ಶನಿವಾರ ಸಂಜೆಯಿಂದ ಸುರಿದ ಭಾರಿ ಮಳೆಗೆ ಮುಳುಗಡೆಯಾದ ಬೈಂದೂರಿನ ಗದ್ದೆಮನೆ

0
266

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (1) ಅಸಮ್ಮತ (0) ಖಂಡಿಸುವೆ (2) ಅಭಿಪ್ರಾಯವಿಲ್ಲ (0)

ಬೈಂದೂರು ಜು. 02 : ತಾಲೂಕಿನಲ್ಲಿ ಮಳೆ ಬಿರುಸುಗೊಂಡಿದ್ದು ಬೈಂದೂರಿನಲ್ಲಿ ಕಳೆದೆರಡು ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದು ತಗ್ಗು ಪ್ರದೇಶಗಳು ಮುಳುಗಡೆಯ ಭೀತಿ ಎದುರಿಸುತ್ತಿವೆ.

ತಗ್ಗು ಪ್ರದೇಶದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಸಮೀಪದ ಮನೆಯೊಂದು ಪ್ರತಿ ವರ್ಷದಂತೆ ಈ ವರ್ಷವು ನಿರಂತರ ಮಳೆಯಿಂದಾಗಿ ಮುಳುಗಿ ಹೋಗಿದೆ. ಇಲ್ಲಿನ ಗೆದ್ದೆಮನೆ ಲಕ್ಷ್ಮೀ ದೇವಾಡಿಗರ ಮನೆ ಹೆದ್ದಾರಿಗಿಂತ ಸ್ವಲ್ಪ ತಗ್ಗು ಪ್ರದೇಶದಲ್ಲಿದ್ದು ಅಕ್ಕಪಕ್ಕದ ನೀರು ಸರಾಗವಾಗಿ ಹರಿದು ಹೋಗದೆ ತಗ್ಗು ಪ್ರದೇಶಕ್ಕೆ ಹರಿದು ಬಂದು ಮನೆಯೊಳಗೆ ನುಗ್ಗಿದ್ದು ಮನೆಯಲ್ಲಿ ವಾಸ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಭಾರಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು ಐ.ಆರ್.ಬಿ ಅಧಿಕಾರಿಗಳು ಹೆದ್ದಾರಿಯ ಅಕ್ಕಪಕ್ಕದಲ್ಲಿ ಎತ್ತರದ ಚರಂಡಿ ನಿರ್ಮಾಣ ಮಾಡಿದ್ದು ತಗ್ಗುಪ್ರದೇಶದ ನೀರು ಹರಿದುಹೋಗದೆ ಮನೆ ಸಂಪೂರ್ಣ ಮುಳುಗಡೆಯಾಗಿದ್ದು ಮನೆಯೊಳಗೆ ನೀರಿನ ಹೊಳೆ ನಿರ್ಮಾಣವಾಗಿದೆ. ಚರಂಡಿ ವ್ಯವಸ್ತೆ ಇನ್ನು ಸಮರ್ಪಕವಾಗಿ ಸಂಪೂರ್ಣವಾಗದೆ ಇರುವುದರಿಂದ ಅಲ್ಲಲ್ಲಿ ಪ್ರತ್ಯೇಕವಾಗಿ ಚರಂಡಿ ಅಕ್ಕಪಕ್ಕದಲ್ಲಿ ನೀರು ಹೋಗಲು ತಾತ್ಕಾಲಿಕ ವ್ಯವಸ್ಥೆ ಮಾಡಿದ್ದರು ಕೂಡ ನೀರು ಬೈಂದೂರು ಬಸ್ಟಾಂಡ್ನಿಂದ ಮುಂದಕ್ಕೆ ಹೋಗುತ್ತಿಲ್ಲ.

ಇಲ್ಲಿಂದ ಮುಂದಕ್ಕೆ ಬೈಪಾಸ್ ತನಕ ಕಡಿದು ಕೊಟ್ಟರೆ ಸ್ವಲ್ಪ ಮಟ್ಟಿಗೆ ನೀರು ಸರಾಗವಾಗಿ ಹರಿದುಹೋಗಬಹುದೇನೊ… ಆದರೂ ಕೂಡ ನಿರಂತರ ಮಳೆ ಸುರಿದರೆ ಪ್ರತಿ ಭಾರಿ ಕೂಡ ಮನೆ ಮುಳುಗಡೆಯ ಭೀತಿಯಂತು ಇದ್ದೆ ಇದೆ. ಪ್ರತಿವರ್ಷ ಇದೆ ಸಮಸ್ಯೆ ಎದುರಿಸುತ್ತಿರುವ ಈ ಬಡ ಕುಟುಂಬ ಆತಂಕದಲ್ಲಿದೆ. ಮುಂದೆನು ಮಾಡುವುದೆಂದು ದಿಕ್ಕು ತೋಚದೆ ಕಂಗಾಲಾಗಿ ಕುಳಿತಿರುವ ಈ ಬಡ ಕುಟುಂಬ ಇದೀಗ ಅತಂತ್ರ ಸ್ಥಿತಿಯಲ್ಲಿದೆ.

ಸ್ಥಳಿಯ ಪಂಚಾಯತ್ ಹಾಗೂ ಸಂಭಂದಪಟ್ಟ ಅಧಿಕಾರಿಗಳು ಈ ಬಡ ಕುಟುಂಬದ ನೇರವಿಗೆ ಬರಬೇಕಾಗಿದ್ದು ಸಧ್ಯದ ಪರಿಸ್ಥಿತಿಯಲ್ಲಿ ತಾತ್ಕಾಲಿಕ ವ್ಯೆವಸ್ಥೆ ಕಲ್ಪಿಸಿ ಸರಾಗ ನೀರು ಹೋಗಲು ಅನುವು ಮಾಡಿಕೊಡಬೇಕಿದೆ. ಜೋತೆಗೆ ಈ ಭಾಗದ ಸಮಾಜ ಸೇವಕರು, ಸಮಾಜದ ಮುಖಂಡರು ಸ್ಥಳಿಯ ರಾಜಕಾರಣಿಗಳು ತುರ್ತಾಗಿ ಮಾನವೀಯ ನೆರವು ನೀಡಬೇಕಿದೆ.

ಇನ್ನು ಯಡ್ತರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೈಂದೂರು ಪೇಟೆಯ ಚರಂಡಿಗಳು ಹೂಳು ತುಂಬಿ ನೀರು ಹೋಗಲು ಸ್ವಲ್ಪವು ಜಾಗವೆ ಇಲ್ಲದಾಗಿರುವುದು ವಿಪರ್ಯಾಸ! ಈ ಹೂಳು ತುಂಬಿದ ಚರಂಡಿಗಳ ಮೇಲೆ ಗೂಡಂಗಡಿಗಳು ನಿರ್ಮಾಣವಾಗಿದ್ದು ಸ್ವಚ್ಚ ಭಾರತ ಸ್ವಚ್ಚ ಭಾರತ’ ಎಂದು ಬಾಯಿಬಡಿದುಕೊಳ್ಳುತ್ತಿರುವ ಪಂಚಾಯಿತಿ ಇಲ್ಲಿನ ಹೂಳೆತ್ತದೆ ಕಣ್ಣುಮುಚ್ಚಿ ಕುಳಿತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡಾರಾ..? ಕಾದು ನೋಡಬೇಕಾಗಿದೆ.

ವರದಿ : ರವಿರಾಜ್ ಬೈಂದೂರು

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (1) ಅಸಮ್ಮತ (0) ಖಂಡಿಸುವೆ (2) ಅಭಿಪ್ರಾಯವಿಲ್ಲ (0)

dinetmedia