್ ಮೊದಲಾದವರು ಉಪಸ್ಥಿತರಿದ್ದರು.

ವರದಿ : ರವೀಂದ್ರ ಕೋಟ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

dinetmedia